ಡಾ. ಕೆ. ಪುಟ್ಟಸ್ವಾಮಿ ಅವರ ‘ಸಿನಿಮಾಯಾನ’ ಪುಸ್ತಕಕ್ಕೆ ’ಸ್ವರ್ಣ ಕಮಲ’ ಉತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ ಸಂದಿದೆ.

ಇದು ಚಲನಚಿತ್ರರಂಗದ ಅಧಿಕೃತ ಇತಿಹಾಸವಲ್ಲ. ವಸ್ತುನಿಷ್ಠ ವರದಿಯೂ ಅಲ್ಲ…. ನಾನು ನೋಡಿದ, ಓದಿದ, ಕೇಳಿದ, ಅಧ್ಯಯನದಿಂದ ಕಂಡುಕೊಂಡ ಒಂದು ರಸಯಾತ್ರೆ ಮಾತ್ರ; ಚರಿತ್ರೆ ಅಲ್ಲ ಎಂದು ಈ ಸಿನಿಮಾಯಾನದ ಕತರ್ೃ- ಗೆಳೆಯ ಕೆ. ಪುಟ್ಟಸ್ವಾಮಿ ಹುಷಾರಾಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರೂ ನಾವು ಓದುಗರು ಅದಕ್ಕೆ ಕೇರ್ ಮಾಡಬೇಕಿಲ್ಲ! ಅವರಿಗೆ ಬಹುಶಃ, ನಾಳೆ ಯಾವುದಾದರೂ ಮೂಲೆಯಿಂದ ‘ಇವರ ಬಗ್ಗೆ ಯಾಕಿಲ್ಲ? ಈ ಘಟನೆ ಬಿಟ್ಟಿದ್ದೀರಿ?’ ಎಂಬ ಆಕ್ಷೇಪ ಬಂದೀತೆಂಬ ಆತಂಕ ಇರಬಹುದು. ಈಗೀಗ ಪರಿಸ್ಥಿತಿ ಸ್ವಲ್ಪ ಹಾಗೇ ಇರುವುದರಿಂದ, ಅಂದರೆ ಯಾವುದೇ ಬಗೆಯ ಚರಿತ್ರೆಗೆ ಕೈ ಹಾಕುವುದೇ ಗೊದ್ದದ ಗೂಡಿಗೆ ಕೈಯಿಟ್ಟು ಕಚ್ಚಿಸಿಕೊಳ್ಳುವ ಬಾಬತ್ತಾದ್ದರಿಂದ ಪುಟ್ಟಸ್ವಾಮಿ ಇಂಥ ಮುಂಜಾಗ್ರತೆ ವಹಿಸಿರಲೂಬಹುದು. ಆದರೆ ಅಸಲು ‘ಸಮಗ್ರ ಚರಿತ್ರೆ’ ಎಂಬ ಪದಾರ್ಥವಾದರೂ ಎಲ್ಲಿದೆ?!
ಪುಟ್ಟಸ್ವಾಮಿ ಕೂಡ ಮೊದಲಿಂದ ನನ್ನ ಹಾಗೆಯೇ ದೊಡ್ಡ ಸಿನಿಮಾಪೋತ! ಪ್ರಾಸ್ತಾವಿಕ ಮಾತುಗಳಲ್ಲೇ ಅವರ ಈ ಸಿನಿಮಾ ಗೀಳಿನ ಸಮೃದ್ಧ ಚಿತ್ರಣ ಕಾಣುತ್ತದೆ. ‘ಸಿನಿಮಾ ಎಂಬುದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಗಾಳಿ, ದೆವ್ವ ಎಂಬ ಸಾಮಾನ್ಯ ನಂಬಿಕೆ’ ಇದ್ದ ಕಾಲದಲ್ಲೂ, ‘ಒಮ್ಮೆ ಸಿನಿಮಾ ಚಟ ಅಂಟಿದರೆ ಕುಡಿತ, ಜೂಜು, ವ್ಯಭಿಚಾರಕ್ಕಿಂತಲೂ ಅಪಾಯಕಾರಿ ಎಂಬ ಭಾವನೆ ಜನಜನಿತವಾಗಿದ್ದ’ ಕಾಲದಿಂದಲೂ ಪುಟ್ಟಸ್ವಾಮಿ ಈ ಸಿನಿಮಾ ಮಾಯಾಂಗನೆಯ ಮುಸುಕು ಹೊಕ್ಕಿದ್ದಾರೆ. ವಿಶೇಷವೆಂದರೆ, ಹೀಗೆ ಹುಡುಗ ಹಾಳಾಗಿ ಕೈ ತಪ್ಪಿಹೋಗುವ ಚಟಕ್ಕೆ ಅವರು ಬಿದ್ದಿದ್ದ ಕಾಲದಲ್ಲೇ ಅವರಲ್ಲೊಬ್ಬ ಇತಿಹಾಸಕಾರನೂ ಇದ್ದ! ‘…ನೋಡಿದ ಚಿತ್ರಗಳ ಬಗ್ಗೆ ಮಲಗುವ ಮುನ್ನ ವಿವರಗಳನ್ನು ಶ್ರದ್ಧೆಯಿಂದ ಬರೆದಿಡುವ ಅಭ್ಯಾಸ’ ಆಗಲೇ ಅವರಿಗಿತ್ತು!…
ಕನ್ನಡದಲ್ಲಿ ಈಗಾಗಲೇ ಒಂದೆರಡು ಸಿನಿಮಾ ಇತಿಹಾಸಗಳು ಬಂದಿವೆ. ಆ ಪೈಕಿ, ಸಕಲ ಪುರಾತನ ವಿದ್ವಾಂಸರನ್ನೆಲ್ಲ ಗುಡ್ಡೆ ಹಾಕಿ ಉದ್ಗ್ರಂಥ ಪ್ರಕಟಿಸಿ ಕಡೆಗೆ ವಾಪಸು ಪಡೆದ- ಚಲನಚಿತ್ರ ವಾಣಿಜ್ಯ ಮಂಡಳಿಯ- ‘ಚಲನಚಿತ್ರ ಚರಿತ್ರೆ’ಯೆಂಬ ಹೆಸರಿನ ನಗೆಪಾಟಲನ್ನೂ ಕಂಡಿದ್ದೇವೆ. ಅದು ಬಿಟ್ಟ ಮಿಕ್ಕ ಪ್ರಯತ್ನಗಳೂ ಮೈಲಿಗಲ್ಲು, ನಕಾಶೆಗಳಿಲ್ಲದ ಯಾಂತ್ರಿಕ ಮಗ್ಗಿಪಾಠಗಳ ಅವತಾರದಲ್ಲಿ ನಮ್ಮ ಕಣ್ಣ ಮುಂದಿವೆ. ಅಂದರೆ ಆ ಹಾದಿಗುಂಟ ಹೊರಟವರಿಗೆ ನಡುವೆ ಯಾವ ಒರತೆಯೂ, ಮರುಭೂಮಿಯೂ ಕಾಣುವುದಿಲ್ಲ. ಯಾವುದು ಅಥವಾ ಯಾರು ಮುಖ್ಯ? ಯಾಕೆ? ಈ ಸಿನಿಮಾ ಬಂಡಿಯ ನೊಗಕ್ಕೆ ಯಾರು ಹೆಗಲು ಕೊಟ್ಟು ಎಷ್ಟು ದೂರ ಎಳೆದರು- ಯಾವುದರ ಅಂದಾಜೂ ಹತ್ತುವುದಿಲ್ಲ. ಇಂಥ ಕುರುಡು ನಡಿಗೆ ಕೂಡ ಒಂದು ಸೀಮಿತ ಉದ್ದೇಶವನ್ನು ಈಡೇರಿಸಿದೆ ಎಂಬ ಮಾತು ಬೇರೆ….
ಪುಟ್ಟಸ್ವಾಮಿಯವರ ಈ ಅಂಕಣ ‘ವಿಕ್ರಾಂತ ಕನರ್ಾಟಕ’ದಲ್ಲಿ ಪ್ರಕಟವಾಗುತ್ತಿದ್ದಾಗಲೇ ತಪ್ಪದೆ ಓದುತ್ತಿದ್ದೆ. ಅದೇ ಈಗ ತನ್ನ ಅಗಾಧತೆಯೊಂದಿಗೆ ಸಮಗ್ರ ಸಂಕಲನವಾಗಿ ಬಂದಾಗ, ಅಂಥಲ್ಲೆಲ್ಲ ಸಾಮಾನ್ಯವಾಗಿ ಆಗುವಂತೆ, ಹೊಸದೇ ಪುಸ್ತಕವಾಗಿ ಗೋಚರಿಸುತ್ತಿದೆ! ಮತ್ತು ಒಟ್ಟು ಹೋಲಿಕೆಗಳೇ ನಿರರ್ಥಕವಾದರೂ, ‘ಸಿನಿಮಾಯಾನ’ ತನ್ನ ಮೊತ್ತದಲ್ಲಿ ಹುಟ್ಟಿಸಿದ ಸಾರ್ಥಕ ಭಾವ ಇನ್ನಾವ ಸಿನಿಮಾ ಚರಿತ್ರೆಯಲ್ಲೂ, ನನಗಂತೂ ಸಿಕ್ಕಿಲ್ಲ.
ಹೀಗೆ ಹೇಳಿದ ಮೇಲೆ ಯಾಕೆ ಮತ್ತು ಹೇಗೆ ಎಂದೂ ಹೇಳಬೇಕು.
ಸರಳ ವಿಷಯಗಳಿಂದ ಆರಂಭಿಸುವುದಾದರೆ, ಇಲ್ಲಿನ ವಿವರಗಳು. ಈ ಕೃತಿಯಲ್ಲಿ ಯಾವ ಪ್ರಮಾಣದ ಮಾಹಿತಿಯ ಸಮುದ್ರವೇ ಇದೆಯೆಂದರೆ, ಎಂಥ ‘ಸಿನಿಮಾ ಕುಡುಮಿ’ಗಳೂ ಹೌಹಾರಬೇಕು! ಇಸವಿಗಳು, ಅಂಕಿ ಅಂಶಗಳು, ವ್ಯಕ್ತಿಗಳು, ವಿದ್ಯಮಾನಗಳು… ತಮ್ಮ ಈ ವಿಹಂಗಮ ಗ್ರಹಿಕೆಯಿಂದ ಕನ್ನಡ ಸಿನಿಮಾ ಪಯಣದ ಮುಖ್ಯ ಸ್ಥಿತ್ಯಂತರಗಳೆಲ್ಲವನ್ನೂ ಹಿಡಿದಿಡುವ ಪುಟ್ಟಸ್ವಾಮಿ, ಜೊತೆಗೆ ಎಲ್ಲ ಒಳಸುಳಿಗಳನ್ನೂ ಒಳಗೊಂಡು ಹೆಜ್ಜೆಯಿಡುತ್ತಾರೆ. ಸಂಗೀತದ ಪರಿಭಾಷೆಯಲ್ಲಿ ಹೇಳುವುದಾದರೆ, ಇವರ ಸಿನಿಮಾ ರಾಗಾಲಾಪ, ಯಾವ ಸೂಕ್ಷ್ಮ ಸ್ವರಸ್ಥಾನವನ್ನೂ ಬಿಡದೆ ಮುಟ್ಟಿ ಮುನ್ನಡೆಯುವ ನಾದಝರಿಯಂತಿದೆ. ಮತ್ತು ಚಿತ್ರರಂಗದ ಆರಂಭದ ದಿನಗಳಿಂದ ಇಂದಿನವರೆಗೆ (‘ರಾಜ್’ ಚಿತ್ರದ ಉಡುಗೆ ತೊಡುಗೆವರೆಗೆ) ಹಬ್ಬಿದ- ಎಲ್ಲವನ್ನೂ ತೆಕ್ಕೆಗೆಳೆದುಕೊಳ್ಳಬಲ್ಲ ಅವರ ಕುತೂಹಲ, ಸಿನಿಮಾದ ಕಡು ವ್ಯಾಮೋಹಿಯೊಬ್ಬ ತಲುಪಬಹುದಾದ ಪ್ರೌಢಿಮೆಯ ಸಾಕ್ಷಿಯೂ ಹೌದು.
ಇಲ್ಲಿ ತೀರಾ ವಿವರಗಳಿಗೆ ಹೋಗದೆ, ಕೃತಿಯ ಕೆಲವು ಮುಖ್ಯ ಗೊತ್ತುಗುರಿಗಳನ್ನು ಚಚರ್ಿಸಬಹುದು.
ಮೊದಲು ಇವರ ಅಪ್ರತಿಮ ಕುತೂಹಲ. ಆರಂಭದ ಲೇಖನದಲ್ಲೇ ‘ವಸಂತಸೇನೆ’ ಮೂಕಿ ಚಿತ್ರದ ಹಿಂದೆ ಒಟ್ಟುಗೂಡಿದ ಬುದ್ಧಿಜೀವಿಗಳ ವಿವರ ನೀಡುವಾಗ ಪುಟ್ಟಸ್ವಾಮಿ, ಹೀಗೆ ಬುದ್ಧಿಜೀವಿಗಳ ಪ್ರಯೋಗವೆಂದೇ ಹೆಸರಾದ 70ರ ದಶಕದ ‘ಸಂಸ್ಕಾರ’ದವರೆಗೆ ಕೈ ಚಾಚುತ್ತಾರೆ. (ಇಂಥ ಪ್ರಯೋಗ ಭಾರತದ ಇತಿಹಾಸದಲ್ಲೇ ನಡೆದಿದ್ದಿಲ್ಲ ಎಂಬ ಷರಾದೊಂದಿಗೆ.) ಕನ್ನಡದ ಕುಮಾರತ್ರಯರು ಏಕೈಕ ಬಾರಿ ಒಟ್ಟುಗೂಡಿದ ಜಿ.ವಿ. ಅಯ್ಯರ್ರ ಚಿತ್ರ ‘ಭೂದಾನ’ದ ಕಥಾಹಂದರವನ್ನು ‘ಅಪಹರಿಸಿದ್ದು’ ಶಿವರಾಮ ಕಾರಂತರು ಬರೆದ (ಮುಂದಕ್ಕೆ ಬಿ.ವಿ. ಕಾರಂತರು ತೆರೆಗೆ ತಂದ) ‘ಚೋಮನದುಡಿ’ಯಿಂದ- ಎಂಬ ಕೌತುಕಮಯ ಪತ್ತೇದಾರಿಕೆ ಇಲ್ಲಿದೆ. ನಾವೆಲ್ಲ ‘ಸಂಸಾರ ನೌಕ’ ಕನ್ನಡದ ಮೊದಲ ಸಾಮಾಜಿಕ ಚಿತ್ರವೆಂದು ತಿಳಿದಿದ್ದರೆ, ಇಲ್ಲ, ಅದು ಭಾರತೀಯ ಚಿತ್ರರಂಗದಲ್ಲೇ ಮೊದಲ ಸಾಮಾಜಿಕ ಚಿತ್ರವೆಂಬ ಅಪೂರ್ವ ಮಾಹಿತಿ ಸಿಕ್ಕುತ್ತದೆ. ಇಂಥವೇ ನೂರೆಂಟು ಉದಾಹರಣೆಗಳನ್ನು ಈ ಪುಸ್ತಕದಲ್ಲಿ ಹೆಕ್ಕಿ ಹೆಕ್ಕಿ ಕೊಡಬಹುದು. ಇನ್ನು ಒಟ್ಟು ಸಿನಿಮಾ ಪಯಣದ ರೂಪುರೇಷೆ ಹಿಡಿಯುವಾಗ, ನಿಜರ್ೀವ ಕಾಲಾನುಕ್ರಮಣಿಕೆಯ ಗಡಿ ದಾಟುವ ಅವರ ಸ್ವಚ್ಛಂದ ಲಹರಿಯೇ ಆಸಕ್ತಿಪೂರ್ಣವಾಗಿದೆ. ಜೊತೆಗೆ ಒಂದು ಪ್ರಾತಿನಿಧಿಕ ಚಿತ್ರವನ್ನು ಬಿಡಿಸಿ ನೋಡುವ ಮೂಲಕವೇ ಒಬ್ಬ ನಿದರ್ೇಶಕನ, ಹಾಗೂ ಒಂದು ಪ್ರವೃತ್ತಿಯ ಬೆನ್ನು ಹತ್ತಿ ಪ್ರತಿಯೊಂದನ್ನೂ ತೂಗಿ ನೋಡಿ ಬೆಲೆ ಕಟ್ಟುವ ಸಮತೋಲ.
ಇನ್ನು ಇವರ ಸರ್ವಗ್ರಾಹಿಯಾದ, ಪ್ರಖರ ನೋಟದ ಕುರುಹುಗಳಂತೂ ಉದ್ದಕ್ಕೂ ಕಾಣುತ್ತವೆ. ಉದಾಹರಣೆಗೆ ‘ಸೊರಗಿದ ಮಹಿಳಾ ಪಾತ್ರಗಳ’ ಬಗ್ಗೆ ಬರೆಯುವಾಗ ಲೇಖಕರು ಅನಿರೀಕ್ಷಿತವಾಗಿ ತರುವ ಚಾಪ್ಲಿನ್ ಚಿತ್ರಗಳ ಪ್ರಸ್ತಾಪವನ್ನು ನೋಡಬಹುದು. ಚಾಪ್ಲಿನ್ ಹೇಗೆ ತನ್ನ ತಾಯಿಯ ವ್ಯಕ್ತಿತ್ವದ ಪ್ರಭಾವದಲ್ಲೇ ತನ್ನ ನಾಯಕಿಯರ ಚಹರೆ ರೂಪಿಸಿದನೆಂದು ಹೇಳುವಾಗ ಸಿಗ್ಮಂಡ್ ಫ್ರಾಯ್ಡ್ನ ವಿಶ್ಲೇಷಣೆಯ ನೆರವನ್ನೂ ಪಡೆಯುವ ಪುಟ್ಟಸ್ವಾಮಿ, ಚಾಪ್ಲಿನ್ನನ್ನು ಇಲ್ಲಿ ಪ್ರಸ್ತಾಪಿಸುವುದಾದರೂ ಯಾಕೆ? ‘ನಮ್ಮ ನಿದರ್ೇಶಕರು ಸ್ಫೂತರ್ಿಗಾಗಿ ಅನ್ಯಭಾಷಾ ಚಿತ್ರಗಳನ್ನೋ ಅಥವಾ ಮತ್ತಾವುದೋ ಸಂಪನ್ಮೂಲವನ್ನೋ ಹುಡುಕುವ ಬದಲು ತಮ್ಮ ಅಂತರಂಗವನ್ನು, ಬಾಲ್ಯವನ್ನು, ತಮ್ಮ ತಾಯಿ, ಅಕ್ಕ, ತಂಗಿ ಸಂಬಂಧಗಳ ಒಡನಾಟದತ್ತ ಕಣ್ಣು ಹಾಯಿಸಿದರೆ ಕತೆ, ಪಾತ್ರಗಳೆಲ್ಲವೂ ಸಿಗುತ್ತವೆ ಎಂಬುದನ್ನು ಚಾಪ್ಲಿನ್ನಿಂದ ಕಲಿಯಬಹುದೆಂಬ ಕಾರಣಕ್ಕೆ ಆತನನ್ನು ಇಲ್ಲಿ ಎಳೆತಂದಿದ್ದೇನೆ….’
ಅಂತೂ ಗುಬ್ಬಚ್ಚಿಯೊಂದು ಎಲ್ಲೆಲ್ಲಿಂದಲೋ ಗರಿಕೆ ತಂದು ಗೂಡು ಕಟ್ಟುವ ಹಾಗೆ ತಮ್ಮ ಬರಹಕ್ಕೆ ವಿವಿಧ ಮೂಲಗಳಿಂದ ಅರ್ಥಸಮೃದ್ಧಿ ತರುವ ಪುಟ್ಟಸ್ವಾಮಿಯವರ ಒಟ್ಟು ಶೈಲಿಗೆ ಇದೂ ಒಂದು ನಿದರ್ಶನ. ಹೀಗೆ ಬೇರೆ ಯಾರೂ ಕಾಣದ್ದನ್ನು ಕಾಣುವ ಇವರ ದೃಷ್ಟಿಯ ಬಗ್ಗೆ ಹೇಳಬೇಕಾದರೆ, ಪ್ರತಿ ಅಧ್ಯಾಯದಲ್ಲೂ ಉದಾಹರಣೆಗಳು ಸಿಕ್ಕುತ್ತವೆ. ಇವರ ಚಿಂತನೆಯ ವಿಸ್ತೀರ್ಣಕ್ಕೆ ಒಂದು ಮುಖ್ಯ ನಿದರ್ಶನವಾಗಿ ‘ಬೇಡರ ಕಣ್ಣಪ್ಪ’ ಕುರಿತ ಬರಹ ಹಾಗೂ ಅಲ್ಲಿ ಕಾಣುವ ಧರ್ಮದ ವ್ಯಾಖ್ಯಾನ ನೋಡಬಹುದು:
‘…ಸಾಂಸ್ಥಿಕ ಧರ್ಮಕ್ಕೆ ಪ್ರತಿರೋಧವನ್ನು ಒಡ್ಡಿ ದೇವರು ಧರ್ಮವನ್ನು ಬಯಲಿಗೆ ಎಳೆತಂದು ಆರಾಧಿಸಿದ ತಳ ಸಮುದಾಯದ ಸಂತರ ಬಗ್ಗೆ ಜನರಲ್ಲಿ ಆಳದಲ್ಲೆಲ್ಲೋ ಅನುಕಂಪವಿದೆ, ಪ್ರೀತಿಯಿದೆ, ಗೌರವವಿದೆ. ಆ ಕಥನವನ್ನು ಸಮುದಾಯಕ್ಕೆ ಮನದಟ್ಟು ಮಾಡುವ ರೀತಿಯಲ್ಲಿ ‘ಬೇಡರ ಕಣ್ಣಪ್ಪ’ ರೂಪುಗೊಂಡಿತ್ತು. ಸಹಿಷ್ಣುತೆ, ಆತ್ಮವೇದನೆ, ಆತ್ಮ ಬಲಿದಾನ, ಧರ್ಮಜಿಜ್ಞಾಸೆ, ಭಕ್ತಿಯ ಸರಳತೆ- ಸಜ್ಜನಿಕೆ ಮತ್ತು ಸಮುದಾಯದ ವಿಮೋಚನೆಯ ದಾರಿಗಳನ್ನು ತಣ್ಣಗೆ ಈ ಚಿತ್ರ ಪಡಿಮೂಡಿಸುತ್ತದೆ… ಆದ್ದರಿಂದ ಅದು ಗೆದ್ದು ಭಕ್ತಿಪ್ರಧಾನ ಚಿತ್ರಗಳ ಪರಂಪರೆಯನ್ನೇ ಹುಟ್ಟುಹಾಕಿತು…’
ಜೊತೆಗೆ ಕನ್ನಡ ಚಿತ್ರರಂಗಕ್ಕೊಂದು ತನ್ನತನ ರೂಢಿಗೊಂಡಿದ್ದೇ ಈ ಚಿತ್ರದಿಂದ ಎಂದು ಸಕಾರಣವಾಗಿ ಮಂಡಿಸಲಾದ ವಾದವನ್ನೂ ನೋಡಬೇಕು.
ಇಷ್ಟೇ ತೀಕ್ಷ್ಣವಾದ ಇನ್ನೊಂದು ವಾದ ಕಾಣುವುದು- 60ರ ದಶಕ ಕುರಿತ ಅವರ ವಿಶ್ಲೇಷಣೆಯಲ್ಲಿ. ಆ ಬರಹದಲ್ಲಿ ನಗರ- ಹಳ್ಳಿಯ ಮುಖಾಮುಖಿಯನ್ನು ನಮ್ಮ ಚಿತ್ರಗಳು ಎದುರಿಸಿರುವ ಪರಿಯನ್ನು ಕೈಗೆತ್ತಿಕೊಳ್ಳುವ ಪುಟ್ಟಸ್ವಾಮಿ- ‘ಮೇಯರ್ ಮುತ್ತಣ್ಣ’ ಮತ್ತು ‘ಬೋರೇಗೌಡ ಬೆಂಗಳೂರಿಗೆ ಬಂದ’ ಈ ಎರಡು ಚಿತ್ರಗಳನ್ನು ಎದುರಾಬದುರು ನಿಲ್ಲಿಸುತ್ತಾರೆ. ಬೋರೇಗೌಡ ಚಿತ್ರದಲ್ಲಿ ‘ಹಳ್ಳಿಗರೆಲ್ಲ ಮುಗ್ಧರು, ನಗರವೆಲ್ಲ ಕೇಡಿನ ತಾಣ ಎಂಬ ಸರಳ ಸಮೀಕರಣ’ವಿದ್ದರೆ, ಮೇಯರ್ ಮುತ್ತಣ್ಣ ‘ಹಳ್ಳಿಯಿಂದ ಬಂದವನೂ ನಗರದಲ್ಲಿ ಸುಧಾರಣೆ ತಂದು ಮೇಯರ್ ಮಟ್ಟಕ್ಕೂ ತಲುಪಬಹುದೆಂಬ’ ಆಶಯ ಹೇಳುತ್ತದೆ ಎಂದು ನಮೂದಿಸುವ ಕೃತಿಕಾರ ಅಷ್ಟಕ್ಕೇ ನಿಲ್ಲುವುದಿಲ್ಲ. ಬೋರೇಗೌಡನ ‘ಬೀಜಗಳು ಈಗ ಹೆಮ್ಮರವಾಗಿ ಕನ್ನಡ ಚಿತ್ರರಂಗದ ಅಂತಸ್ಸತ್ವವನ್ನೇ ಕೊಲ್ಲುತ್ತಿವೆ. ಹಳ್ಳಿಯಿಂದ ಬಂದ ಮುಗ್ಧರೆಲ್ಲರೂ ನಗರದ ಬದುಕು ತಂದೊಡ್ಡುವ ಸವಾಲಿನ ವಿರುದ್ಧ ಸೆಣೆಸದೆ ಮಚ್ಚು, ಲಾಂಗು ಝಳಪಿಸುತ್ತ ಕೇಡಿಗರಾಗಿ ಬದಲಾಗುತ್ತ ನಗರಗಳ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ವಿಜೃಂಭಿಸುತ್ತಿದ್ದಾರೆ’ ಎಂಬ ಗಾಢ ಒಳನೋಟ ಹೊಳೆಯಿಸುತ್ತಾರೆ.
ಡಾ. ರಾಜ್ ಎಂಬ ಪವಾಡವನ್ನು ವಿಶ್ಲೇಷಿಸುವ ‘ಕನ್ನಡದ ಜನನಾಯಕ’ ಎಂಬ ಬರಹ ಈ ಕೃತಿಯ ಮನೋಜ್ಞ ಅಧ್ಯಾಯಗಳಲ್ಲೊಂದು. ಈ ಲೇಖನದಲ್ಲಿ ಮೊದಲಿಗೆ ರಾಜ್, ಜನಮಾನಸವನ್ನು ಆವರಿಸಿದ ಪರಿಗೆ ಕೆಲವು ಪ್ರಸಂಗಗಳನ್ನು, ಸ(‘ಉಪಕತೆಗಳನ್ನು’) ನಿರೂಪಿಸುತ್ತಾರೆ. (ಅದರ ಪೈಕಿ ‘ಶಂಕರ್ ಗುರು’ ಚಿತ್ರದ ಮೊದಲ ರಾತ್ರಿ ಕುರಿತ ಕತೆಯನ್ನು ಈ ಮುಂಚೆಯೂ ಪುಟ್ಟಸ್ವಾಮಿಯವರ ಬಾಯಲ್ಲಿ ಕೇಳಿ ಆನಂದಿಸಿದ್ದೆ). ಆ ಮೂಲಕ ‘…ಬಹುವೇಷಧಾರಿ ರಾಜಕುಮಾರ್ ಎಂಬ ಕಿಂದರಿಜೋಗಿಯ ಮೋಡಿಗೆ ಸಿಲುಕಿದ ಮನಸ್ಸುಗಳು ಹಳ್ಳಿ ನಗರಗಳಲ್ಲಿವೆ. ಜಾತಿಮತದ ಹಂಗು ತೊರೆದಿವೆ. ಲಿಂಗಭೇದವನ್ನು ದಾಟಿವೆ. ವಯೋಮಾನ ತಾರತಮ್ಯವನ್ನು ದಾಟಿವೆ… ಅಷ್ಟೇ ಅಲ್ಲ, ರಾಜ್ಕುಮಾರ್ ಅವರ ಬದುಕು ಸಹ ತಮ್ಮದೇ ಆಗಿದೆ, ಆಗಬೇಕು ಎಂದು ಜನಸಮುದಾಯ ಭ್ರಮಿಸಿತ್ತು…. ಅವರ ನಿಧನಾನಂತರ ಅವರ ಪಾಥರ್ಿವ ಶರೀರ ನಮ್ಮದು, ಅವರ ಅಂತ್ಯಸಂಸ್ಕಾರವೂ ಕನ್ನಡ ಜನತೆಗೇ ಸೇರಿದ್ದು ಎಂಬ ಮಟ್ಟಕ್ಕೆ ಅತಿರೇಕ ಪ್ರದಶರ್ಿಸಿತು…’ ಎಂದು ಬರೆಯುತ್ತಾರೆ.
ಕೇವಲ ಕಲಾವಿದನಾದವನೊಬ್ಬ ನಾಡಿನ ಸಾಂಸ್ಕೃತಿಕ ನಾಯಕನಾಗಿ ಬೆಳೆದದ್ದು ಹೇಗೆನ್ನಲು ಪ್ರೊ. ಕೆ.ವಿ. ನಾರಾಯಣ ಅವರ ವಿವರಣೆಯನ್ನೂ ಒಳಗೊಂಡು, ರಾಜ್ ಪ್ರವೇಶದ ಬೇಡರ ಕಣ್ಣಪ್ಪ ಚಿತ್ರವೇ ಏಕೀಕರಣಕ್ಕೆ ಒಂದು ಬಗೆಯ ಮುನ್ನುಡಿ ಒದಗಿಸಿದ್ದನ್ನು ಕಾಣಿಸಿ, ರಾಜ್ರ ಅದ್ವಿತೀಯ ಪ್ರತಿಭಾಸಂಪನ್ನತೆಯನ್ನೂ, ಅದಕ್ಕೆ ಪೂರಕವಾದ ಸಾಮಾಜಿಕ ಸ್ಥಿತ್ಯಂತರದ ಕಾಲಘಟ್ಟವನ್ನೂ ಗುರುತಿಸುತ್ತ ಪುಟ್ಟಸ್ವಾಮಿಯವರ ವಿಶ್ಲೇಷಣೆ ಮುಂದುವರೆಯುತ್ತದೆ. ಮತ್ತು ಇಷ್ಟು ಬಗೆಯಲ್ಲಿ ಸ್ತುತಿಸುವಾಗಲೂ ಅವರ ವಿಮಶರ್ಾ ಎಚ್ಚರ ಎಲ್ಲಿಯೂ ಮುಕ್ಕಾಗುವುದಿಲ್ಲ. ಅಂದರೆ ‘ತಮ್ಮ ಇಮೇಜಿನಲ್ಲಿ ತಾವೇ ಬಂದಿಯಾದ ರಾಜ್’ ಇವರ ಕಣ್ಣಳತೆಯಿಂದ ತಪ್ಪಿಹೋಗಿಲ್ಲ. ‘…ರಾಜ್ರ ತೆರೆಯ ಮೇಲಿನ ಅಭಿನಯ ಮನುಷ್ಯಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ ಕೃತಕವೆಂಬಂತೆ ಕಾಣುತ್ತಿತ್ತು’ ಎಂದು ಬರೆಯಲು ಹಿಂದು ಮುಂದು ನೋಡದವರು ಇವರು.
ಅಷ್ಟು ಹೇಳಿಯೂ, ರಾಜ್ ಉದ್ದಕ್ಕೂ ಮಾಧ್ಯಮಗಳಿಂದ ಅನುಭವಿಸುತ್ತ ಬಂದ ಅವಜ್ಞೆಯ ಬಗ್ಗೆ ಪುಟ್ಟಸ್ವಾಮಿಯವರ ತೀಕ್ಷ್ಣ ಮಾರುತ್ತರವೂ ಇಲ್ಲಿದೆ. ರಾಜ್ ತಮ್ಮ ಅನೂಹ್ಯ ಜನಪ್ರಿಯತೆಯ ಮೂಲಕ ಪ್ರಶ್ನಾತೀತರಾಗಿ ಬೆಳೆದಾಗಲಷ್ಟೇ ಈ ಮಾಧ್ಯಮಪಂಡಿತರ ಕಣ್ಣು ತೆರೆದದ್ದು: ‘…ಅಂದರೆ ರಾಜ್ರವರಿಗೆ ಯಾವಾಗ ಬೆಂಬಲ ನೀಡಿ ಬೆಳೆಸಬೇಕಿತ್ತೋ ಆಗ ಮಾಧ್ಯಮಗಳು ಅವರಿಗೆ ವಿಮುಖವಾಗಿದ್ದವು. ಯಾವಾಗ ಅದರ ಅಗತ್ಯವಿರಲಿಲ್ಲವೋ ಅಥವಾ ಕ್ರಿಟಿಕಲ್ ಆಗಿರಬೇಕಿತ್ತೋ, ಆಗ ಓಲೈಕೆ ರಾಜಕೀಯದಲ್ಲಿ ನಿರತವಾಗಿದ್ದವು. ಆದರೂ ಒಂದು ವರ್ಗದ ಅಂತರಂಗದಲ್ಲಿದ್ದ ಅವ್ಯಕ್ತ ಅಸಹನೆ ಈಗಲೂ ಪ್ರಕಟವಾಗುತ್ತಿರುತ್ತದೆ’ ಎಂಬ ನಿದರ್ಾಕ್ಷಿಣ್ಯ ನಿಲುವು ಹೊಮ್ಮುತ್ತದೆ. ಆದರೆ, ಇಂಥ ಅಸಹನೆಯ ಮೂಲ ಯಾವುದು ಎಂದು ಗೊತ್ತಿದ್ದರೂ ಪುಟ್ಟಸ್ವಾಮಿ ಬಾಯಿ ಬಿಟ್ಟು ಹೇಳುವುದಿಲ್ಲ! ಅಂದರೆ ಇವರ ವಿಮಶರ್ಾ ಎಚ್ಚರವೂ ಸಂಯಮದ (ಸಂಕೋಚದ?) ಗಡಿ ದಾಟುವುದಿಲ್ಲ! (ಇದೇ ಸಂಯಮ ಕಾಸರವಳ್ಳಿಯವರನ್ನು ಕುರಿತ ಬರಹದಲ್ಲೂ ಮತ್ತೆ ಕಾಣುತ್ತದೆ. ಮತ್ತು ‘ಸಿನಿಮಾಯಾನ’ದ ಪ್ರೌಢ ಬರಹಗಳಲ್ಲಿ ಈ ಅಧ್ಯಾಯವೂ ಒಂದು. ಅದರಲ್ಲಿ …ಆದರೆ ಕನ್ನಡದ ‘ಹೊಸ ಅಲೆ’ ಚಾಮರದಡಿಯಲ್ಲಿ ಆಶ್ರಯ ಪಡೆದ ಅನೇಕ ಚಿತ್ರಗಳನ್ನು ಸಿನಿಮಾ ಎಂದು ಕರೆಯಲೂ ಹಿಂದೇಟು ಹಾಕಬೇಕಾಗುತ್ತದೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹಲವರಿಗೆ ನೋವಾಗುವುದು ಸಹಜ… ಎಂದು ಬರೆಯಲು ಇವರಿಗೆ ಅಳುಕಿಲ್ಲ. ಆದರೆ ಅವರ ಹೆಸರು ತೆಗೆಯಲು ಹಿಂಜರಿಕೆ!)
ಒಟ್ಟಿನಲ್ಲಿ ರಾಜ್ ಕುರಿತ ಪುಟ್ಟಸ್ವಾಮಿಯವರ ಬರಹ, ಸಿನಿಮಾ ಚಿಂತನೆಯನ್ನೇ ಸಂಸ್ಕೃತಿ ಚಿಂತನೆಯ ಎತ್ತರಕ್ಕೇರಿಸಿದೆ. ಮತ್ತು ಅಂಥ ಸನ್ನಿವೇಶಗಳು ಈ ಕೃತಿಯಲ್ಲಿ ಅಪರೂಪವೂ ಅಲ್ಲ!
ಪ್ರೇಕ್ಷಕನೊಬ್ಬ ತಾನು ನೋಡಿದ ಸಿನಿಮಾ ಬಗ್ಗೆ ಯಾವ ಬಗೆಯ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ?
ಗುದ್ದಾಡಿ ಟಿಕೆಟ್ ಪಡೆದು ಸಂಭ್ರಮದಿಂದ ಚಿತ್ರಮಂದಿರ ಪ್ರವೇಶಿಸಿದವನು ನಗುವಾಗ ನಕ್ಕು, ಅಳುವಾಗ ಅತ್ತು, ತನ್ನ ಮೆಚ್ಚಿನ ಗೀತೆ ಗುನುಗುತ್ತ ಹೊರಬರುತ್ತಾನೆ. ತನಗೆ ಹಿಡಿಸಿದ್ದನ್ನು ಎದೆಯೊಳಗೆ ಕರೆದುಕೊಂಡು ಪೊರೆಯುತ್ತಾನೆ. ಅವನ ನೆಚ್ಚಿನ ಸಿನಿಮಾ/ ನಾಯಕ/ ಹಾಡು, ಅವನ ಭಾವಕೋಶದಲ್ಲಿ ಶಾಶ್ವತವಾಗಿ ಸೇರಿಹೋಗಿ, ಜೀವಮಾನದ ನಂಟೊಂದು ಏರ್ಪಡುತ್ತದೆ. ಚಲಿಸುವ ಫೋಟೋಗಳ ಕಣ್ಕಟ್ಟು ಮಾತ್ರವಾದ ಸಿನಿಮಾ, ನೆರಳು ಬೆಳಕಿನ ಸ್ತರ ಮೀರಿದ ಮಾಯೆಯಾಗಿ ಬೆಳೆಯುವುದು ಹೀಗೆ…. ಪುಟ್ಟಸ್ವಾಮಿಯವರ ಬರವಣಿಗೆಗೂ ಅದೇ ಗುಣವಿದೆ! ನಗುವಾಗ ನಕ್ಕು, ಅಳುವಾಗ ಅಳುವ ತಮ್ಮ ಭಾಷೆ ಮತ್ತು ಶೈಲಿಯ ಮೂಲಕ ಇಲ್ಲಿ ಅವರು ಸಾಮಾನ್ಯನ ಆಸೆ, ಅಭಿರುಚಿಗಳಿಗೆ ಹತ್ತಿರವಿದ್ದಾರೆ.
ತಮ್ಮ ಬಹುಮುಖಿ ಗ್ರಹಿಕೆಗೆ ತಕ್ಕ ಹಾಗಿರುವ ಮೋಹಕ ನುಡಿಗಟ್ಟಿನಲ್ಲಿ ಪುಟ್ಟಸ್ವಾಮಿ ಬಾಲಣ್ಣನವರ ಬಗ್ಗೆ ಬರೆಯುವುದನ್ನೇ ನೋಡಿ: ‘…ಎಂಟು ದಶಕಗಳ ಕಾಲ ಜೀವಿಸಿದ್ದ ಈ ಕಲಾಭೀಷ್ಮನ ಬದುಕೇ ವೈವಿಧ್ಯಮಯ. ಈ ಬದುಕು ಅಚ್ಚರಿಯ ಏಳುಬೀಳುಗಳನ್ನು ಕಂಡಿದೆ. ಸಾಧನೆಯ ಶಿಖರವನ್ನೇರಿದೆ. ಆಥರ್ಿಕವಾಗಿ ಮುಗ್ಗರಿಸಿದೆ. ಗ್ರೀಕ್ ನಾಟಕದ ದುರಂತ ಛಾಯೆಗಳನ್ನು ಕಂಡಿದೆ. ಅಭಿಮಾನಿಗಳ ಮಹಾಪೂರದಲ್ಲಿ ಪಲ್ಲವಿಸಿದೆ. ಯಾವುದೇ ನಾಟಕೀಯ ಘಟನೆಗಳಿಂದ ತುಂಬಿದ ಚಿತ್ರವೂ ಅವರ ನಿಜಜೀವನದ ಘಟನೆಗಳನ್ನು ಸರಿಗಟ್ಟಲಾರದು’…
ಅದಕ್ಕೇ ‘ಸಿನಿಮಾಯಾನ’ ಈ ಮಟ್ಟಿಗೆ ಪರಿಪೂರ್ಣವೂ, ಪರಮಾಪ್ತವೂ ಆಗುವುದು. ಅಷ್ಟಾದರೂ ಅಸ್ಮಿತೆ, ಬಿಂಬ ಮಾದರಿಯ ಶಬ್ದಗಳೆಂದರೆ ತುಸು ಇರಿಸುಮುರಿಸೇ!
ಮತ್ತು ಜಗಳವಾಡಲೂ ಈ ಪುಟಗಳಲ್ಲಿ ಅವಕಾಶಗಳಿವೆ!
ಉದಾಹರಣೆಗೆ- ‘ಕಸ್ತೂರಿ ನಿವಾಸ’ ಕುರಿತ ಬರಹ. ಲೇಖಕರ ಭಾಷೆ, ಚಿಂತನೆಗಳೆಲ್ಲವೂ ಮುಪ್ಪುರಿಗೊಂಡಿದ್ದರ ಉಜ್ವಲ ನಿದರ್ಶನವಾಗಿ ಕಾಣುವ ಈ ಅಧ್ಯಾಯವೂ, ಪ್ರಾತಿನಿಧಿಕ ಚಿತ್ರವೊಂದರ ಮೂಲಕ ಕತರ್ೃವಿನ ಸೃಷ್ಟಿಲೋಕ ಪ್ರವೇಶಿಸುವ ಎಂದಿನ ಶೈಲಿಯಲ್ಲೇ ಇದೆ. ಈ ಲೇಖನದಲ್ಲಿ ಪುಟ್ಟಸ್ವಾಮಿ ‘ವಸ್ತು, ವಿನ್ಯಾಸ, ಚಿತ್ರಕತೆ, ಅಭಿನಯ, ಸಂಗೀತ, ನಿರೂಪಣೆ ಮತ್ತು ನಾಟಕೀಯ ದೃಶ್ಯಗಳ ದೃಷ್ಟಿಯಿಂದ ಅದು ಕನ್ನಡ ಚಲನಚಿತ್ರರಂಗ ಸೃಷ್ಟಿಸಿದ ಅತ್ಯುತ್ತಮ ಚಿತ್ರಗಳಲ್ಲೊಂದು’ ಎನ್ನುವ ಮಟ್ಟಿಗೆ ಹೊಗಳುತ್ತಾರೆ. ಅಲ್ಲದೆ, ‘ಅಹಂನಿಂದ ಪ್ರೇರಿತವಾದ ವ್ಯಕ್ತಿಯ ಅದಮ್ಯ ಸಂಕಲ್ಪ ಶಕ್ತಿಯು ವಿಧಿಯ ಎದುರು ಛಿದ್ರಗೊಳ್ಳುವುದು ಸಹ ದುರಂತಕತೆಗಳ ಒಂದು ಲಕ್ಷಣ. ಮುಖ್ಯವಾಗಿ ಗ್ರೀಕ್ ದುರಂತ ನಾಟಕಗಳ ಮೂಲ ಎಳೆಗಳಿರುವುದೇ ಆ ಬಗೆಯ ವಿಧಿಯಾಟಗಳಲ್ಲಿ’ ಎಂಬ ಹೋಲಿಕೆ ತರುತ್ತಾರೆ.
ನನ್ನ ತಕರಾರು, ಅವರು ತರುವ ಆ ‘ಅದಮ್ಯ ಸಂಕಲ್ಪ ಶಕ್ತಿ’ಯ ಪ್ರಸ್ತಾಪಕ್ಕೆ.
ನನ್ನ ಪ್ರಕಾರ ಡಾ. ರಾಜ್ ತಮ್ಮ ವೃತ್ತಿಜೀವನದ ಏರುಗಾಲದಲ್ಲಿ ನಿರ್ವಹಿಸಿದ ಏಕೈಕ ಸಂಕಲ್ಪಹೀನ ಪಾತ್ರ ‘ಕಸ್ತೂರಿ ನಿವಾಸ’ದ್ದು! ಆ ಎದುರಾಳಿ ಚಂದ್ರು ಎಂಬ ಪಾತ್ರ, ರಾಜ್ ಪಾತ್ರಕ್ಕೆ ಎದುರಾಗಿ ಬೆಂಕಿಪೊಟ್ಟಣ ಕಾಖರ್ಾನೆ ತೆರೆಯುವ ಸುದ್ದಿ ಬಂದಾಗ ರಾಜ್, ನಕ್ಕು ಹುರಿದುಂಬಿಸುವ ಮಾತಾಡುತ್ತಾರೆ. ಮುಂದಕ್ಕೆ, ಆ ಪ್ರತಿಸ್ಪಧರ್ಿಯ ಕಾಖರ್ಾನೆಯೇ ಮೇಲುಗೈ ಪಡೆಯುವಾಗ ರಾಜ್ ಏನು ಮಾಡುತ್ತಾರೆ? ಏನೂ ಇಲ್ಲ! ಆಗಲೂ ನಕ್ಕು ಸುಮ್ಮನಾಗುತ್ತಾರೆ!! ಅಂದರೆ ಯಾವ ಬಗೆಯ ಕ್ರಿಯಾಶೀಲ ಪ್ರಯತ್ನಕ್ಕೂ ಮುಂದಾಗದೆ, ಬಂದಿದ್ದನ್ನು ನಿವರ್ಿಣ್ಣವಾಗಿ ಒಪ್ಪಿಕೊಂಡು ತನ್ನ ಸೋಲನ್ನು ತಾನೇ ಉದಾತ್ತೀಕರಿಸಿಕೊಳ್ಳುವ ಬಗೆಯ ‘ವಿಫಲ ನಾಯಕ’ನ ಪಾತ್ರವದು. ಆ ಚಿತ್ರ ಮೊದಲು ಬಿಡುಗಡೆಯಾದಾಗ ನಾಲ್ಕೇ ವಾರಕ್ಕೆ ಥಿಯೇಟರುಗಳಿಂದ ಕಾಲ್ತೆಗೆದದ್ದಕ್ಕೆ ಬಹುಶಃ ಈ ನಿಷ್ಕ್ರಿಯ ನಾಯಕನ ಪಾತ್ರಚಿತ್ರಣವೇ ಕಾರಣ. ಗ್ರೀಕ್ ದುರಂತ ಚಿತ್ರಣವೆಂದರೆ ವೀರೋಚಿತ ಮನುಷ್ಯಪ್ರಯತ್ನವನ್ನೂ ಮಣಿಸಿ ಮೀರುವ ವಿರಾಟ್ ಲೀಲೆಯ ಸ್ವರೂಪದ್ದು. ‘ಕಸ್ತೂರಿ ನಿವಾಸ’ದಲ್ಲಿ ಆ ಆಯಾಮವೇ ಇಲ್ಲ.
ಭಾರತದ ತೆರೆಯ ಮೇಲೆ ಈ ವಿಫಲ ಅಥವಾ ನಿಷ್ಕ್ರಿಯ ನಾಯಕನ ದೊಡ್ಡದೊಂದು ಪರಂಪರೆಯೇ ಇದೆ. ವಿಶೇಷವಾಗಿ ದೇವದಾಸ್. ಶರಶ್ಚಂದ್ರರ ರಮ್ಯ ದುರಂತದ ಸೃಷ್ಟಿಯಾದ ದೇವದಾಸ್- ಒಂದು ಕಾಲಘಟ್ಟದಲ್ಲಿ ಭಾರತದ ರಸಿಕ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿ ತನ್ನ ನೆರಳನ್ನು ದಶಕಗಳ ಕಾಲ ಚಾಚಿದ ಪಾತ್ರ. ಹಿಂದಿಯಲ್ಲೇ ಆ ಕಥೆಯ ಮೂರು ಆವೃತ್ತಿಗಳು ಬಂದುಹೋದವು- ಈಚಿನ ಶಾರೂಕ್ ಖಾನ್ ಅಭಿನಯದ್ದೂ ಸೇರಿ. ಕಳೆದ ವರ್ಷ ಅದೇ ವಸ್ತುವಿನ ಆಧುನಿಕ ಆವೃತ್ತಿಯಾಗಿ ‘ದೇವ್ ಡಿ’ ಬಂತು. ಇದೀಗ ‘ಔರ್ ದೇವದಾಸ್’ ಎಂಬ ಮತ್ತೊಂದು ಚಿತ್ರದ ತಯಾರಿ ನಡೆದಿದೆಯಂತೆ!… ಹಿಂದಿ ಚಿತ್ರರಂಗದ ದಂತಕಥೆಯೆನಿಸಿದ್ದ ಗುರುದತ್ನ ಮುಖ್ಯ ಚಿತ್ರಗಳಲ್ಲಿ ಕಾಣುವುದೂ ದೇವದಾಸ್ನ ನೆರಳೇ. ವಿಶೇಷತಃ ‘ಪ್ಯಾಸಾ’ ಮತ್ತು ‘ಕಾಗಜé್ ಕೆ ಫೂಲ್’ ಚಿತ್ರಗಳಲ್ಲಿ. ‘ಕಾಗಜé್ ಕೆೆ ಫೂಲ್’ನಲ್ಲಿಯಂತೂ ಆ ಚಿತ್ರದ ನಾಯಕನ (ಚಿತ್ರದಲ್ಲಿ ನಿದರ್ೇಶಕ) ಪಾತ್ರವೇ ದೇವದಾಸ್ನ ಪಡಿಯಚ್ಚಾದರೆ, ಆತ ಚಿತ್ರದೊಳಗೆ ನಿಮರ್ಿಸುತ್ತಿರುವ ಚಿತ್ರವೂ ‘ದೇವದಾಸ್’! ಇನ್ನು ನಮ್ಮ ಬಹುತೇಕ ಭಾಷೆಗಳಲ್ಲಿಯೂ ದೇವದಾಸ್ನ ಹಲವು ಛಾಯೆಗಳ ಚಿತ್ರಗಳು ಬಂದು ಹೋಗಿವೆ. ಆ ಲೆಕ್ಕಕ್ಕೆ ದೇವದಾಸ್- ಭಾರತೀಯ ಕಥಾನಾಯಕನ ಪ್ರಬಲ ಮೂಲ ಮಾದರಿಗಳ್ಲೊಂದು. ಆದರೆ ಈಗ ಯೋಚಿಸಿದರೆ ದೇವದಾಸ್ನದು ನಿವರ್ಿಣ್ಣ ಹತಾಶೆ ಮಾತ್ರವಾಗಿದ್ದು, ಅವನ ಸೋಲಿನಲ್ಲಿ ಯಾವ ಘನತೆಯೂ, ಉದಾತ್ತತೆಯೂ ಇರಲಿಲ್ಲವೆಂದು ಹೊಳೆಯುತ್ತದೆ.
ದೊರೆ ಭಗವಾನ್ ತಿಳಿದೇ ತಮ್ಮ ನಾಯಕನನ್ನು ಹಾಗೆ ಗ್ರಹಿಸಿ ರೂಪಿಸಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಕಸ್ತೂರಿ ನಿವಾಸದ ಕಾಲಕ್ಕೆ 60ರ ದಶಕದ ರಮ್ಯ ಭ್ರಮೆಗಳ ಯುಗ ಮುಗಿದುಹೋಗಿತ್ತು. ಮತ್ತು ಪ್ರತಿಭಟನೆಯ ಸೊಲ್ಲು ಹಿಡಿದ 70ರ ದಶಕ, ಆಗ ‘ಕಸ್ತೂರಿ ನಿವಾಸ’ದ ಚೌಕಟ್ಟಿನಲ್ಲಿ ಇಂಥ ನಿಷ್ಕ್ರಿಯ ನಾಯಕನ ಮಾದರಿಯನ್ನು ಅಪ್ರಜ್ಞಾಪೂರ್ವಕವಾಗಿಯೇ ತಿರಸ್ಕರಿಸಿತೆಂದು ತೋರುತ್ತದೆ. ಅಷ್ಟಾಗಿ ಮತ್ತೆ ಆ ಚಿತ್ರ ಮರುಬಿಡುಗಡೆಯಲ್ಲಿ ಯಶಸ್ವಿಯಾಗಿದ್ದಕ್ಕೆ, ಪುಟ್ಟಸ್ವಾಮಿ ಸೂಚಿಸುವ ಇತರ ಅಂಶಗಳು, ಮತ್ತು ಅಮೋಘ ಎನ್ನಬಹುದಾದ ರಾಜ್ ಅಭಿನಯವೇ ಕಾರಣವಾಗಿರಬೇಕು. ಹೇಗೂ ಲೇಖಕರೇ ಗುರುತಿಸುವ ಹಾಗೆ ‘…ರಾಜ್ರವರ ವೃತ್ತಿಬದುಕಿನಲ್ಲಿ ಅಭಿನಯಿಸಿದ ಸಾಮಾಜಿಕ ಚಿತ್ರಗಳ ಅಭಿನಯವನ್ನು ತಕ್ಕಡಿಯ ಒಂದು ಬಟ್ಟಲಲ್ಲಿಟ್ಟರೆ, ಅದನ್ನು ಸರಿದೂಗಿಸಲು ಮತ್ತೊಂದು ಬಟ್ಟಲಲ್ಲಿ ಕಸ್ತೂರಿ ನಿವಾಸದ ಅಭಿನಯವನ್ನು ಇಡಬೇಕು…’
ಇರಲಿ. ತನ್ನ ಸಾಲುಗಳಲ್ಲಿ ಹೀಗೆ ಓದುಗನನ್ನು ತೊಡಗಿಸಿ ಇಂಥದೊಂದು ಚಚರ್ೆಯನ್ನು ಆಹ್ವಾನಿಸುವುದು ಕೂಡ, ಈ ಕೃತಿಯ ಹೆಗ್ಗಳಿಕೆಯೇ!
ನನಗೆ ಕಾಣುವ ಇನ್ನೊಂದು ಸಣ್ಣ ಕೊರತೆ- ಈ ಪುಸ್ತಕದಲ್ಲಿ ಚಿತ್ರಕಥೆ ಕುರಿತು ಪ್ರತ್ಯೇಕವಾಗಿ ಒಂದಷ್ಟು ಬರೆಯಬಹುದಿತ್ತು. ಯಾಕೆಂದರೆ ನಮ್ಮಲ್ಲಿ ಕಥೆಗೂ ಚಿತ್ರಕಥೆಗೂ ವ್ಯತ್ಯಾಸ ತಿಳಿಯದವರೇ ಬಹಳ ಜನ.
ಯಾವುದೇ ಚಿತ್ರದ ಪ್ರಾಣಶಕ್ತಿಯೇ ಚಿತ್ರಕಥೆ ಎಂಬುದನ್ನು ಗ್ರಹಿಸದವರು, ಚಿ. ಉದಯಶಂಕರ್ ಎಂದ ಕೂಡಲೇ ಅವರ ಹಾಡುಗಳನ್ನು ಮಾತ್ರ ಮೆಲುಕು ಹಾಕುತ್ತ ಅವರೆಂಥ ಅದ್ಭುತ ಚಿತ್ರಕಥಾ ಲೇಖಕರೆಂಬುದನ್ನು ಮನಗಾಣದೆ ಹೋಗುತ್ತಾರೆ. ಎಷ್ಟರ ಮಟ್ಟಿಗೆಂದರೆ, ಅವರ ಚಿತ್ರಕಥೆಗಳಿಲ್ಲದೆ, ಕನ್ನಡದಲ್ಲಿ ಎಷ್ಟೋ ಮಂದಿ ನಿದರ್ೇಶಕರಾಗುವುದೇ ಶಕ್ಯವಿರಲಿಲ್ಲ! ಹಾಗಾಗಿ ಚಿತ್ರಕಥೆಯ ಪ್ರಸ್ತಾಪ ಬಿಟ್ಟು ಅವರ ಕೊಡುಗೆ ಅಳೆಯುವುದೇ ಅಪೂರ್ಣವಾಗುತ್ತದೆ. ಇನ್ನು ಪುಟ್ಟಣ್ಣ ಸದಾ ತಮ್ಮ ಚಿತ್ರಕಥೆ ತಾವೇ ಬರೆದುಕೊಳ್ಳುತ್ತಿದ್ದರು. ಗೆಜ್ಜೆಪೂಜೆ ಚಿತ್ರಕ್ಕೆ ಅವರಿಗೆ ಸಂದ ರಾಷ್ಟ್ರಪ್ರಶಸ್ತಿ ಚಿತ್ರಕಥೆಗಾಗಿಯೇ ಬಂದಿದ್ದು. (ಮತ್ತು ಕನ್ನಡದಲ್ಲಿ ಚಿತ್ರಕಥೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ ಚಿತ್ರಗಳು ಎರಡೇ: ‘ಗೆಜ್ಜೆಪೂಜೆ’ ಮತ್ತು ‘ಗ್ರಹಣ’ ಮಾತ್ರ.)
-ಎನ್.ಎಸ್. ಶಂಕರ್