‘ಆಕ್ಸಿಡೆಂಟ್’ ಸ್ಪಾಟ್ ನಿಂದ…ಸುಧನ್ವಾ ದೇರಾಜೆ

ಸುಧನ್ವಾ ಹುಟ್ಟಿಕೊಂಡದ್ದು ದಕ್ಷಿಣಕನ್ನಡದ ಸುಳ್ಯದಲ್ಲಿ. ಬದುಕು-ಬೆಂಗಳೂರಿನ ಸುದ್ದಿಮನೆಯೊಂದರಲ್ಲಿ. ಪಂಚ ವ್ಯಸನಗಳು :ಸಾಹಿತ್ಯ ನಾಟಕ ಸಿನಿಮಾ ಯಕ್ಷಗಾನ ಕ್ರಿಕೆಟ್.

 

ರೈಲ್ವೆ ಕ್ರಾಸಿಂಗ್‌ನಲ್ಲಿ ಉಗಿಬಂಡಿ ಢಿಕ್ಕಿಯಾಗಿ, ಕಾರಿನಲ್ಲಿದ್ದ ಒಂದು ಗಂಡು ಒಂದು ಹೆಣ್ಣು ಜೀವ ಕಳೆದುಕೊಂಡಿವೆ. ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇತ್ತು ಅನ್ನುತ್ತಿವೆ ಕೆಲವು ಪತ್ರಿಕೆಗಳು. ಅವರು ಸಿಕ್ಕಾಪಟ್ಟೆ ಕುಡಿದಿದ್ದರು ಅನ್ನುತ್ತಾರೆ ಕೆಲವರು. ಡ್ರೈವಿಂಗ್ ಸೀಟಿನಲ್ಲಿದ್ದ ಅವನಿಗೆ ಡ್ರೈವಿಂಗೇ ಬರುತ್ತಿರಲಿಲ್ಲ ಅಂತಲೂ ಹೇಳುತ್ತಾರೆ. ಸಹೋದ್ಯೋಗಿಯೊಂದಿಗೆ ಸತ್ತ ತನ್ನ ಹೆಂಡತಿಯ ಮರಣ ಕಾರಣ ಭೇದಿಸುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಕಂ ನಾಯಕ ರಮೇಶ್ ಅರವಿಂದ್.ಆದರೆ ಮಜಾ ನೋಡಿ- ಸಾಫ್ಟ್‌ವೇರ್ ಮಿತ್ರರು ಸೇರಿ ನಿರ್ಮಿಸಿರುವ, ಕಾರ್ಪೊರೇಟ್ ಗಂಧವಿರುವ ಈ ಚಿತ್ರದಲ್ಲಿ, ತೀರಿಹೋದ ಪತ್ನಿಯ ಬಗೆಗಿರುವಷ್ಟೇ ಪ್ರೀತಿ, ಸಾವಿನ ರಹಸ್ಯವನ್ನು ಭೇದಿಸುವುದರಲ್ಲೂ ನಾಯಕನಿಗಿದೆ ! ಆಕ್ಸಿಡೆಂಟ್ ನಡೆದಾಗ, ತನ್ನ ಸಹೋದ್ಯೋಗಿ (ಪೂಜಾಗಾಂಧಿ) ಜತೆ ವಿಶೇಷ ಪರಿಣತಿಗಾಗಿ ಅಮೆರಿಕಕ್ಕೆ ಹೋಗಿದ್ದಾನೆ ಈ ರೇಡಿಯೊ ಜಾಕಿ ರಮೇಶ್. ನಂತರದ ಘಟನಾವಳಿಯಲ್ಲೂ ಒಳ್ಳೆಯ ಸ್ನೇಹಿತೆಯಾಗಿ ಆಕೆ ಇವನ ಜತೆಗೇ ಇರುತ್ತಾಳೆ. ‘ಇಲ್ಲಿ ನಾಯಕನ ನೋವು ಪ್ರೇಕ್ಷಕನದ್ದಾಗುವುದಿಲ್ಲ’ ಹೌದು. ಆದರೆ ಗಂಡ ಅಳುಮುಂಜಿಯಾಗದೆ, ಸಾವು ಕೌಟುಂಬಿಕ ಘಟನೆಯಾಗದೆ, ಅದರ ರಹಸ್ಯವನ್ನು ಬಿಚ್ಚುವ ಕೆಲಸದಲ್ಲಿ ಸಮಾಜದ ಅನೇಕ ವಿಷಕೊಂಡಿಗಳು ಕಳಚಿಕೊಳ್ಳುತ್ತವೆ. ಹೆಂಡತಿಯ ಸಮಾಜಸೇವೆಯನ್ನು ನಿರ್ಲಕ್ಷಿಸುತ್ತಿದ್ದ, ಉಳಿದವರ ಉಸಾಬರಿ ನಮಗೇಕೆ ಅನ್ನುತ್ತಿದ್ದ ಗಂಡನೇ, ಪತ್ನಿಯ ಸಾವಿನ ರಹಸ್ಯದ ಬಾಹ್ಯ ಸಂಬಂಧಗಳ ಗಂಟನ್ನು ಬಿಚ್ಚಲು ಹೊರಟಿದ್ದಾನೆ. ಲೋಕದ ಡೊಂಕನ್ನು ತನಗರಿವಿಲ್ಲದಂತೆಯೇ ನಿವಾರಿಸುತ್ತಿದ್ದಾನೆ!

ಇಲ್ಲಿ ಸಂಶಯದ ದೃಷ್ಟಿ ಒಂದು ಪಾತ್ರದಿಂದ ಇನ್ನೊಂದಕ್ಕೆ ಬದಲಾಗುತ್ತಲೇ ಹೋಗುತ್ತದೆ. ಆದರೆ ಎಲ್ಲ ಪತ್ತೇದಾರಿ ಘಟನಾವಳಿಯಲ್ಲೂ ಬಹಳ ಸಲ ಸಿಲ್ಲಿ ಅನ್ನಿಸದ ಹಾಗೆ ರಮೇಶ್ ಜಾಗರೂಕರಾಗಿದ್ದಾರೆ. ಉದ್ದ ಜಡೆ ಬಿಟ್ಟುಕೊಂಡ, ನಕಲಿ ಸಿಡಿ ದಂಧೆಯ, ಹರಾಮ್‌ಖೋರನ ಪಾತ್ರದಲ್ಲಿ ಹೊಸಬ ಲೊಂಗಾ ಮಹೇಶ್ ಅಭಿನಯ ಸವಿಯುವಂತಿದೆ. (ಅವರು ದೂರದೂರಿನಲ್ಲಿ ರೇಡಿಯಾಲಜಿಸ್ಟ್ ಅಂತೆ). ಪ್ರಯೋಗರಂಗ ತಂಡದ ‘ನಮ್ಮ ನಿಮ್ಮೊಳಗೊಬ್ಬ’, ‘ಮೈಸೂರು ಮಲ್ಲಿಗೆ’ ನಾಟಕಗಳಲ್ಲಿ ರಾಜೇಂದ್ರ ಕಾರಂತರ ಅಭಿನಯ ಕಂಡು ಬೆರಗಾದವರಿಗೆ ಆಕ್ಸಿಡೆಂಟ್‌ನಲ್ಲಿ ಮತ್ತೊಂದು ರಸದೌತಣ। ಹೆಲ್ತು ಮಿನಿಸ್ಟರು ಚಂದ್ರಪ್ಪನ ಮೂಲಕ. ಇಲ್ಲಿ ಮಂತ್ರ-ಉಗುಳು ಎರಡೂ ಜಾಸ್ತಿ, ನೋಡಿ ಬೇಕಾದರೆ ! ಈ ಎರಡು ಪಾತ್ರಗಳು ವಿಶೇಷ ಮ್ಯಾನರಿಸಂ ಮೂಲಕ ರಮೇಶ್ ಅಭಿನಯವೇ ಕೊಂಚ ಮಂಕಾಗುವಂತೆ ಮಾಡಿವೆ.ಸತ್ತುಹೋದ ಗಂಡಸಿನ ತಂದೆಯ ಪಾತ್ರದಲ್ಲಿ ದತ್ತಣ್ಣ, ಹುಚ್ಚರಾಗಿ ಎರಡೇ ಎರಡು ದೃಶ್ಯಗಳಲ್ಲಿ ಕಾಣಿಸಿಕೊಂಡದ್ದು ಸಾರ್ಥಕವಾಗಿದೆ. ನಿರ್ದೇಶಕ ದಿನೇಶಬಾಬು, ಇಲ್ಲಿ ಪ್ರಮುಖ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮಾಡಿದ್ದಾರೆ. ‘ಶಿಳ್ಳೆಖ್ಯಾತ’ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಒಂದು ಐಟಮ್ ಸಾಂಗು ಮತ್ತು ರಮೇಶ್ ವಿರಹದುರಿಯಲ್ಲಿ ಹಾಡುವ ಎರಡು ಗೀತೆಗಳು ಒಂದೆರಡು ಬಾರಿ ಕೇಳುವಂತಿವೆ. ಇನ್ನು ರೇಖಾ, ಮೋಹನ್, ತಿಲಕ್ ಎಲ್ಲರೂ ತಮ್ಮ ಪಾತ್ರಗಳಲ್ಲಿ ತಲ್ಲೀನರಾಗಿದ್ದಾರೆ. ಅಪರೂಪಕ್ಕೆ ಗಾಂಧಿನಗರಕ್ಕೆ ಕಾಲಿಟ್ಟಿರುವ ಹಿರಿಯರಾದ ಜಿ.ಎಸ್. ಭಾಸ್ಕರ್‌ರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಸಂಕಲನದಲ್ಲಿರುವ ಬಿಗಿ ಚಿತ್ರಕ್ಕೆ ವಿಶೇಷ ಮೆರುಗು, ಗತಿಯನ್ನು ಕರುಣಿಸಿದೆ. ಪಿವಿಆರ್‌ನಲ್ಲಿ ಹಾಸ್ಯ ಸಿನಿಮಾ ‘ಸತ್ಯವಾನ್ ಸಾವಿತ್ರಿ’ ನೋಡಿ, ನಾನು ಅಳುವಂತೆ ಮಾಡಿದ್ದ ರಮೇಶ್ ಈ ಬಾರಿ ಖುಶಿಕೊಟ್ಟಿದ್ದಾರೆ.ಧನಪಿಪಾಸೆ, ಸಮಾಜಸೇವಕರ ಕಷ್ಟ, ಸಾಮ್ರಾಜ್ಯಶಾಹಿ ಕಂಪನಿಗಳ ದುಷ್ಕೃತ್ಯ, ಮಿನಿಸ್ಟ್ರ ದಗಲ್ಬಾಜಿ, ಐಎಎಸ್ ಆಫೀಸರ್ ಸಂದಿಗ್ಧ, ಭೂಗತಲೋಕದ ದಾರಿ…ಹೀಗೆ ಟಿ.ಎನ್. ಸೀತಾರಾಂ ೫೦ ವಾರಗಳ ಧಾರಾವಾಹಿಯಲ್ಲಿ ಹೇಳುವುದನ್ನು ರಮೇಶ್ ೨ ಗಂಟೆಗಳಲ್ಲಿ ಹೇಳುವುದಕ್ಕೆ ಯತ್ನಿಸಿದ್ದಾರೆ. ಆದರೆ ಇದು ಕೇವಲ ‘ಮರ್ಡರ್ ಮಿಸ್ಟರಿ’ ಕಥಾನಕ ಅನ್ನುವ ತಪ್ಪುಗ್ರಹಿಕೆ ಮೂಡಿಸುವಂತಿರುವುದು ಸಿನಿಮಾದ ಕೊನೆಯ ದೃಶ್ಯ. ಮಾಮೂಲಿ ಹಾಹೂ ಫೈಟುಗಳೂ ಇಲ್ಲದೆ ಒಂದೇಒಂದು ಗುಂಡಿನ ಕಾಳಗವಿರುವ (‘ಇಂತಿ ನಿನ್ನ ಪ್ರೀತಿಯ’ದಂತೆ ಅಲ್ಲ !) ಸಿನಿಮಾದಲ್ಲಿ, ಮರ್ಡರ್ ಮತ್ತು ಮಿಸ್ಟರಿ ಬೇರೆಬೇರೆಯಾಗಿ ಪ್ರೇಕ್ಷಕರಿಗೆ ಕಾಣಲೆಂದು ನನ್ನ ಆಸೆ.

ಇದೇ ಚಿತ್ರದ ಇನ್ನೊಂದು ವಿಮರ್ಶೆ-ದಟ್ಸ್ ಕನ್ನಡದಲ್ಲಿ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: