ಗಿಂಡಿಮಾಣಿ speaks…

ಹೊಸ ಅಣಕ ದ ಅಂಕಣ ಆರಂಭವಾಗುತ್ತಿದೆ. ಬರೆಯುವವರು ಮಿಸ್ಟರ್ ಗುರ್. ಇವರ ಪ್ರೀತಿಯ ಸ್ಪೈ  ಗಿಂಡಿಮಾಣಿ. ಈತ ಸಿನೆಮಾ ಫೀಲ್ಡ್ ನಲ್ಲಿ ಓಡಾಡಿ ಹೆಕ್ಕಿತರುವ ನಿಜವೋ, ಸುಳ್ಳೋ ಸುದ್ದಿಗಳನ್ನು ಒಪ್ಪವಾಗಿ ಕೊಡುತ್ತೇವೆ. ನಿಜ ಅನಿಸಿದರೆ ವಿಮರ್ಶೆ. ಸುಳ್ಳು ಅನಿಸಿದರೆ ತಮಾಷೆ ಅಂತ ತೆಗೆದುಕೊಳ್ಳಿ. ಈಗ ಆರಂಭ-ಗಿಂಡಿಮಾಣಿ speaks…

-ಮಿಸ್ಟರ್ ಗುರ್

ಚಿತ್ರದ ಮುಹೂರ್ತ ಅದ್ಧೂರಿಯಾಗಿ ಮುಗಿಯಿತು.ಇಡೀ ಚಿತ್ರರಂಗದ ಘಟಾನುಘಟಿಗಳೆಲ್ಲ ಬಂದಿದ್ದರು. ಮೇರು ನಟ ಆ ಚಿತ್ರದ ನಾಯಕ. ತಾರಾ ಮೌಲ್ಯದ ನಿರ್ದೇಶಕರ ಮಹತ್ವಾಕಾಂಕ್ಷೆಯ ಚಿತ್ರ. ಬಾಂಬೆಯಿಂದ ಹಿಂದಿ ಚಿತ್ರರಂಗದ ಭೂಮಿ ತೂಕದ ಹಿರಿಯ ನಟರೂ ಇದ್ದರು. ಅವರು ಆ ಚಿತ್ರದ ನಾಯಕನ ತಂದೆಯ ಪಾತ್ರ ನಿರ್ವಹಿಸುತ್ತಿದ್ದುದರಿಂದ ಹಿಂದಿ ಚಿತ್ರರಂಗದ ಪ್ರಮುಖರೂ ಮುಹೂರ್ತಕ್ಕೆ ಬಂದಿದ್ದರು. ಚಿತ್ರ ಸಾಹಿತ್ಯ ರಚಿಸಿದವರು ನಿರ್ದೇಶಕರ ಅಣ್ಣ. ಕಡಿಮೆ ಜನವೇನಲ್ಲ. ಅವರೂ ಕೆಲವು ಒಳ್ಳೆಯ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರ ಸಾಹಿತ್ಯ ರಚಿಸುವುದರಲ್ಲಿ, ಸಂಭಾಷಣೆ ಬರೆಯುವುದರಲ್ಲಿ ಎತ್ತಿದ ಕೈ. ಆ ಸರಸ್ವತಿಯನ್ನ ತನ್ನ ಕಚ್ಚೆಯಲ್ಲೇ ಕಟ್ಟಿಕೊಂಡಿದ್ದೀನಿ ಎಂಬುದು ಆಗಾಗ್ಗೆ ಅವರು ತಮ್ಮ ಪಾಂಡಿತ್ಯದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಮಾತುಗಳು. ಅವರ ಪ್ರತಿಭೆ ಮತ್ತು ಪಾಂಡಿತ್ಯದ ಬಗ್ಗೆ ನಿಜಕ್ಕೂ ಎರಡು ಮಾತಿಲ್ಲ. ಆದರೆ ಅವರಿಗೆ ಕೆಲಸ ಮಾಡುವುದಕ್ಕಿಂತ ಕಾಲಹರಣ ಮಾಡುವುದರಲ್ಲೇ ಹೆಚ್ಚು ಸಂತೋಷ.

ಆಗ ಇನ್ನೂ ಕನ್ನಡ ಚಲನ ಚಿತ್ರ ನಿರ್ಮಾಣ ಪೂರ್ತಾ ಕರ್ನಾಟಕಕ್ಕೆ ಬಂದಿರಲಿಲ್ಲ. ಚಿತ್ತೀಕರಣವೊಂದು ಮಾತ್ರ ಕರ್ನಾಟಕದಲ್ಲಿ ಅದರಲ್ಲೂ ಮೈಸೂರಿನಲ್ಲಿ ಸಾಂಗವಾಗಿ ನೆರವೇರಿ ಬಿಡುತ್ತಿತ್ತು. ಉಳಿದ ಚಿತ್ರ ನಿರ್ಮಾಣದ ಸಕಲ ತಾಂತ್ರಿಕ ಕೆಲಸ ಬೊಗಸೆಗಳೆಲ್ಲ ಮದ್ರಾಸಿನಲ್ಲೆ. ಹಾಗಾಗಿ ಕನ್ನಡ ತೆಲುಗು ತಮಿಳಿನ ನಿರ್ಮಾಪಕರೆಲ್ಲ ಮದ್ರಾಸಿನವರೇ ಜಾಸ್ತಿ. ಅವರು ಚಿತ್ರ ತಯಾರಿಕೆಗೆ ಎಲ್ಲ ರೆಡಿ ಮಾಡಿಕೊಳ್ಳುತ್ತಿದ್ದರು. ನಾಯಕ ನಾಯಕಿ ಪಾತ್ರ ವಹಿಸುವ ಕಲಾವಿದರ ಡೇಟ್ ಗಳಿಂದು ಹಿಡಿದು ಚಿತ್ರ ತಯಾರಿಕೆಯ ಎಲ್ಲ ವಿಭಾಗಗಳೂ ಅವರ ನಿಯಂತ್ರಣದಲ್ಲಿರುತ್ತಿದ್ದುವು. ಆದರೆ ಚಿತ್ರಕಥೆ ರಚಿಸುವುದಕ್ಕೆ ಆಯಾ ಭಾಷೆಯ ಪಂಡಿತ ಪ್ರತಿಭಾವಂತರ ಕಾಲನ್ನು ಹಿಡಿಯ ಬೇಕಾಗುತ್ತಿತ್ತು. ಹಾಗಾಗಿ ಕನ್ನಡದಲ್ಲಿ ಚಿತ್ರ ಮಾಡಬೇಕೆಂದಾಗೆಲ್ಲ, ಒಳ್ಳೆಯ ಚಿತ್ರ ಸಾಹಿತಿಗಳ ಅಗತ್ಯ ಬಿದ್ದಾಗೆಲ್ಲ ಇವರನ್ನೇ ಅವಲಂಬಿಸುತ್ತಿದ್ದರು. ಇವರು ಮೈಸೂರಿನ ಆದಿನಾಥದಲ್ಲೋ ಚಾಮುಂದೇಶ್ವರಿಯಲ್ಲೋ ನಿರ್ಮಾಪಕರ ಖರ್ಚಿನಲ್ಲಿ ಮಾನಿನಿ ಮದಿರೆಗಳ ಸಂಗದಲ್ಲಿ ಕಾಲಹರಣ ಮಾಡಿ ಬಿಡುತ್ತಿದ್ದರು. ಚಿತ್ರಕಥೆ ರೆಡಿಯಾಗಿರುತ್ತದೆ ಎಂದು ಇವರು ಹೇಳಿದ್ದ ದಿನ ಅವರು ಬಹಳ ನಿರೀಕ್ಷೆಯಲ್ಲಿ ಬರುತ್ತಿದ್ದರು. ನಮ್ಮ ಚಿತ್ರ ಸಾಹಿತಿಗಳ ಬಗ್ಗೆ ಆ ಲಾಡ್ಜು ಹೋಟೆಲ್ಗಳಲ್ಲಿ ಕೆಲಸ ಮಾಡುವ ಹುಡುಗರಿಗೆ ಬಹಳ ಅಭಿಮಾನ. ಮದ್ರಾಸಿನವರು ಲಾಡ್ಜಿನ ಮುಂದೆ ಇಳಿಯುತ್ತಿದ್ದಂತೆ ಇವರಿಗೆ ಮೆಸೇಜು ಬಂದು ಬಿಡುತ್ತಿತ್ತು.

ಇವರಿಗೆ ಅಡ್ವಾನ್ಸ್ ಕೊಟ್ಟು, ರೂಂ ಮಾಡಿ, ಅಷ್ಟೂ ದಿನದ ಇವರೆಲ್ಲ ಖರ್ಚುಗಳನ್ನು ಭರಿಸುತ್ತಿದ್ದ ನಿರ್ಮಾಪಕರು ಮಟ್ಟಿಲೇರಿ ಬರುತ್ತಿದ್ದರೆ ಇತ್ತ ರೂಮಿನಲ್ಲಿ ಚಿತ್ರ ಸಾಹಿತಿಗಳು, ಅಲ್ಲಿ ರೀಮುಗಟ್ಟಲೆ ಇರುವ ಬಿಳಿ ಹಾಳೆಗಳಲ್ಲಿ ಒಂದೊಂದನ್ನೇ ತೆಗೆದುಕೊಂಡು ಸರಸರ ಅಂತಾ ಒಂದೊಂದು ಸಾಲು, ಒಂದೂವರೆ ಸಾಲು ಕನ್ನಡದಲ್ಲಿ ಏನನ್ನಾದರೂ ಗೀಚಿ, ಶಿಷ್ಯವೃತ್ತಿಗೆಂದು ಬಂದವರಲ್ಲಿ ತಮ್ಮ ಸೇವೆಗೆಂದೇ ಮೀಸಲಾಗಿ ಉಳಿದುಕೊಂಡ ಗಿಂಡಿ ಮಾಣಿಯಂಥ ಹುಡುಗನ ಕೈಗೆ ಕೊಡುವುದು, ಅವನು ಆ ಹಾಳೆಗಳನ್ನು ಉಂಡೆ ಮಾಡಿ ರೂಮಿನ ತುಂಬ ಬಂದವರ ಕಣ್ಣಿಗೆ ಎದ್ದು ಕಾಣುವಂತೆ ರೊಯ್ಯನೆ ಎಸೆದು ಪ್ಲೇಸ್ ಮಾಡುತ್ತಿದ್ದ. ನಿರ್ಮಾಪಕರು ಬಾಗಿಲ ಬಳಿ ಬರುವ ವೇಳೆಗೆ ದೃಶ್ಯದ ಸೆಟ್ ರೆಡಿ. ಇನ್ನು ಉಳಿದುಕೊಂಡಿದ್ದು ಆಕ್ಟಿಂಗ್.

ನಿರ್ಮಾಪಕರು ಭಯಭಕ್ತಿಯಿಂದ ರೂಮನ್ನು ಪ್ರವೇಶಿಸಿದರೆ ಆಗ ತಾನೆ ರೆಡಿಯಾದ ಸೆಟ್ಟಿಂಗ್ ನಲ್ಲಿ ನಮ್ಮ ಚಿ.ಸಾ.ಗಳು ತಪೋನಿರತ ಋಷಿಮುನಿಗಳ ಭಂಗಿಯಲ್ಲಿ ಪೆನ್ನು ಹಿಡಿದು ತಮ್ಮ ಕ್ರಿಯೇಟೀವ್ ಧ್ಯಾನದಲ್ಲಿ ಸಮಾಧಿಯಾಗಿರುವುದು ಕಂಡು ಬರುತ್ತಿತ್ತು. ಮುಂದೆ ಟೇಬಲ್ಲಿನ ಮೇಲೆ ನಾಲ್ಕಾರು ಸಾಲುಗಳನ್ನ ಗೀಚಿರುವ ಹಾಳೆ. ಧ್ಯಾನ ಭಂಗ ಮಾಡುವುದಕ್ಕೆ ಅವರಿಗೆ ಭಯ. ಆ ದೃಶ್ಯದೊಳಕ್ಕೆ ಪ್ರವೇಶಿಸುತ್ತಿದ್ದ ಹಾಗೆ ಅವರಿಗೆ ಒಂದಂತೂ ಮನವರಿಕೆಯಾಗಿರುತ್ತಿತ್ತು. ಅದೇನೆಂದರೆ ತಾವು ಮಾಡಬೇಕಿಂದಿರುವ ಚಿತ್ರದ ಸಾಹಿತ್ಯ ರಚನೆ ಇನ್ನೂ ಮುಗಿದಿಲ್ಲ ಅನ್ನುವ ಸತ್ಯ. ಕನ್ನಡ ಓದಲು ಬರದಿದ್ದರೂ ತಮ್ಮ ಚಿತ್ರದ  ರಿಲೀಸ್ ಪ್ರಿಂಟೇ ಆ ಹಾಳೆಯ ಮೇಲೆ ರೂಪುಗೊಳ್ಳುತ್ತಿದೆ ಎಂಬಂತೆ ನಾಲ್ಕಾರು ಸಾಲು ಗೀಚಿ ಅರ್ಧಕ್ಕೇ ನಿಂತಿರುವ ಹಾಳೆಯ ಮೇಲೆ ಕಣ್ಣಾಡಿಸಿ ಅದೇ ನೋಟವನ್ನು ಗಿಂಡಿ ಮಾಣಿಯ ಮುಖದ ಮೇಲೆ ಡಯಾಗನಲ್ ಪ್ಯಾನ್ ಮಾಡಿ ಎಲ್ಲಿಯವರೆಗೆ ಬಂತು ಎಂದು ಹುಬ್ಬಿನಲ್ಲೇ ಕೇಳುತ್ತಿದ್ದರು. ಇವನು ಆ ಚೋರ ಗುರುವಿನ ಪರಮ ಶಿಷ್ಯ. ತಾನಿರುವ ಭಂಗಿಯಲ್ಲೇ ನಿಶ್ಚಲನಾಗಿ ಶಿಲೆಯಂತೆ ಕುಳಿತು ನೋಟವನ್ನು ಮಾತ್ರ ಗುರುಗಳ ಕಡೆಗೊಂದು ಸಾರಿ ಪ್ಯಾನ್ ಮಾಡಿ ಅಥಿಥಿಗಳ ಕಡೆಗೆ ರಿವರ್ಸ್ ಪ್ಯಾನ್ ಮಾಡಿದವನೆ ಸ್ಯಾಂಕ್ಟಿಟಿಯನ್ನು ಹಾಳು ಮಾಡಬೇಡಿ ಎಂಬಂತೆ ಕಣ್ಣಿನಲ್ಲೇ ಸೂಚಿಸಿ ವಾತಾವರಣವನ್ನು ಮತ್ತಷ್ಟು ಗಂಬೀರ ಮಾಡಿಬಿಡುತ್ತಿದ್ದ. ಇದೆಲ್ಲದರ ಪರಿಣಾಮವಾಗಿ ಮದ್ರಾಸಿನಿಂದ ಬಂದವರಿಗೆಸಮಾಧಿ ಸ್ಥಿತಿಯಲ್ಲಿರುವ ಗುರುಗಳಿಂದ  ತಮ್ಮ ಚಿತ್ರಕಥೆಗೆ ಸಂಬಂಧಿಸಿದಂತೆ ಏನೋ ಮಹತ್ತರವಾದುದು ಸಾಕ್ಷಾತ್ಕಾರವಾಗುತ್ತದೆ ಎಂಬ ನಂಬಿಕೆ  ಮೂಡುತ್ತಿತ್ತು.

ಇಷ್ಟಾದ ಮೇಲೆ ನಮ್ಮ ಚಿತ್ರ ಸಾಹಿತಿಗಳು ಸಮಾಧಿ ಸ್ಥತಿಯಿಂದ ಈ ಲೋಕಕ್ಕೆ ಬಂದವರೆ ನಿರ್ಮಾಪಕರ ಇರುವು ಈಗ ತಾನೆ ತಮ್ಮ ಅರಿವಿಗೆ ಬಂದವರಂತೆ ಅವರನ್ನು ಪ್ರೀತಿಯಿಂದ ಕುಶಲ ಕೇಳಿ ಗಿಂಡಿ ಮಾಣಿಯನ್ನು ತನಗೇಕೆ ಅವರ ಆಗಮನವನ್ನು ತಿಳಿಸಲಿಲ್ಲ ಎಂದು ಬೆಂಡೆತ್ತಬೇಕು. ಆಗಂತುಕರು ಅವನದೇನೂ ತಪ್ಪಿಲ್ಲ. ತಾವೇ ನಿಮ್ಮ ಏಕಾಗ್ರತೆಗೆ ಭಂಗ ತರಲು ಇಷ್ಟ ಪಡಲಿಲ್ಲ ಎಂದು ಸಮಾಧಾನ ಮಾಡ ಬೇಕು. ನಂಯತರ ಇವರು ನಿರ್ಮಾಪಕರು ಕೊಟ್ಟಿರುವ ಚಿತ್ರದ ಎಳೆಯನ್ನು ಹಿಗ್ಗಾ ಮುಗ್ಗಾ  ಹೊಗಳಿ ಆ ಎಳೆ ಎಷ್ಟೊಂದು ಚಾಲೆಂಜಿಂಗಾಗಿದೆ ಎಂದರೆ ತಮಗೆ ಅಷ್ಟೂ ದಿನದಿಂದ ಒಂದು ವಾಕ್ಯವನ್ನೂ ಬರೆಯುವುದಕ್ಕೇ ಆಗಿಲ್ಲ ಎಂದು ಉಬ್ಬಿಸುತ್ತಿದ್ದರು. ಕೊನೆಗೆ ಆ ನಿರ್ಮಪಕರು ತಮ್ಮ ಕೆಲಸ ಚೆನ್ನಾಗಿ ಆಗಲಿ ಎಂದು ಮತ್ತಷ್ಟು ಹಣ ನೀಡಿ ವಾಪಸ್ಸಾಗುತ್ತಿದ್ದರು ಇನ್ನೊಂದು ಡೆಡ್ ಲೈನಿನ ಭರವಸೆಯೊಂದಿಗೆ.

ಮೇಲೆ ಹೇಳಿದ ಚಿತ್ರ ಮುಹೂರ್ತದ ವೇಳೆಗೆ  ಇದೇ ಗಿಂಡಿ ಮಾಣಿ  ಆ ಚಿತ್ರ ಸಾಹಿತಿಗಳ ತಮ್ಮನಾದ  ತಾರಾ ನಿರ್ದೇಶಕರ ಬಳಿ ಸಹಾಯಕ  ನಿರ್ದೇಶಕನಾಗಿ ಭಡ್ತಿ ಪಡೆದುಕೊಂಡಿದ್ದ.  ಸರಿ. ಸಮಾರಂಭವೆಲ್ಲ ಮುಗಿದ ನಂತರ ಮುಹೂರ್ತದ ದಿನ  ಒಂದು ಸೀನನ್ನು ಚಿತ್ರೀಕರಣ ಮಾಡೋಣ ಎಂದು ನಿರ್ದೇಶಕರು ತಮ್ಮ ಅಣ್ಣನ ಮಾಜಿ ಗಿಂಡಿ ಮಾಣಿಯಾಗಿದ್ದ  ತಮ್ಮ  ಹಾಲಿ ಸಹಾಯಕ ನಿರ್ದೇಶಕನನ್ನು ಸ್ಕರಿಪ್ಟ್ ತೆಗೆದುಕೊಂಡು ಬಾರೋ ಎಂದು ಅಪ್ಪಣೆ ಕೊಟ್ಟರು. ಇವನು ಅಚ್ಚುಕಟ್ಟಾಗಿ ಬೈಂಡ್ ಮಾಡಿಸಿ ಪೂಜೆಗೆ ಒಂದರ ಮೇಲೊಂದರಂತೆ ಜೋಡಿಸಿಟ್ಟಿದ್ದ  ದಪ್ಪ ದಪ್ಪ ಮೂರು ಹೊತ್ತಿಗೆಗಳಲ್ಲಿ ಮೇಲಿನದನ್ನ ಎತ್ತಿಕೊಂಡು  ತೆರೆದು ನೋಡಿದರೆ ಅಲ್ಲೇನಿದೆ. ಖಾಲಿ ಹಾಳೆ! ಅದು ಮಗುಚಿದರೆ ಮತ್ತೊಂದು ಖಾಲಿ ಹಾಳೆ! ಇವನು ನಮ್ಮ ಕಂಪ್ಯೂಟರ್‍ ನಲ್ಲಿರುವ ಹುಡುಕುವ ನಾಯಿಯ ಹಗೆ ಹಾಳೆ ಮಗುಚಿದ್ದೆ ಮಗುಚಿದ್ದು. ಇಡೀ ಹೊತ್ತಿಗೆ ಖಾಲಿ ಹಾಳೆಗಳನ್ನು ಬೀಂಡ್ ಮಾಡಿಟ್ಟಿರುವ ಪುಸ್ತಕ ಅಷ್ಟೆ. ಚಿತ್ರ ಕಥೆಯೂ ಇಲ್ಲ. ಗಿತ್ರ ಕಥೆಯೂ ಇಲ್ಲ. ಎರಡು ಮೂರನೆಯ ಹೊತ್ತಿಗೆಗಳ ಕಥೆಯೂ ಅದೇ.

ಶಾಟ್ ಡಿವೈಡ್ ಮಾಡಿಕೊಂಡು ಚಿತ್ರೀಕರಣ ಪ್ರಾರಂಭಿಸಲು ಸ್ಕ್ರಿಪ್ಟ್ ಗಾಗಿ ಅಷ್ಟು ದೂರದಲ್ಲಿ ಇವನಿಗೇ ಕಾಯುತ್ತಿದ್ದ ನಿರ್ದೇಶಕರಿಗೆ ಹಾಳೆಗಳನ್ನು ಮಗಚುತ್ತಿರುವ ಇವನನ್ನು ಕಂಡು ಉರಿದು ಹೋಯಿತು. ಮೊದಲೇ ಅವರು ಕನ್ನಡ ಚಿತ್ರ ರಂಗದಲ್ಲಿ ದೂರ್ವಾಸ ಎಂದು ಹೆಸರು ತೆಗೆದು ಕೊಂಡಿರುವವರು. ಸ್ಕ್ರಿಪ್ಟನ್ನು ಕೈಯಲ್ಲಿ ಹಿಡಿದು ಯಾವ ಸೀನನ್ನು ಈವತ್ತು ಚಿತ್ರೀಕರಿಸ ಬೇಕು ಎಂಬ ನಿರ್ಧಾರದ ಪ್ರಿರೋಗೇಟೀವ್ ನಿರ್ದೇಶಕನದು. ಇಡೀ ಕನ್ನಡ ಚಿತ್ರ ರಂಗದ ಮಹಾ ಮಹಿಮರೆಲ್ಲ ನೆರೆದಿದ್ದಾರೆ. ಹಿಂದಿ ಚಿತ್ರ ರಂಗದ ಭೀಷ್ಮ, ಭೂಮಿ ತೂಕದ ಮಹಾನ್ ನಟ ಲೊಕೇಶನ್ ನಲ್ಲಿದ್ದಾರೆ. ಈ ಕಂಬಡ್ಡೆತ್ತದ್ದು ತಾನೇ ಸೀನ್ ಸೆಲಕ್ಷನ್ ಮಾಡ್ತಾವ್ನಲ್ಲ ಅನಿಸಿ ಒಂದು ಹಲ್ಕಾ ಮಾತನ್ನು ಅವನ ಕಡೆ ಬಿಸಾಕಿ ಸ್ಕ್ರಿಪ್ಟ್ ತಗೋಂಡ್ ಬಾರೋ ಎಂದು ಗುಡುಗಿದರು. ಅವನು ಓಡಿ ಬಂದು ಹೊತ್ತಿಗೆಗಳನ್ನು ಬೇರೆಯವರಿಗೆ ಕಾಣಿಸದಂತೆ ಸ್ವಲ್ಪವೇ ತೆರೆದು ಏನೋ ಡಿಸ್ಕಸ್ ಮಾಡುವವನಂತೆ ವಿಷಯ ತಿಳಿಸಿದ. ಎಷ್ಟೇ ಆದರೂ ಸಿನೆಮಾ ತಂತ್ರಜ್ಞಾನದಲ್ಲಿ ನುರಿತ ಪ್ರತಿಭಾವಂತ ನಿರ್ದೇಶಕರಲ್ಲವ. ಚಿತ್ರಕಥೆಯ ಎಳೆಯನ್ನ ಚರ್ಚಿಸಿದ್ದು ನೆನಪಿನಲ್ಲಿತ್ತಲ್ಲ ಅದೇ ಆಧಾರದ ಮೇಲೆ ಒಂದು ದೃಶ್ಯವನ್ನು ಚಿತ್ರೀಕರಿಸಿ ಪ್ಯಾಕ್ ಅಪ್ ಮಾಡಿದರು.

ಆ ಹೊತ್ತಿಗೆಗಳಲ್ಲಿ ತಾನು ಬರೆದಿರುವ ಚಿತ್ರಕಥೆ ಇದೆ. ಅದನ್ನು ಆಧರಿಸಿ ತನ್ನ ತಮ್ಮ ಚಿತ್ರೀಕರಣ ಮಾಡುತ್ತಿದ್ದಾನೆ ಎಂಬಂತೆ ಮುಹೂರ್ತಕ್ಕೆ ಬಂದಿದ್ದ ಮಹಾಮಹಿಮರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಅಣ್ಣ, ಸಹಾಯಕ ನಿರ್ದೇಶಕ, ಡ್ರೈವರ್‍ ನನ್ನು ಕರೆದು ಕೊಂಡು ಸ್ವಲ್ಪ ದೂರ ಹೋದ ಮೇಲೆ ನಿರ್ದೇಶಕರು, ಯಾಕೆ ಹೀಗೆ ಮಾಡಿದೆ. ನಮ್ಮಪ್ಪ ನಿಮ್ಮಪ್ಪ ಒಬ್ನೇನಾ ಇಲ್ಲಾ ಬೇರೆ ಬೇರೇನಾ. ಹೇಳು ಎಂದು ಹಿಡಿದುಕೊಂಡರು. ಕೊನೆಗೆ ಸಹಾಯಕ ನಿರ್ದೇಶಕ ತನ್ನ ಮಾಜಿ ಗುರುವಿನ ಪರ ವಕಾಲತ್ತು ವಹಿಸಿ ರಾತ್ರೆ ಹೊತ್ತು ಗಿಂಡಿ ಮಾಣಿಯಾಗಿ ಚಿತ್ರ ಕಥೆ ಬರೆಸಿ ಹಗಲಿನಲ್ಲಿ ಸಹಾಯಕ ನಿರ್ದೇಶಕನಾಗಿ ಚಿತರೀಕರಣದಲ್ಲಿ ಭಾಗವಹಿಸಿ ಚಿತ್ರ ಮುಗಿಯಿತು.

ಆ ಚಿತ್ರ ಕನ್ನಡದಲ್ಲಿ ಒಂದು ಮುಖ್ಯವಾದ ಚಿತ್ರ. ಅದರ ಹಾಡುಗಳೆಲ್ಲ ಇಂದಿಗೂ ಆಪ್ಯಾಯಮಾನವಾಗಿವೆ. ಆ ಗಿಂಡಿ ಮಾಣಿಯೇ ಇದನ್ನೆಲ್ಲ ನನಗೆ ಹೇಳಿದ್ದು. ನಾನು ಸ್ವಲ್ಪ ನನ್ನ ಕಲ್ಪನೆಯನ್ನ ಚೋಡಿದ್ದೇನೆ. ಆ ಗಿಂಡಿ ಮಾಣಿ ಕೊಟ್ಟಿರುವ ಈ ತರ ಕುರುಕು ನನ್ನ ಚೀಲದಲ್ಲಿ ಬಹಳ ಇವೆ. ನಿಮಗೆ ಇಷ್ಟವಾಯಿತಾ? ಇನ್ನಷ್ಟು ಬೇಕಾ? ತಿಳಿಸಿ.


Advertisements

3 responses to this post.

  1. Super!.. tumba kushi aaytu.. baravanige shaili tumba chennagide.. nanige innastu mattastu beku.. 🙂

    ಉತ್ತರ

  2. ಸತ್ಯದ ‘ಸಾಕ್ಷಾತ್ಕಾರ’ ಮಾಡಿಸಿ ಬಿಟ್ರಿ !!!

    ಉತ್ತರ

  3. ಜೀವನದ ಒಲವು ಇದ್ದ ಗಿಂಡಿಮಾಣಿಗೆ ಸಾಕ್ಷಾತ್ಕಾರವಾದ ಸತ್ಯ ಅಂತೂ ನಮ್ಮ-ನಿಮ್ಮಂತಹವ್ರಿಗೆಲ್ಲ ಗೊತ್ತಾಗಿಬಿಡ್ತಲ್ಲ 😉

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: