ಒಂದು ಪಿಚ್ಚರಿನ ಬಾಜೂ ಕೂತು

ನಮಸ್ತೇ,
ಇರಲಿ. ನೀವು ಸುಮ್ನೆ ರೀಲ್ ಸುತ್ಕೊಳಿ. ನಾವಿದೀವಲ್ಲ ಸಾಥ್ ಕೊಡೋಕೆ!
– ಚೇತನಾ

ನಮ್ಮ ಸ್ಟಾರ್ ಬರಹಗಾರ್ತಿ ಚೇತನಾ ತೀರ್ಥಹಳ್ಳಿ ಅವರಿಂದ ಮೊದಲ ಶುಭಾಶಯ ನಮ್ಮ ಪೋಸ್ಟ್ ಬಾಕ್ಸ್ ಗೆ ಬಂದಿದೆ. ಥ್ಯಾಂಕ್ಸ್ ಚೇತನಾ- ನಮ್ಮ ಹೊಸ ತಿಕ್ಕಲುತನಕ್ಕೆ ಸಾಥ್ ನೀಡುವುದಾಗಿ ಹೇಳಿದ್ದಕ್ಕೆ. ನಮ್ಮಜ್ಜಿ ಹೇಳ್ತಿದ್ರಲ್ಲಾ- ಇವ್ನು ಸಿನಿಮಾ ಹುಚ್ಚಿಗೆ ಬಿದ್ದು ಹಾಳಾಗೋದ..ಅಂತ. ಇನ್ನು ಈ ಸಿನೆಮಾ ಬ್ಲಾಗ್ ಗೆ ಬಿದ್ದು ಹಾಳಾಗುವುದೊಂದೆ ಬಾಕಿ.

ಎನಿವೇ, ನಿಮ್ಮ ಸಾಥ್ ಗೆ ಥ್ಯಾಂಕ್ಸ್ ಹೇಳುತ್ತಾ ನಿಮ್ಮ ಬ್ಲಾಗ್ ನಲ್ಲಿದ್ದ ‘ಜೋಧಾ ಅಕ್ಬರ್’ ಳನ್ನು ನಮ್ಮ ಬ್ಲಾಗ್ ಗೆ ಮಾನವ ಕಳ್ಳ ಸಾಗಾಣಿಕೆ ಮಾಡಲಾಗಿದೆ.

ಈ ಭಾನುವಾರ ಜಿರಳೆ ಹುಡುಹುಡುಕಿ ಕೊಲ್ಲಬೇಕು, ಬುಕ್ಕು ಜೋಡಿಸಬೇಕು, ಇವತ್ತಾದ್ರೂ ಚೆಂದದ ಅಡುಗೆ ಮಾಡಿ ಊಟಮಾಡಬೇಕು ಅಂತೆಲ್ಲ ಪ್ಲಾನು ಹಾಕ್ಕೊಂಡವಳು, ಸೊರಗುಟ್ಟುತ್ತಿದ್ದ ಮೂಗಿಗೆ ಹೆದರಿ, ಬಿಸಿಬಿಸಿ ನೀರು ಹೊಯ್ಕೊಂಡು ಸ್ನಾನ ಮುಗಿಸಿದವಳೇ ಸಿ.ಡಿ ಅಂಗಡಿಗೆ ಓಡಿದೆ. ಅಲ್ಲಿ ಕಂಡಿತು ಜೋಧಾ ಅಕ್ಬರ್. ಇಷ್ಟು ದಿನ ಜೋಧಾ ಅಕ್ಬರ್ ಸಿನೆಮಾ ಗಲಾಟೆಯ ಬಗ್ಗೆ ಕೇಳಿದ್ದೆನಾದರೂ ಅದಕ್ಕೆ ಸಂಬಂಧಿಸಿದ ಏನನ್ನೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ( ಮೂರ್ಖರ ಪೆಟ್ಟಿಗೆ ಇಟ್ಕೊಳ್ಳದ ಜಾಣೆ ನಾನಾದ್ದರಿಂದ!) ಆಅದ್ರೆ, ಅಂಗಡಿಯಲ್ಲಿ ಮೀಸೆ ಬಿಟ್ಟ (ಅಥವಾ ಅಂಟಿಸಿಕೊಂಡ) ಹೃತಿಕನ ಮುಖ ನೋಡಿಯೇ ಮಳ್ಳು ಹಿಡಿದು ಡಿವಿಡಿ, ಚಿಪ್ಸು ತೊಗೊಂಡುಬಂದು ಕಂಪ್ಯೂಟರಿನ ಮುಂದೆ ಸ್ಥಾಪನೆಗೊಂಡೆ.

ಅಕ್ಬರ್ ಅಂದರೆ ನನ್ನ ಪಾಲಿಗೆ ಬಿಳಿ ಗಡ್ಡದ, ಪುಕ್ಕ ಸಿಕ್ಕಿಸಿದ ಪೇಟದ, ಬೀರಬಲ್ಲನ ಕಥೆಗಳಲ್ಲಿ ಮಾತ್ರ ನಗುವ ಒಬ್ಬ ಗಂಭೀರ ಬಾದ್ ಷಾಹ್. ಜತೆಗೆ, ಪಠ್ಯದ ಇತಿಹಾಸದಲ್ಲಿ ಓದಿಕೊಂಡಿದ್ದಂತೆ, ಜೆಸ್ಸಿಯಾ ತೆಗೆದು ಹಾಕಿದ, ದೀನ್ ಇಲಾಹಿ ಸ್ಥಪಿಸಿದ, ರಜಪೂತ ರಾಜಕುವರಿಯನ್ನ ಮದುವೆಯಾದ – ಇತ್ಯಾದಿ ಸಾಧನೆಯ ‘ಅಕ್ಬರ್ ದ ಗ್ರೇಟ್’. ಸಾಲದೆಂಬಂತೆ, ಪಠ್ಯದಾಚೆಯ ಇತಿಹಾಸಗಳನ್ನೂ ತಿಳಿಯಬೇಕೆಂದು ಓದಿಕೊಂಡಿದ್ದ, ಅಕ್ಬರನ ಕರಾಳಮುಖವನ್ನು ಪರಿಚಯಿಸುವ ಪಿ.ಎನ್.ಓಕರ- ‘ಹೂ ಸೇಸ್ ಅಕ್ಬರ್ ವಾಸ್ ಗ್ರೇಟ್?’ ಸಿನೆಮಾ ನೋಡಲು ಕುಂತಾಗ ನನ್ನ ತಲೆಯಲ್ಲಿ ಇವೆಲ್ಲ ಗಿರಕಿ ಹೊಡೆಯುತ್ತಿದ್ದಿದ್ದು ಹೌದು. ಆದರೆ, ನೋಡುತ್ತ ನೋಡುತ್ತ ಸಿನೆಮಾದ ರಮ್ಯತೆ ನನ್ನನ್ನ ಆವರಿಸ್ಕೊಂದು, ಎಲ್ಲ ಪೂರ್ವಗ್ರಹಗಳು ಕರಗಿ, ಬರೀ ಜೋಧಾ ಮತ್ತು ಅಕ್ಬರ್ ಎಂಬ ಎರಡು ಪಾತ್ರಗಳ ಸುತ್ತ ಹೆಣೆದ ಕಥೆಯ ಅದ್ಭುತ ಮೇಕಿಂಗ್ ನಲ್ಲಿ ಕಳೆದು ಹೋದೆ.

ರೂಪರಾಶಿ ಐಶ್ವರ್ಯ, ಮಿಂಚಿನ ಹುಡುಗ ಹೃತಿಕ್- ಎಲ್ಲೂ ತಾಳ ತಪ್ಪದೆ ನನ್ನನ್ನ ತಮ್ಮ ಲೋಕಕ್ಕೆ ಕರಕೊಂಡುಹೋದರು. ಪಿಚ್ಚರ್ ಮುಗಿಯುವ ಹೊತ್ತಿಗೆ ರಾಜ- ರಾಣಿಯ ಒಂದು ಚೆಂದದ ಕಥೆಯನ್ನ ನೋಡಿದ ಖುಶಿ ನನ್ನದಾಗಿತ್ತು. ಇಡೀ ದಿನ, ಅದರದೇ ಗುಂಗು. ಇಷ್ಟೆಲ್ಲ ಆದಮೇಲೆ ಒಂದು ಪ್ರಶ್ನೆ. ಈ ಪಿಚ್ಚರನ್ನ ವಿರೋಧಿಸಿ, ಬ್ಯಾನ್ ಮಾಡಿ, ಟಾಕೀಸಿಗೆ ಕಲ್ಲು ಹೊಡೆದು, ಟಯರು ಸುಟ್ಟು- ಎಲ್ಲ ಮಾಡಿದರಲ್ಲ, ಯಾಕೆ?

ಜೋಧಾ ಅಕ್ಬರನ ಹೆಂಡತಿ ಅಲ್ಲ ಅನ್ನೋದೊಂದು ಕಾರಣ ಅಂತ ಕೇಳಿದೆ. ಅರವತ್ತರ ದಶಕದಲ್ಲಿ ಮೊಘಲ್ ಎ ಆಜಮ್ ಅಂತ ಒಂದು ಪಿಚ್ಚರ್ ಬಂದಿತ್ತಲ್ಲ, ಅದರಲ್ಲಿ ಅಕ್ಬರನ ಹೆಂಡತಿ ಜೋಧಾ ಬಾಯಿಯಾಗಿ ಪೃಥ್ವಿರಾಜ್ ಕಪೂರರ ಜತೆ ದುರ್ಗಾ ಕೋಟೆ ನಟಿಸಿದ್ದರು. ಆಗ ಯಾವ ರೀತಿಯ ಗಲಾಟೆಯಾಗಿರಲಿಲ್ಲ ಅಲ್ಲವೇ? ಅಂದಿನ ಕಾಲದ ನನ್ನಪ್ಪ ಇವತ್ತಿಗೂ ‘ಜಬ್ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ’ ಹಾಡು ಕೇಳಿದರೆ ಮೈ ಮರೆಯುತ್ತಾರೆ. ಆ ಪಿಚ್ಚರಿನ ವೈಭವವನ್ನ ಹಾಡಿಹೊಗಳುತ್ತಾರೆ. ಅಪ್ಪ ಮಾತ್ರವಲ್ಲ, ಅವತ್ತಿನ ಎಲ್ಲರೂ ಮುಗಿಬಿದ್ದು ಸಿನೆಮಾ ನೋಡಿದ್ದರು, ಒಂದು ಕೊಂಕೂ ತೆಗೆಯದೆ ಮೆಚ್ಚಿಕೊಂಡಿದ್ದರು. ಹಾಗಾದರೆ ನಾವು ಬರಬರುತ್ತ ಸಂಕುಚಿತರಾಗುತ್ತ ಸಾಗುತ್ತಿದ್ದೇವಾ? ನಮ್ಮ ಸೋಲಿಗೆ, ಹತಾಶೆಗೆ, ಪೈಪೋಟಿಗೆ ನಾವು ಆರಿಸಿಕೊಳ್ಳುತ್ತಿರುವ ಕ್ಷೇತ್ರಗಳು ಎಷ್ಟು ಸರಿಯಾಗಿವೆ?

ಅರವತ್ತರ ದಶಕ ಬಿಡಿ, ಶತಶತಮಾನಗಳ ಹಿಂದೆಯೇ ಕರ್ಣನ್ನ, ದುರ್ಯೋಧನನ್ನ, ರಾವಣನ್ನ ಹೀರೋ ಆಗಿಸಿ ಕಾವ್ಯ ಬರೆದು ಕವಿಗಳು ಗೆದ್ದಿದ್ದರು. ಅವರ ಹೀರೋತನ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಕೃಷ್ಣಾರ್ಜುನರ ಇಮೇಜಿಗೇ ಅದು ಸವಾಲಾಗುವಂತಿತ್ತು. ( ದುರ್ಯೋಧನನ್ನ ಸುಯೋಧನ ಅಂತೆಲ್ಲ ಹೊಗಳಿದ್ದು ನೆನೆಸಿಕೊಳ್ಳಿ). ಆದರೂ ಇಂದಿನವರಂತೆ ಢಾಂಬಿಕರಲ್ಲದ ಅಂದಿನ ಭಕ್ತ- ಭಾಗವತರು ಅದನ್ನ ಕಾವ್ಯವಾಗಿಯೇ ಆಸ್ವಾದಿಸಿ ಸುಖಿಸಿದರೇ ವಿನಾ ತಾಳೆಗರಿ ತೆಗೆದೊಯ್ದು ಸುಟ್ಟುಹಾಕಿರಲಿಲ್ಲ! ಇಂದಿನ ನಮಗೆ ಮಾತ್ರ, ಒಂದು ಪಿಚ್ಚರನ್ನ ಪಿಚ್ಚರಿನ ಹಾಗೇ ನೋಡೋಕೆ ಯಾಕೆ ಸಾಧ್ಯವಾಗೋಲ್ಲ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: