12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ

ಬ್ರಹ್ಮಾಂಡದ ಗೊಂದಲಕ್ಕೆ ಒಂದಿಷ್ಟು ಕೊಡುಗೆ ನೀಡಬೇಕು ಎಂದೇ ಬ್ಲಾಗ್ ಆರಂಭಿಸಿದ್ದೇನೆ ಎಂದು ಧೈರ್ಯವಾಗಿ ಘೋಷಿಸಿಕೊಂಡವರು ಚಕೋರ. ‘ಮನಕ್ಕೆ ನೆನಹಾಗಿ…’ ಇವರ ಬ್ಲಾಗ್. ಇವರ ಬ್ಲಾಗ್ನಲ್ಲಿ ಬಂದ ಒಂದು ಉತ್ತಮ ಬರಹ -12 Angry menರನ್ನು ನೋಡಿದ ಬಳಿಕ ಲೇಖನ ಬಹುಷಃ ಸಿನೆಮಾ ಜಗತ್ತಿಗೆ ಒಂದು ಒಳ್ಳೆಯ ಸೇರ್ಪಡೆ.

 

ಮೊನ್ನೆ 12 Angry Men ಎಂಬ ಸಿನೆಮಾ ನೋಡಿದೆ. ಸಿಡ್ನಿ ಲುಮೆಟ್ ನಿರ್ದೇಶಿಸಿದ ಮೊದಲ ಸಿನೆಮಾ. ೧೯೫೧ರ ಸಿನೆಮ. ಕಪ್ಪುಬಿಳುಪು ಸಿನೆಮಾ. ರೆಜಿನಾಲ್ಡ್ ರೋಸ್ ಎಂಬಾತನ ಅದೇ ಹೆಸರಿನ ನಾಟಕವೊಂದನ್ನು ಆಧರಿಸಿದ್ದು. ಅದನ್ನು ನೋಡಿದ ಕೂಡಲೇ ಮತ್ತೆ ಅದೇ, “Oh, they don’t make them like this anymore!” ಎಂಬ familiar ಫೀಲಿಂಗು.

12 Angry Men, ಸರಳ ಕಥಾವಸ್ತುವಿನ, ನೇರ ನಿರೂಪಣೆಯ ಸಿನೆಮಾ. ಈ ಸಿನೆಮಾದ ಅತ್ಯಂತ ಎದ್ದುಕಾಣುವ ತಂತ್ರವೆಂದರೆ, ಬಹುತೇಕ ಇಡೀ ಸಿನೆಮಾ ಒಂದೇ ಒಂದು ಕೋಣೆಯ ಒಳಗೆ, ಒಂದು ಟೇಬಲ್ಲಿನ ಸುತ್ತ ನಡೆಯುವುದು. ಮೊದಲಿನ ಒಂದು ನಿಮಿಷದಷ್ಟು ಕಾಲ ಕೋರ್ಟಿನಲ್ಲೂ, ಕೊನೆಯ ಕೆಲ ಕ್ಷಣಗಳು ಕೋರ್‍ಟಿನ ಹೊರಗೂ, ಮತ್ತೆ ನಡುವೆ ಒಂದೆರಡು ನಿಮಿಷ ಮೇಲೆ ಹೇಳಿದ ಕೊಠಡಿಗೆ ಹೊಂದಿಕೊಂಡ ಶೌಚದ ಕೋಣೆಯಲ್ಲೂ ನಡೆಯುತ್ತವೆ. ಉಳಿದ್ದದ್ದೆಲ್ಲ ಆ ಕೋಣೆಯಲ್ಲೆ. ಯಾವುದೇ ಹಿನ್ನೆಲೆ ಸಂಗೀತವಿಲ್ಲದ, ಸಹಜವಾದ ಶಬ್ದಗಳನ್ನು — ಕೆಮ್ಮುವುದು, ಸೆಕೆಗೆ ಉಸ್ಸೆನ್ನುವುದು, ಗುಸುಗುಸು ಮಾತಾಡುವುದು — ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ, ಎಚ್ಚರಿಕೆಯ ಕ್ಯಾಮರಾ ಬಳಕೆಯಿಂದ ನಿಧಾನವಾಗಿ ಮುಂದರಿಯುವ ಈ ಸಿನೆಮಾ, ತನ್ನ ಯಾವುದೇ ವಿಪರೀತ ತಂತ್ರಗಾರಿಕೆಯ ಹಂಗಿಲ್ಲದ ಸ್ವಭಾವದಿಂದಲೇ ಮನಸೂರೆಗೊಳ್ಳುತ್ತದೆ.

ಕೆಳವರ್ಗದ ವಸತಿಯಿರುವ ಜಾಗವೊಂದರಲ್ಲಿ ಒಂದು ಕೊಲೆಯಾಗಿದೆ. ಒಬ್ಬ ಲ್ಯಾಟಿನೋ ಹುಡುಗ ತನ್ನ ತಂದೆಯನ್ನು ಕೊಂದಿರುವ ಆರೋಪದ ಮೇಲೆ ಕೋರ್ಟಿನಲ್ಲಿದ್ದಾನೆ. ಸಿನೆಮಾ ಶುರುವಾದಾಗ ಎಲ್ಲ ವಾದವಿವಾದಗಳು ಮುಗಿದಿವೆ. ಜಜ್ ಒಮ್ಮೆ ಕೇಸಿನ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಿ, ಅಲ್ಲಿ ಕೂತ ನ್ಯಾಯಾಧಿಕರಣಕ್ಕೆ (jury) ಮುಂದಿನ ವಿಚಾರವನ್ನು ಬಿಡುತ್ತಾನೆ. ೧೨ ಮಂದಿ ಸದಸ್ಯರಿರುವ ಆ ಜ್ಯೂರಿ, ಆಪಾದಿತ ಅಪರಾಧಿಯೋ ಅಲ್ಲವೋ ನಿರ್ಧರಿಸಬೇಕು. ಆದರೆ, ಜಜ್ ಹೇಳುತ್ತಾನೆ – ಎರಡರಲ್ಲಿ ಯಾವ ನಿರ್ಧಾರಕ್ಕೆ ನೀವು ಬಂದರೂ ಸರಿಯೇ, ಆದರೆ ಅದು ಒಮ್ಮತದ ನಿರ್ಧಾರವಾಗಿರಬೇಕು; ಅಲ್ಲದೇ, ಮೊಕದ್ದಮೆಯ ಅಂಶಗಳು ಹಾಗೂ ಆರೋಪಿಯ ವಿರುದ್ಧದ ಸಾಕ್ಷ್ಯ, ಸಂದೇಹಾತೀತವಾಗಿದ್ದಲ್ಲಿ (beyond reasonable doubt) ಮಾತ್ರ ಆರೋಪಿಯನ್ನು ಅಪರಾಧಿಯೆಂದು ಪರಿಗಣಿಸತಕ್ಕದ್ದು.

ಅಲ್ಲಿಂದ ಮುಂದೆ ಜ್ಯೂರಿಯ ಕೋಣೆಗೆ ಬಂದು ಎಲ್ಲರೂ ಸೇರುತ್ತಾರೆ. ಜ್ಯೂರಿಯ ಪ್ರಕಾರ ಇದೊಂದು Open and Shut case; ಆ ಹುಡುಗ ಕೊಲೆ ಮಾಡಿದ್ದಾನೆನ್ನುವುದು ನಿಚ್ಚಳ; ಸಂದರ್ಭ ಹಾಗಿದೆ, ಅಪ್ಪ ಹಾಗೂ ಮಗನಲ್ಲಿ ವಿಪರೀತ ಮನಸ್ತಾಪವಿದೆ; ಮೇಲಿಂದ ಮೇಲೆ ತನ್ನನ್ನು ಹೊಡೆಯುವ ಬೈಯ್ಯುವ ಅಪ್ಪನನ್ನು ಕೊಲ್ಲುವ ಹೇತು ಮಗನಲ್ಲಿರುವುದು ಈ ಕೇಸಿನಲ್ಲಿ ಸ್ಪಷ್ಟ; ’ನಿನ್ನನ್ನು ಕೊಂದೇ ತೀರುತ್ತೇನೆ,’ ಎಂದು ಆ ಹುಡುಗ ಕಿರುಚಿದ್ದನ್ನು ಕೇಳಿದ್ದೇವೆಂದು ಹೇಳುವ ಸಾಕ್ಷಿಗಳಿವೆ; ಕೊಲೆಗೆ ಬಳಸಿದ ಆಯುಧ ಸ್ಥಳದಲ್ಲೇ ಸಿಕ್ಕಿದೆ; ಅವನು ಚಾಕುವಿನಿಂದ ತಿವಿದಿದ್ದನ್ನು ನೋಡಿದೆ ಎಂದು ಹೇಳುವ ಎದುರು ಮನೆಯ ಹೆಂಗಸಿದ್ದಾಳೆ; ಅವನು ಕೊಲೆ ಮಾಡಿದ ನಂತರ ಅವಸರದಿಂದ ಪರಾರಿಯಾದದ್ದನ್ನು ನೋಡಿದೆ ಎಂದು ಹೇಳುವ ಕೆಳಗಿನ ಮನೆಯ ಮುದುಕನಿದ್ದಾನೆ; ಆ ಹುಡುಗ “ಆಯುಧವನ್ನು ಮರಳಿ ತೆಗೆದುಕೊಳ್ಳಲು ಬಂದಾಗ” ಬಂಧಿತನಾಗಿದ್ದಾನೆ. ಜಜ್‍ನಿಗೆ ಕೂಡ ಸುಮ್ಮನೆ ಶಿಕ್ಷೆವಿಧಿಸುವ ಬದಲು ಇದನ್ನು ಎಳೆಯುವುದು ಬೇಸರದ ವಿಚಾರ, ಆದರೆ ಅವನು ಅವಸರ ಮಾಡಲಾರ. ಅನಿವಾರ್ಯವಾಗಿ ನ್ಯಾಯಮಂಡಳಿಗೆ ಅದನ್ನು ಬಿಟ್ಟಿದ್ದಾನೆ. ಹೀಗಿರುವಾಗ, ನ್ಯಾಯಮಂಡಳಿಯ ಎಲ್ಲ ಸದಸ್ಯರಿಗೂ ಅವನು ಅಪರಾಧಿಯೆಂಬುದು ಸ್ಪಷ್ಟ. ಒಬ್ಬನನ್ನು ಬಿಟ್ಟು.

ಅಲ್ಲಿಗೆ ಬಿಕ್ಕಟ್ಟು ಶುರುವಾಗುತ್ತದೆ. ನಿರ್ಧಾರ ಒಮ್ಮತದ್ದಾಗಬೇಕು. ಆದರೆ ಒಬ್ಬ ಮೂರ್ಖ ಉಳಿದ ೧೧ ಜನರ ವಿರುದ್ದ ನಿಂತಿದ್ದಾನಲ್ಲ! “ನಾವೆಲ್ಲ ಅವನು ಅಪರಾಧಿ ಎಂದು ಹೇಳುತ್ತಿದ್ದೇವೆ. ನಿನಗೆ ಅವನು ನಿರಪರಾಧಿ ಎಂದೆನ್ನಿಸುತ್ತಿದೆಯೇ?” ಎಂದೊಬ್ಬ ಅವನನ್ನು ಕೇಳುತ್ತಾನೆ. ಅವನು ಸರಳವಾಗಿ, ನಿಧಾನವಾಗಿ ಹೇಳುತ್ತಾನೆ, “ನನಗೆ ಗೊತ್ತಿಲ್ಲ.” ಇನ್ನೊಬ್ಬ ಕೇಳುತ್ತಾನೆ — ಅವನಿಗೆ ಇದನ್ನು ಮುಗಿಸಿ ಬೇಸ್‍ಬಾಲ್ ಪಂದ್ಯ ನೋಡಲು ಹೋಗುವ ಅವಸರ — “ಛೇ! ಈಗೇನು ಮಾಡುವುದು?” ಅವನು ಮತ್ತೆ ಹೇಳುತ್ತಾನೆ, “ನನಗೆ ಗೊತ್ತಿಲ್ಲ. ಸುಮ್ಮನೆ ಮಾತಾಡೋಣ. ಸ್ವಲ್ಪ ಹೊತ್ತು, ಇದರ ಬಗ್ಗೆ.” “ಮಾತಾಡೋಣ?!” “ಹೌದು. ೧೮ ವರ್ಷದ ಹುಡುಗನೊಬ್ಬನನ್ನು ೫ ನಿಮಿಷದ ಮಾತೂ ಇಲ್ಲದೆ ವಿದ್ಯುತ್ ಕುರ್ಚಿಯ ಮೇಲೆ ಕೂಡಿಸಿ ಕೊಲ್ಲುವುದು ನನ್ನಿಂದ ಸಾಧ್ಯವಿಲ್ಲ. ಮಾತಾಡೋಣ ಇನ್ನೊಮ್ಮೆ, ಎಲ್ಲ ವಿವರಗಳ ಬಗ್ಗೆ.”

ಮುಂದೆ ಕೇಸಿನ ವಿವರಗಳಷ್ಟೆ ಅಲ್ಲದೆ ಜ್ಯೂರಿಯ ಸದಸ್ಯರ ಸ್ವಭಾವಗಳು, ಅವರ ವಿವಿಧ ಹಿನ್ನೆಲೆಗಳು, ಪೂರ್ವಗ್ರಹಗಳು, ವೈಯಕ್ತಿಕ ರೋಷಗಳು, ತರ್ಕಬದ್ಧ ವಾದಗಳು, ವಿತಂಡ, ವಿರೋಧಾಭಾಸ ಎಲ್ಲವೂ ಅನಾವರಣಗೊಳ್ಳುತ್ತವೆ. ೧೨ ವಿಭಿನ್ನ ಮಂದಿ: ಯಾವುದೇ ಪರಿಗಣನೆಯಿಲ್ಲದೆ ಒಬ್ಬ ಮನುಷ್ಯನನ್ನು ಸಾವಿಗೆ ತಳ್ಳಲು ಮನಸ್ಸಿಲ್ಲದ ಆರ್ಕಿಟೆಕ್ಟ್; ಈ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲದ, ಯಾವುದೋ ಒಂದು ನಿರ್ಧಾರಕ್ಕೆ ಬೇಗನೇ ಬಂದು ಬೇಸ್‍ಬಾಲ್ ನೋಡಲು ಹೋಗಬಯಸುವ ಮನುಷ್ಯ; ಜೋರುಬಾಯಿಯ, ಕೆಳವರ್ಗದ ಜನರನ್ನು ದ್ವೇಷಿಸುವ, ಆದ್ದರಿಂದ ಹುಡುಗ ತಪ್ಪಿತಸ್ಥ ಎಂದು ನಿರ್ಧರಿಸಿರುವ ಮುದುಕನೊಬ್ಬ; ತನ್ನ ಮಗ ತನ್ನನ್ನು ಬಿಟ್ಟು ಹೋಗಿದ್ದು ಮನಸ್ಸಲ್ಲಿಟ್ಟುಕೊಂಡು, ಈ ಹುಡುಗನ ಬಗ್ಗೆ ದ್ವೇಷ ಕಾರುವ ಮತ್ತೊಬ್ಬ; ಅತ್ತಿಂದಿತ್ತ ಓಲಾಡುವ ಸೇಲ್ಸ್‍ಮನ್; ಭಾವನೆಗಳ ಕೈಗೆ ಬುದ್ಧಿ ಕೊಡದೆ, ತರ್ಕಬದ್ಧವಾಗಿ ಯೋಚಿಸುವ, ನಿಷ್ಠುರ ಆದರೆ ಮುಕ್ತ ಮನಸ್ಸಿನ ಅಕೌಂಟಂಟ್. ಹೀಗೆ ಸಮಾಜದ ಒಂದು cross-section ಆ ಸಣ್ಣ ಕೋಣೆಯಲ್ಲಿ ನೆರೆದು, ಬೇಸಿಗೆಯ ತಾಳಲಾರದ ಸೆಖೆಯಲ್ಲಿ ಚರ್ಚಿಸುತ್ತಿದೆ.

ಸಿನೆಮಾ ಮುಂದುವರೆದಂತೆ ಸಾಕ್ಷಿಗಳು, ಸನ್ನಿವೇಶಗಳು, ಮೇಲ್ನೋಟಕ್ಕೆ ತೋರುವಷ್ಟು ನಿಖರವಾಗಿಲ್ಲವೆನ್ನುವುದು ತಿಳಿದು ಬರುತ್ತದೆ. ವಾಗ್ವಾದಗಳು, ಚರ್ಚೆಗಳು ಇಷ್ಟವಾಗುವ ನನ್ನಂಥವರಿಗೆ ಬೇಕಾಗುವ ಅಂಶಗಳೆಲ್ಲ ಅಲ್ಲಿವೆ. ತರ್ಕ, ಹೊಳಹು, burden of proof ಯಾರ ಮೇಲಿದೆ ಎನ್ನುವುದರ ವಿಶ್ಲೇಷಣೆ, ಬೇಕೆಂತಲೇ ಕೆದಕಿ, ಕೆಣಕಿ, ಸತ್ಯವನ್ನು ಹೊರಗೆಳೆಯುವ flame baitಗಳು. ಹಾಗೆಯೇ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಮುಖ್ಯವಾಗುವ “beyond any reasonable doubt” ಎಂಬ ನುಡಿ ಎಷ್ಟು ಪ್ರಬಲ ಎಂಬುದೂ ತಿಳಿಯುತ್ತದೆ. ನಿಜ, ನಮ್ಮ ವ್ಯವಸ್ಥೆ ಅದಕ್ಷವಾಗಿದೆ; ನ್ಯಾಯ ಸಿಗುವುದಕ್ಕೆ ಯುಗಗಟ್ಟಲೇ ಕಾಯಬೇಕು; ಬಹಳ ಸಲ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ಹೌದು. ಆದರೆ ಇವೆಲ್ಲ ಬೇರೆ ಸಮಸ್ಯೆಗಳು. ಈ ಸಮಸ್ಯೆಗಳನ್ನು ಬಗೆಹರಿಸುವುದರ ಸಲುವಾಗಿ, ನಾವು ಆಪಾದಿತರ ಹಕ್ಕುಗಳನ್ನು ಕಡಿಮೆ ಮಾಡಿದರೆ ಅದು ಮಾನವೀಯತೆಯಲ್ಲ. ಅದೆಷ್ಟೇ ಪ್ರಖರ “ಸತ್ಯ”ವಾಗಿದ್ದರೂ, ಎಲ್ಲವೂ ನಿಚ್ಚಳವಾಗಿದ್ದರೂ, ಜನ ಸಮುದಾಯಗಳೂ, ಮಾಧ್ಯಮಗಳೂ, opinion pollಗಳೂ ನ್ಯಾಯವನ್ನು ಕೊಡುವ ಹೊರೆ ತೊಗೊಳ್ಳಬಾರದು.

ಅದೇನೇ ಇರಲಿ. ನಾನು ಎಂದಿನಂತೆ ಮತ್ತೆ ಯಾವ್ಯಾವುದೋ ವಿಷಯಗಳ ಬಗ್ಗೆ ಮಾತಾಡುತ್ತ ಹೋಗುತ್ತಿದ್ದೇನೆ. 12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ. ನೀವೂ ನನ್ನಂತೆ, ’ನಮ್ಮಲ್ಲೇಕೆ ಈ ಥರದ ಸಿನೆಮಾಗಳನ್ನು ಮಾಡುವುದಿಲ್ಲ’, ’ಈಗಿನ ಕಾಲದಲ್ಲಿ ಇಂಥ ಸಿನೆಮಾಗಳನ್ನು ಮಾಡಿದರೆ ಜನ ನೋಡುವುದಿಲ್ಲವೇ?’ ಎಂದು ವಿಚಾರಕ್ಕೆ ಬೀಳಿ.

 
Advertisements

One response to this post.

  1. ಪ್ರಕಟಿಸಿದ್ದಕ್ಕೆ ಥ್ಯಾಂಕ್ಸ್!

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: