ಗ್ರಾಂಡ್ ಕೆಫೆಯ ನೆಲಕೋಣೆಯಲ್ಲಿ..

ಮಾಯಾ ಬಜಾರ್

-ಪರಮೇಶ್ವರ ಗುರುಸ್ವಾಮಿ 

 

ಲ್ಯೂಮಿಯೇರ್‍ ಸಹೋದರರು ಮಾರ್ಚ್ ೨೨, ೧೮೯೫ರಂದು ತಮ್ಮ ಸಿನೆಮಾಟೊಗ್ರಾಫ್ ಎಂಬ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದ  ದೃಶ್ಯವನ್ನು ಆಹಾನ್ವಿತ ಪ್ರೇಕ್ಷಕರಿಗೆ ಪ್ರದರ್ಶಿಸಿದ್ದರು. ಅದು, ಲ್ಯೂಮಿಯೇರ್‍ ಕಾರ್ಖಾನೆಯಿಂದ ಕೆಲಸ ಮುಗಿಸಿ ಹೊರಬರುತ್ತಿರುವ ಕಾರ್ಮಿಕರನ್ನು ಚಿತ್ರೀಕರಿಸಿದ ದೃಶ್ಯವಾಗಿತ್ತು. ಪುನಃ ಅದೇ ವರ್ಷ ಜೂನ್ ೧೦ರಂದು ೮ ಚಿತ್ರ ತುಣುಕುಗಳನ್ನು ಪ್ರದರ್ಶಿಸಿದ್ದರು. ಅದೇ ವರ್ಷ ಡಿಸೆಂಬರ್‍ ೨೮ರಂದು ಸಾರ್ವಜನಿಕರಿಗೆ ಪ್ರವೇಶ ದರ ವಿಧಿಸಿ ಪ್ಯಾರಿಸ್ಸಿನ ಗ್ರಾಂಡ್ ಕೆಫೆಯ ನೆಲಕೋಣೆಯಲ್ಲಿ ಕೆಲವು ಚಿತ್ರಗಳನ್ನು ಪ್ರದರ್ಶಿಸಿದರು. ಈ ದಿನಾಂಕವನ್ನೆ ಸಿನೆಮಾ ಹುಟ್ಟಿದ ದಿನವೆಂದು ಸಾಮಾನ್ಯವಾಗಿ ಎಲ್ಲರೂ ಪರಿಗಣಿಸುತ್ತಾರೆ. ತಾಂತ್ರಿಕವಾಗಿ ಮಾರ್ಚ್ ೨೨ರಂದು ನಡೆದ ಪ್ರದರ್ಶನವೇ ಮೊದಲನೆಯದಾದರೂ ಅಂದಿನ ಮತ್ತು ಜೂನ್ ೧೦ರಂದಿನ  ಪ್ರದರ್ಶನಗಳು ಖಾಸಗಿಯಾಗಿದ್ದು ಡಿಸೆಂಬರ್‍ ೨೮ರ ಪ್ರದರ್ಶನ ಸಾರ್ವಜನಿಕ ಮತ್ತು ಪ್ರವೇಶ ದರ ವಿಧಿಸಿದ್ದರಿಂದಾಗಿ ಇಂಡಸ್ಟ್ರಿಯ ಜನರಿಗೆ  ಮುಖ್ಯವಾದ ದಿನ.

ಆವತ್ತಿನ ಪ್ರೇಕ್ಷಕರಿಗೆ ತೆರೆಯ ಮೇಲೆ ಚಲನವಲನಗಳಿಂದ ಕೂಡಿದ ಪ್ರತಿಬಿಂಬಗಳನ್ನು ನೋಡುತ್ತಿರುವುದು ಹೊಸ ಅನುಭವ. ತೆರೆಯ ಮೇಲೆ ರೈಲೊಂದು ನಿಲ್ದಾಣಕ್ಕೆ ಆಗಮಿಸುತ್ತಿರುವ ದೃಶ್ಯವನ್ನು ನೋಡುತ್ತಿದ್ದವರು ರೈಲು ತಮ್ಮ ಮೇಲೇ ನುಗ್ಗಿಬಿಡುತ್ತಿದೆ ಎಂಬ ಗಾಬರಿಯಿಂದ ಅರಚುತ್ತ ಚೆಲ್ಲಾಪಿಲ್ಲಿಯಾಗಿದ್ದರಂತೆ.

ಎಡಿಸನ್ನನ ಚಿತ್ರವೊಂದು ಸಮುದ್ರದ ಅಲೆಗಳನ್ನು ಸೆರೆ ಹಿಡಿದಿತ್ತು.  ಆ ದೃಶ್ಯವನ್ನು ವೀಕ್ಷಿಸುತ್ತಿದ್ದ ಮುಂದಿನ ಸಾಲಿನ ಪ್ರೇಕ್ಷಕರು ತಮ್ಮ ಮೇಲೆ ತುಂತರು ಹನಿಯುತ್ತದೆ ಎಂದು ಛತ್ರಿಯನ್ನು ಅಡ್ಡ ಹಿಡಿದಿದ್ದರಂತೆ.  ಹಾಗೆ ನೋಡಿದರೆ ಮೊದಲು ಚಲನಚಿತ್ರಗಳನ್ನು ಜನರಿಗೆ ತೋರಿಸಿದವನು ಥಾಮಸ್ ಆಲ್ವ ಎಡಿಸನ್. ಗೊತ್ತಲ್ಲ. ಶಾಲೆಯಲ್ಲಿ ಡಲ್ ವಿದ್ಯಾರ್ಥಿ ಎನಿಸಿಕೊಂಡಿದ್ದವನು ಮುಂದೆ ಪ್ರಖ್ಯಾತ ಸಂಶೋಧಕನಾದವನು. ಆಧುನಿಕ ಜೀವನದಲ್ಲಿ ಅನಿವಾರ್ಯವೆನಿಸಿದ ೧೫೦ಕ್ಕೂ ಹೆಚ್ಚು ವಸ್ತುಗಳನ್ನು ಕೊಟ್ಟವನು. ಕರೆಂಟ್ ದೀಪ ಅವುಗಳಲ್ಲಿ ಒಂದು. 

೧೮೯೧ರಲ್ಲಿಯೇ “ಫ್ರೆಡ್ ಆಟ್ ನ ಸೀನು” ಎಂಬ ತುಣುಕನ್ನು ಎಡಿಸನ್ ಕಂಪನಿ ಚಿತ್ರೀಕರಿಸಿತ್ತು. ಎಡಿಸನ್ನನ ಕಂಪನಿಯಲ್ಲಿ ಚಲನಚಿತ್ರ ವಿಭಾಗದ ಉಸ್ತುವಾರಿ ಹೊತ್ತಿದ್ದವನು ವಿಲಿಯಮ್ ಕೆನಡಿ ಡಿಕ್ಸನ್. ಇವನು ಸಿನೆಮಾದ ಮೊದಲ ಥಿಯರೆಟೀಷಿಯನ್ ಸಹ. ಇವನ ಮಾತನ್ನು ಕೇಳಿದ್ದರೆ ಎಡಿಸನ್ನನೇ ಸಿನೆಮಾದ ಜನಕನಾಗುತ್ತಿದ್ದ. ಸಿನೆಮಾದಲ್ಲಿ ಅಂತಾ ದುಡ್ಡು ಇಲ್ಲ ಎಂದು ಭಾವಿಸಿದ ಎಡಿಸನ್ ಡಿಕ್ಸನ್ನನ ಪ್ರಯೋಗಗಳನ್ನು ಮುಂದುವರೆಸುವುದಿಲ್ಲ. ಎಡಿಸನ್ ಕಂಪನಿಯ ಚಿತ್ರೀಕರಣ ಕ್ಯಾಮೆರಾದ ಹೆಸರು ’ಕೈನೆಟೋಗ್ರಾಫ್’ ಮತ್ತು ಪ್ರದರ್ಶಕದ ಹೆಸರ ’ಕೈನೆಟೋಸ್ಕೋಪ್’. ಗುಣಮಟ್ಟದಲ್ಲಿ ಚೆನ್ನಾಗಿದ್ದುವು. ಇನ್ನೊಂದು ವಿಷಯ. ಕ್ಯಾಮೆರಾದಲ್ಲಾಗಲಿ ಪ್ರೊಜೆಕ್ಟರ್‍ ನಲ್ಲಾಗಲಿ ಫಿಲ್ಮ್ ಪಟ್ಟಿಯು ಸೆಕೆಂಡಿಗೆ ಇಂತಿಷ್ಟು ಫ್ರೇಮ್ ಗಳ ವೇಗದಲ್ಲಿ ಚಲಿಸಬೇಕಲ್ಲ. ಅದಕ್ಕಾಗಿ ಪಟ್ಟಿಯ ಎರಡೂ ಬದಿಯಲ್ಲಿ ಫ್ರೇಮಿಗೆ ನಾಲ್ಕರಂತೆ ರಂಧ್ರಗಳನ್ನು ಮಾಡಿದವನು ಎಡಿಸನ್. ಇಂದಿಗೂ ಅದೇ ಪ್ರಮಾಣ.

ಆದರೆ ಕೈನೆಟೋಗ್ರಾಫ್ ಬಳಸಿ ಚಿತ್ರೀಕರಿಸುವುದೇ ಒಂದು ಹರ ಸಾಹಸ. ಏಕೆಂದರೆ ಅದು ಭಾರೀ ಗಾತ್ರದಾಗಿದ್ದು ಹಳಿಗಳ ಮೇಲಿಟ್ಟು ಹೆಚ್ಚು ಕಡಿಮೆ ಸ್ಥಾವರ ಅನ್ನುವಷ್ಟರ ಮಟ್ಟಿಗೆ ನಿರ್ಬಂಧಿತ ಚಲನೆಯನ್ನು ಹೊಂದಿತ್ತು. ಚಿತ್ರೀಕರಣಕ್ಕಾಗಿ ’ಬ್ಲಾಕ್ ಮಾರಿಯಾ’ ಎಂಬ ತಡಿಕೆಯಂಥ ಸ್ಟುಡಿಯೋವನ್ನು ನಿರ್ಮಿಸಲಾಗಿತ್ತು. ಅದರ ನೆತ್ತಿಯಲ್ಲಿ ಬೆಳಕಿಗಾಗಿ ದೊಡ್ಡ ಕಿಂಡಿಯನ್ನಿಡಲಾಗಿತ್ತು. ಆಕಾಶದಲ್ಲಿ ಸೂರ್ಯ ಚಲಿಸಿದತೆ ಬ್ಲಾಕ್ ಮಾರಿಯಾದೊಳಗಿನ ಬೆಳಕಿನ ಕಿರಣಗಳೂ ಚಲಿಸುತ್ತಿದ್ದುವು. ಅದನ್ನನುಸರಿಸಿ ಕಲಾವಿದರ ನಟನಾ ಪ್ರದೇಶ ಸಹ ಬದಲಾತ್ತಿತ್ತು. ಬೆಳಿಗ್ಗೆ ಈ ತುದಿಯಲ್ಲಿದ್ದರೆ ಸಂಜೆಯ ಹೊತ್ತಿಗೆ ಆ ತುದಿ. ಇದನ್ನೆಲ್ಲ ಅನುಸರಿಸಿಕೊಂಡು ದೈತ್ಯ ಕೈನೆಟೋಗ್ರಾಫ್    ಹಳಿಯ ಮೇಲೆ ಸೂಕ್ತ ಸ್ಥಳದಲ್ಲಿ ನಿಂತು ಚಿತ್ರೀಕರಿಸುತ್ತಿತ್ತು. ಇನ್ನು ಕೈನೆಟೋಸ್ಕೋಪ್. ಇದಂತೂ ಸ್ಥಾವರವೇ. ಅದರ ಇಣಕು ಕಿಂಡಿಯಲ್ಲಿ ಕಣ್ಣನ್ನಿಟ್ಟು ಒಂದು ನಿಕ್ಕಲ್ ಕಾಸನ್ನು ಹಾಕಿದರೆ ಕೆಲವು ಸೆಕೆಂಡುಗಳ ಚಲನಚಿತ್ರ ವೀಕ್ಷಣೆ.  ಬಾಂಬೆ ದೇಖೋ, ಡೆಲ್ಲಿ ದೇಖೋ ಇತ್ತಲ್ಲ ಹಾಗೆ.

ಎಡಿಸನ್ನ ಕಂಪನಿಯಲ್ಲಿ ಫ್ರೆಡ್ ಆಟ್ ಎಂಬ ಒಬ್ಬ ಕಾರ್ಮಿಕನಿದ್ದ. ಅವನು ಹಾಸ್ಯಸ್ಪದ ಹಾವಭವಗಳನ್ನು ಪ್ರದರ್ಶಿಸುತ್ತಿದ್ದ. ಸರಿ. ಡಿಕ್ಸನ್ ಅವನು ಹಾಸ್ಯ ಭಂಗಿಯಲ್ಲಿ ಸೀನುವುದನ್ನು ಕ್ಲೋಸ್ ಅಪ್ ನಲ್ಲಿ ಚಿತ್ರೀಕರಿಸಿದ, ಇದು ದಾಖಲಾಗಿರುವ ಮೊದಲ ಚಲನಚಿತ್ರ.

ಸಿನೆಮಾ ಮಾಧ್ಯಮವು ಟಿಂಕರ್‍ ಮತ್ತು ತಿಂಕರ್‍ ಗಳು ನಮಗೆ ಕೊಟ್ಟ ಕೊಡುಗೆ. ಭಾರಿ ಜುಗ್ಗನಾಗಿದ್ದ ಎಡಿಸನ್ ಗೆ  ಚಲನಚಿತ್ರವು ಒಂದು ಹಣ ಮಾಡುವ  ಚಟುವಟಿಕೆಯಾಗಿ ಬೆಳೆಯುವ ಬಗ್ಗೆ ನಂಬಿಕೆಯಿಲ್ಲದ್ದರಿಂದ ಯೂರೋಪಿನಲ್ಲಿ ತನ್ನ ಸಲಕರಣೆಗಳನ್ನು ಪೇಟೆಂಟ್ ಮಾಡಿಸಿರಲಿಲ್ಲ. ಫ್ರಾನ್ಸಿನ ಲ್ಯೂಮಿಯೇರ್‍ ಸಹೋದರರು ೧೮೯೪ರಲ್ಲಿ ಎಡಿಸನ್ನನ ಸಲಕರಣೆಗಳನ್ನು ತೆಗೆದುಕೊಂಡು ಅದನ್ನು ಬಿಚ್ಚಿ, ಜೋಡಿಸಿ ಪ್ರಯೋಗಗಳನ್ನು ಮಾಡಿ ತಮ್ಮದೇ ಆದ ಸಿನೆಮಾಟೋಗ್ರಾಫ್ ಯಂತ್ರವನ್ನು ಅಭಿವೃದ್ಧಿ ಪಡಿಸಿದರು. ಇವರ ಆವಿಷ್ಕಾರ ಜಗತ್ತಿನ ಮನರಂಜನೆ ಮತ್ತು ಉದ್ಯಮಲೋಕಗಳಲ್ಲಿ ಕ್ರಾಂತಿಯ ಬಿರುಗಾಳಿಯನ್ನೇ ಎಬ್ಬಿಸಿತು.

 

ಮುಖ್ಯವಾಗಿ, ಇವರ ಸಿನೆಮಾಟೋಗ್ರಾಫ್ ಪುಟ್ಟದಾಗಿತ್ತು ಮತ್ತು ಜಂಗಮವಾಗಿತ್ತು. ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಕೊಂಡೊಯ್ದು  ಚಿತ್ರೀಕರಣ ಮಾಡಬಹುದಾಗಿತ್ತು. ಬಹಳ ಸರಳವಾದ ಉಪಕರಣವಾಗಿತ್ತು. ಚಿತ್ರೀಕರಿಸಲು ವಿದ್ಯತ್ತಿನ ಅಗತ್ಯವಿಲ್ಲದೆ ಕೈಯಲ್ಲೇ ಕ್ರಾಂಕ್ ಮಾಡಬಹುದಿತ್ತು. ಅಲ್ಲದೇ ಅದೇ ಉಪಕರಣದ ಮೂಲಕ ತರೆಯ ಮೇಲೆ ವಿಕ್ಷಕ ಸಮೂಹಕ್ಕೆ ಪ್ರದರ್ಶನ ಮಾಡಬಹುದಿತ್ತು. ಈಗ ಬಳಕೆಯಲ್ಲಿರುವ ಅತ್ಯಾಧುನಿಕ ಚಲನಚಿತ್ರ ಕ್ಯಾಮೆರಾಗಳ ಆದಿ ಕ್ಯಾಮೆರಾ ಮತ್ತು ಪ್ರೊಜೆಕ್ಟರ್‍ ಗಳ ಆದಿ ಪ್ರೊಜೆಕ್ಟರ್‍ ಈ ಸಿನೆಮಾಟೋಗ್ರಾಫ್. ಆದ್ದರಿಂದಲೇ ಲ್ಯೂಮಿಯೇರ್‍ ಸಹೋದರರನ್ನು ಚಲನಚಿತ್ರ ಮಾಧ್ಯಮದ ಜನಕರೆಂದು ಗುರುತಿಸುವುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: