ಶಬ್ದ ಪೇಪರ್ ವ್ಹೈಟ್ ಇದ್ದ ಹಾಗೆ

ನರೇಂದ್ರ ಪೈ

ಪ್ರಸೂನ್ ಜೋಶಿಯ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ತಾರೇ ಜಮೀನ್ ಪರ್, ಬ್ಲ್ಯಾಕ್, ರಂಗ್ ದೇ ಬಸಂತಿ ಮುಂತಾಗಿ ಹಲವು ಚಿತ್ರಗಳಲ್ಲಿ ಈತನ ಹಾಡುಗಳನ್ನು ಕೇಳಿದ್ದೀರಿ. ನನ್ನನ್ನು ಸೆಳೆದಿದ್ದು ಇತ್ತೀಚಿನ ತೆಹಲ್ಕಾ ಪತ್ರಿಕೆಯಲ್ಲಿ (15 ಮಾರ್ಚ್ 2008) ಬಂದಿರುವ ಈತನ ಸಂದರ್ಶನ. ನಸ್ರೀನ್ ಮುನ್ನಿ ಕಬೀರ್ ನಡೆಸಿದ ಈ ಸಂದರ್ಶನದಲ್ಲಿ ಪ್ರಸೂನ್ ತನ್ನ ರಕ್ತದ ಕಣಕಣದಲ್ಲೂ ತಾನು ಕವಿ ಎನ್ನುತ್ತಾನೆ! ನಮ್ಮ ಜಯಂತ್ ಕಾಯ್ಕಿಣಿ ಆಗಾಗ ಕವಿತೆಯ ಬಗ್ಗೆ ಆಡುತ್ತ ಬಂದ ಮಾತುಗಳನ್ನೇ ಹೋಲುವಂತಿರುವ ಈತನ ಮಾತುಗಳು ಬರಹಗಾರರಿಗೆ ಕುತೂಹಲ ಹುಟ್ಟಿಸುವಂತಿವೆ.
“ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ.” (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ – ಜಯಂತ ಕಾಯ್ಕಿಣಿ).
“ಕೆಲವೊಮ್ಮೆ ಒಂದು ಶಬ್ದ ಪೇಪರ್ ವ್ಹೈಟ್ ಇದ್ದ ಹಾಗೆ. ಅದನ್ನು ತೆಗೆದುಬಿಟ್ಟರೆ ಎಲ್ಲವೂ ಹಾರಿ ಹೋಗುತ್ತದೆ!”
“ಗದ್ಯ ಆಲಸಿಗಳಿಗೆ. ಕಾವ್ಯ ಯಾರಿಗೆಂದರೆ ಸಮೃದ್ಧ ಪ್ರತಿಮಾಲೋಕವುಳ್ಳವರಿಗೆ. ಅದು ಬಫೆ ಇದ್ದ ಹಾಗೆ. ನೀವೇ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ತಟ್ಟೆಗೇ, ನಿಮಗೆ ಬೇಕಾದ್ದನ್ನೇ ತಂದು ಬಡಿಸುವವರಿಲ್ಲ ಅಲ್ಲಿ. ನೋವೆಂದರೆ ಕಾವ್ಯವನ್ನು ಆಸ್ವಾದಿಸುವ ಸಂವೇದನೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.”
ಪ್ರಸೂನ್ ಬರೇ ಕವಿಯಲ್ಲ. ಹಾಡಿನ ಚಿತ್ರೀಕರಣದ ದೃಶ್ಯ ಜಗತ್ತಿನ ಕುರಿತೂ ಸಲಹೆ ನೀಡಿದ್ದಿದೆ. (ಜಯಂತರೂ ಇದನ್ನು ಮಾಡಿದ್ದಾರೆ). ರಂಗ್ ದೇ ಬಸಂತಿಯ ಒಂದು ಸನ್ನಿವೇಶ. ಮಗನನ್ನು ಕಳೆದುಕೊಂಡ ತಾಯಿಯ ದುಃಖವನ್ನು ಚಿತ್ರಿಸಬೇಕು. ಅಲ್ಲಿ ತಾಯಿ ಮಗ ಕಣ್ಣಾಮುಚ್ಚಾಲೆಯಾಡುತ್ತಿರುವ ದೃಶ್ಯ ತೋರಿಸಿದ್ದು ನೆನಪಿರಬಹುದು ನಿಮಗೆ. ರೆಹಮಾನ್ ಮತ್ತು ಪ್ರಸೂನ್ ಐಡಿಯಾವಂತೆ ಇದು. ಆದರೆ ಇಲ್ಲಿ ಈಗ ಮಗ ಶಾಶ್ವತವಾಗಿ ಅಡಗಿ ಕುಳಿತಿರುವುದು ಮಾತ್ರ ದುರಂತ ಎನ್ನುತ್ತಾರೆ ಪ್ರಸೂನ್. ಹಾಗೆಯೇ ತಾರೇ ಜಮೀನ್ ಪರ್ ಚಿತ್ರದ ಸಂದರ್ಭ. ಮಗನನ್ನು ಬೋರ್ಡಿಂಗ್ ಸ್ಕೂಲ್‌ನಲ್ಲಿ ಬಿಟ್ಟು ಹೋಗುವ ತಾಯಿ. ಮಗು ತಾಯಿಯನ್ನು ನೋಡುತ್ತದೆ…ತಾಯಿಯ ಕಂಗಳಲ್ಲಿ ನೀರು. ಯಾರ ಭಾವನೆಯನ್ನು ಹಾಡಾಗಿಸಲಿ ನಾನು? ತಾಯಿಯದೋ ಮಗುವಿನದೋ? ನೀ ನನ್ನ ಕಂಗಳ ನಕ್ಷತ್ರದಂತೆ, ಬಹು ಪ್ರೀತಿ ನನಗೆ ನೀ ಎನಗೆ ಎಂದು ಬರೆಯಬಹುದಿತ್ತು. ಆದರೆ ಈ ಭಾವಗಳೆಲ್ಲ ಆ ದೃಶ್ಯದಲ್ಲೇ ಇವೆ. ಸೊ, ನಾನು ಆ ಕಂದನ ಹೇಳಲಾಗದ ಭಯಗಳಿಗೆ ಮಾತು ಕೊಡಲು ಬಯಸಿದೆ. ತನ್ನನ್ನು ತೊರೆಯಲಾಗುತ್ತಿದೆ ಎನ್ನುವಾಗಿನ ಭಯ…ಅಮ್ಮ ನಿನಗೆ ಗೊತ್ತೇನಮ್ಮ, ಕತ್ತಲೆಂದರೆ ಹೆದರುತ್ತೇನಮ್ಮ…
ನಿಮಗೆ ಗೊತ್ತಿದೆ, ಈ ಹಾಡು ಏನು ಮಾಡಿತು ಎಂಬುದೆಲ್ಲ.
ಈ ಸಂದರ್ಶನವನ್ನು ದಯವಿಟ್ಟು ಓದಿ. ಪುಸ್ತಕ ಸಿಗದಿದ್ದರೆ ಸೈಟಿಗೆ ಹೋಗಿ, (tehelka.com) ಇಡೀ ಸಂದರ್ಶನ ಅಲ್ಲಿ ಲಭ್ಯವಿದೆ.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: