ಐಟಿ-ಬಿಟಿ-ಬಿಪಿಒ-ಪಿಜ್ಜಾ ಹಟ್ ಯುಗದಲ್ಲಿ ..

 

ಇಲ್ಲಿರುವುದೆಲ್ಲವೂ ನಾನು,ನನ್ನದು,ನನಗಾಗಿ ಬರೆದುಕೊಂಡಿರುವ ಕೆಲವು ನೆನಪುಗಳು. ನಿಮಗೂ ಮಾಡಕ್ಕೆ ಬೇರೆ ಕೆಲಸವಿಲ್ಲದೆ ಅರೆಘಳಿಗೆ ಬಿಡುವಿದ್ದಲ್ಲಿ ಓದಿ ಆನಂದಿಸಿ,ನಿಮ್ಮ ಅನಿಸಿಕೆಗಳನ್ನು ದಾಖಲಿಸಿ :)-ಎನ್ನುವ ಸುಸಂಸ್ಕೃತ ಅವರ ಬ್ಲಾಗ್ ನಲ್ಲಿನ ಅರಮನೆ ವಿಮರ್ಶೆ ಓದಿ

ಪ್ರೀತಿ ತುಂಬಿದ ಪ್ರತಿ ಗೂಡು…’ಅರಮನೆ’ : ಇವತ್ತಿನ ಐಟಿ-ಬಿಟಿ-ಬಿಪಿಒ-ಪಿಜ್ಜಾ ಹಟ್ ಯುಗದಲ್ಲಿ ಅವಿಭಕ್ತ ಕುಟುಂಬಗಳು ಕಾಣೆಯಾಗ್ತಿರೋ ಈ ಕಾಲಕ್ಕೆ ಹೇಳಿ ಮಾಡಿಸಿದ ಹಾಗೆ, ಟೈಮಿಗೆ ಸರಿಯಾಗಿ ಬಂದಿದೆ ಈ ಚಿತ್ರ. ಸೀದಾ-ಸಾದಾ-ನೇರವಾದ ಸಿಂಪಲ್ ಚಿತ್ರ.ದೇಹದ ಯಾವುದೇ ಭಾಗಕ್ಕೂ ಕಷ್ಟ ಕೊಡದ ಚಿತ್ರ ಅನ್ನಬಹುದು.

ನಾಗಶೇಖರ್ ಈ ಹಿಂದೆ ಎಷ್ಟೋ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನ ಮಾಡಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನರನ್ನ ನಗಿಸಿದ್ರು.ಅವರ ವಿಚಿತ್ರ ಮ್ಯಾನರಿಸಂ,ಟೈಮಿಂಗ್ ಜನರ ಗಮನಕ್ಕೆ ಬಂದಿದ್ದು ಯೋಗರಾಜ್ ಭಟ್ಟರ ‘ರಂಗ SSLC’ ಚಿತ್ರದಲ್ಲಿ ಸುದೀಪ್ ಗೆಳೆಯನಾಗಿದ್ದ ‘ಜಪಾನ್’ಪಾತ್ರದಿಂದ. ಆದ್ರೂ ಈ ಥರದ ಕಾಮಿಕಲ್ ಬ್ಯಾಕ್‍ಗ್ರೌಂಡ್ ಇರೋ ನಾಗಶೇಖರ್ ಏಕಾಏಕಿ ನಿರ್ದೇಶನದಂಥ ಸೀರಿಯಸ್ ಕೆಲಸ ಮಾಡೋಕ್ ಹೊರಟಿದ್ದು ನೋಡಿ(ಕೇಳಿ)ಗಾಳಿ ಬೀಸೋವಾಗ ತೂರಿಕೊಳ್ಳೋ ಪ್ರಯತ್ನ ಮಾಡ್ತಿರೋ ಮತ್ತೊಂದು ಜಳ್ಳೇನೋ ಅನ್ನೋ ಅನುಮಾನ ಬಂತು.ಆ ಕಾರಣಕ್ಕೇ ಅನ್ಸತ್ತೆ, ‘ಅರಮನೆ’ ಚಿತ್ರದಲ್ಲಿ ಗಣೇಶ ಇದ್ರೂ ಆ ಚಿತ್ರದ ಬಗ್ಗೆ ಅಷ್ಟೇನೂ ಹೆಚ್ಚಿನ ಆಕಾಂಕ್ಷೆಗಳಿರ್ಲಿಲ್ಲ ನನಗೆ.ಏನಿಲ್ಲದೆ ಇದ್ರೂ ಗಣೇಶನ ಡೈಲಾಗ್ ಡೆಲಿವರಿ ಮಜಾ ಕೊಡತ್ತೆ ಅನ್ನೋ ಧೈರ್ಯದ ಮೇಲೆ ನೈಟ್ ಶೋ ನೋಡಿಬಿಡಣ ಅಂತ ತಿಗಣೆಗಳಿಗೂ ಹೆದರದೆ ಒಗೆಯೋಕ್ ಹಾಕಬೇಕಿದ್ದ ಹಳೇ ಟೀಶರ್ಟು-ಜೀನ್ಸ್ ಹಾಕೊಂಡು ‘ಈಶ್ವರಿ’ಗೆ ಹೋಗ್ಬಿಟ್ಟೆ!

ಚಿತ್ರ ಶುರುವಾದ ಕಾಲು ಘಂಟೆ-ಇಪ್ಪತ್ತು ನಿಮಿಷವಾಗೋಷ್ಟರಲ್ಲೇ ನಾಗಶೇಖರ್ ಇಂಪ್ರೆಸ್ಸಿವ್ ಕೆಲಸ ಮಾಡಿದಾರೆ ಅನ್ನಿಸಿಬಿಡ್ತು! ಗಣೇಶ-ಅನಂತನಾಗ್ ಭೇಟಿಯಾಗೋ ಸೀನ್ ಸಕತ್ತಾಗಿ ಬಂದಿದೆ. ಯಥಾಪ್ರಕಾರ ಗಣೇಶ ಪುಂಖಾನುಪುಂಖವಾಗಿ ತನ್ನ ಮಾತಿನ ಲಹರಿಯನ್ನ ಹರಿಯಬಿಡ್ತಾನೆ! ಒಬ್ಬೊಬ್ನೇ ಮಾತಾಡಿಕೊಳ್ಳೋ ಕಾಯಿಲೆ ನಂಗೆ ಅಂತ ಬೇರೆ ಹೇಳಿಕೊಳ್ಳೋ ಗಣೇಶ ಜನರಿಗೆ ಇನ್ನಷ್ಟು ಹತ್ತಿರಾಗ್ತಾನೆ. ಕನ್ನಡ ಸಿನಿಮಾಗೆ ‘ಗಣೇಶ-ಅನಂತನಾಗ್’ ಕಾಂಬಿನೇಶನ್ ಪರಿಚಯಿಸಿ ಗೆಲ್ಲಿಸಿದ ಶ್ರೇಯ ಭಟ್ಟರಿಗೆ ಸಲ್ಲಬೇಕು.ಆ ಕಾಂಬಿನೇಶನ್ ಮತ್ತೊಮ್ಮೆ ಇಲ್ಲಿ ವರ್ಕ್-ಔಟ್ ಆಗಿದೆ.ಅನಂತನಾಗ್ ಸ್ಕ್ರೀನ್ ಮೇಲೆ ಬಂದ ಮೊದಲ ಕ್ಷಣದಿಂದ ಕಡೇವರೆಗೂ ತಮ್ಮ ಪಾತ್ರವನ್ನ ಜನರು ಪ್ರೀತಿಸೋ ಹಾಗೆ ಮಾಡುವಲ್ಲಿ ಅವರ ಅನುಭವ,ಅಭಿನಯದ ತಾಕತ್ತನ್ನ ಮತ್ತೊಮ್ಮೆ ಮಗದೊಮ್ಮೆ ಪ್ರೂವ್ ಮಾಡಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿ ಇಲ್ಲದ ಮೇಲೂ ರಾಜಶೇಖರ್ ಹಂಪಾಪುರರಿಗೆ ಟಿವಿಯಲ್ಲಿ ಏನು ಕೆಲಸ ಅಂದುಕೊಳ್ಳೋವ್ರ ತಲೆ ಮೇಲೆ ಹೊಡೆದಂತಿದೆ ಈ ಚಿತ್ರದ ಪಾತ್ರ.


ಇಡೀ ಚಿತ್ರ ಅವರಿಬ್ಬರ ಸುತ್ತಾನೆ ಗಿರಕಿ ಹೊಡೆಯೋದ್ರಿಂದ ಹೆಚ್ಚಿನ ಪಾತ್ರಗಳನ್ನ ಅನವಶ್ಯಕವಾಗಿ ಸೃಷ್ಟಿಸೋ,ಹಾಗೆ ಸೃಷ್ಟಿಸಿದ ಪಾತ್ರಗಳನ್ನ ಪೋಷಿಸೋ ಅಗತ್ಯ ನಾಗಶೇಖರ್‍ಗೆ ಬರೋದಿಲ್ಲ.ಇರೋದ್ರಲ್ಲೇ ಚಿತ್ರಕಥೆಯ ಚೌಕಟ್ಟನ್ನು ದಾಟದೇ ಅಚ್ಚುಕಟ್ಟಾದ ಚಿತ್ರವೊಂದನ್ನ ಕೊಟ್ಟಿದ್ದಾರೆ.
ಚಿತ್ರದ ಕಥೆ ಏನು ಕಾಂಪ್ಲಿಕೇಟೆಡ್ ಅಲ್ಲ.ರಾಜಶೇಖರ್ ಅರಸ್(ಅನಂತನಾಗ್) ಮೈಸೂರಿನ ಶ್ರೀಮಂತ ಮನೆತನದ ಹಿರಿತಲೆ.ಹಿರಿಮಗಳ(ತಾರಾ) ಹಿಂದೆ ಎರಡು ಗಂಡು ಸಂತಾನ.ಹೆಂಡತಿ(ಸುಮಿತ್ರ) ಸತ್ತ ನಂತರ ಕಾರಣಾಂತರಗಳಿಂದ ರಾಜಶೇಖರ್ ಮಕ್ಕಳಿಂದ ದೂರವಾಗ್ತಾರೆ.ಗಂಡುಮಕ್ಕಳಿಬ್ಬರೂ ಹೊರದೇಶದಲ್ಲೆಲ್ಲೋ ನೆಲೆಸಿದರೆ ಮಗಳು-ಅಳಿಯ (ಅವಿನಾಶ್) ಮೈಸೂರು ತೊರೆದು ಬೆಂಗಳೂರಿನಲ್ಲಿ ವಾಸವಾಗಿರ್ತಾರೆ.ಸುಮಾರು ಇಪ್ಪತ್ತೆರಡು ವರ್ಷಗಳು ತಂದೆಗೂ ಮಕ್ಕಳಿಗೂ ಮಾತಿಲ್ಲ.
ಒಂದು ಪಾಸ್ಪೋರ್ಟ್ ಸೈಝ್ ಫೋಟೋ ತೆಗೆಯುವ ಕಾರಣಕ್ಕೆ ರಾಜಶೇಖರ್ ಮನೆಗೆ ಫೋಟೋಗ್ರಾಫರ್ ಅರುಣನ(ಗಣೇಶ್) ಆಗಮನ. ಮುಂಗಾರು ಮಳೆ ನಂತರ ಮತ್ತೊಮ್ಮೆ ಮನೆಯೊಳಗಿನ ಬಾರ್ ಕೌಂಟರಿನಲ್ಲೇ ಅನಂತ್-ಗಣಿ ಮಿಲನ! 🙂
“ಏನ್ ತಾತ ನೀನು..ಸಿಡ್ನಿನ ಒಳ್ಳೆ ನನ್ ಕಿಡ್ನಿ ಪಕ್ಕ ಇರೋ ಥರಾ ಮಾತಾಡ್ತಿಯಲ್ಲ…ಅದು ಫಾರಿನ್ನು!
ಆಂ! ವಾಷಿಂಗ್ಟನ್ನಾ? ಎಲ್ಲೋ ಕೇಳಿದೀನಿ ಅನ್ಸುತ್ತೆ. ಓಹ್! ಹೌದು…ಅಮೇರಿಕ ಅಮೇರಿಕ ಸಿನಿಮಾದಲ್ಲಿ ನೋಡಿದೀನಿ” ಇದು ಗಣಿ ಉದುರಿಸೋ ಮುತ್ತುಗಳಲ್ಲೊಂದೆರಡು.
ಒಗ್ಗರಣೆಗೆ ಇರ್ಲಿ ಅಂತ ರಾಜಶೇಖರ್ ಮನೆ ನೋಡ್ಕೊಳೋ ಆಲಿನ್-ಒನ್ ಬಸ್ಯ (ಕರಿಬಸವಯ್ಯ) ಅರುಣನಿಗೆ ಮತ್ತೊಬ್ಬ ಫ್ರೆಂಡು.ಕರಿಬಸವಯ್ಯನನ್ನ ನೋಡಿ ಕುಡಿದ ಅಮಲಿನಲ್ಲಿ ಹೇಳೋ ಮಾತು : “ಆಹಾ!! ಫೋಟೋಲಿ ಬೀಳಲ್ಲ ಕತ್ಲೇಲಿ ಕಾಣಲ್ಲ..ಸರೀಗಿದೀಯ”

ಮಾತು-ಮಧ್ಯದ ಮಧ್ಯೆ ರಾಜಶೇಖರ್‍ರ ಒಡೆದ ಕುಟುಂಬವನ್ನು ಒಂದು ಮಾಡಿ ಗ್ರೂಪ್ ಫೋಟೋ ತೆಗೆಯೋ ಪ್ರಾಮಿಸ್ ಮಾಡ್ತಾನೆ ಅರುಣ್.
ಎಲೆಕ್ಷನ್ ಟೈಂ ಅಂತಲೋ ಏನೋ ಈ ಚಿತ್ರದಲ್ಲೂ ಬೇಕಾದಷ್ಟು ಪ್ರಾಮಿಸ್ಸುಗಳು ಬಂದು ಹೋಗ್ತವೆ.ಆದ್ರೆ ಇಲ್ಲಿ ಎಲ್ಲರೂ ತಾವು ಕೊಟ್ಟ ಮಾತಿನಂತೆ ನಡೆದುಕೊಂಡು ಮಾಡಿದ ಪ್ರಾಮಿಸ್ಸಿಗೆ ನ್ಯಾಯ ಒದಗಿಸಿದ್ದಾರೆ!
ಇಡೀ ಚಿತ್ರ ಗಣೇಶ ಕುತ್ತಿಗೆಗೊಂದು ಕ್ಯಾಮೆರಾ,ಸೈಡಲ್ಲೊಂದು ಜೋಳಿಗೆ,ಫೋಟೋಗ್ರಾಫರ್ಸ್ ಜಾಕೆಟ್ ಹಾಕಿಕೊಂಡು ರಾಜಶೇಖರ್ ಕುಟುಂಬ ಜೋಡಣೆಯ ಸಲುವಾಗಿ ಮೈಸೂರಿಗೂ-ಬೆಂಗಳೂರಿಗೂ ಓಡಾಡೋದೇ ಆಗತ್ತೆ.ಈ ಮಧ್ಯೆ ರಾಜಶೇಖರ್ ಮೊಮ್ಮಗಳನ್ನೇ ಪ್ರೀತಿ ಮಾಡಿ ಆಕೆ ಇನ್ಯಾರನ್ನೋ ಇಷ್ಟ ಪಡ್ತಾಳೆ ಅಂತ ತಿಳಿದು ಹಿಂದೆ ಸರಿಯೋ ಹೀರೋ ಮತ್ತೊಮ್ಮೆ ಮನಸಲ್ಲಿ “ಪ್ರೀತಿ ಮಧುರ ತ್ಯಾಗ ಅಮರ” ಅಂದುಕೊಂಡ ಹಾಗನ್ನಿಸತ್ತೆ.
ಹಿಂದೊಮ್ಮೆ ತ್ಯಾಗಮಯಿ ಪಾತ್ರಗಳನ್ನ ಸಾಲುಸಾಲಾಗಿ ಮಾಡಿ ‘ತ್ಯಾಗರಾಜ್’ ಪಟ್ಟಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ರಮೇಶ್ ಜಾಗಕ್ಕೆ ಈಗ ಗಣೇಶ ಸೈಲೆಂಟಾಗಿ ತೂರಿಕೊಳ್ತಿರೋ ಎಲ್ಲ ಲಕ್ಷಣಗಳೂ ಕಾಣಿಸ್ತಿವೆ!

ಇನ್ನುಳಿದಂತೆ ನಾಯಕಿ ಗೀತಾ ಪಾತ್ರಕ್ಕೆ ಬಂದಿರುವ ಹೊಸಮುಖ ರೋಮಾ ಅಸ್ರಾಣಿ ಹೆಚ್ಚಿನ ಭರವಸೆ ಮೂಡಿಸೋದಿಲ್ಲ.ಡೈಲಾಗ್ ಡೆಲಿವರಿ ಪೂರಾ “1,2,3,4 – 1,2,3,4” ಹೇಳಿ ಮುಗಿಸಿದಂತಿದೆ.ನಾಯಕಿಯ ತಂಗಿ ನೀತಾ ಪಾತ್ರದಲ್ಲಿ ತೇಜಸ್ವಿನಿ ತಕ್ಕಮಟ್ಟಕ್ಕೆ ಓಕೆ. ‘ಮತದಾನ’ ಚಿತ್ರದ ಬಳಿಕ ಮತ್ತೊಮ್ಮೆ ಅನಂತನಾಗ್‍ರ ಮಗಳು-ಅಳಿಯರಾಗಿ ತಾರಾ-ಅವಿನಾಶ್ ಜೋಡಿ ಈ ಚಿತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಗೀತಾಳ ಗಂಡ ವಿಶಾಲ್ ಪಾತ್ರಕ್ಕೆ ಯಾರೋ ಹೊಸಮುಖವನ್ನು ಪರಿಚಯಿಸಿ ದಿಲೀಪ್ ರಾಜ್‍ನಿಂದ ಕಂಠದಾನ ಮಾಡಿಸಿದ್ದು ಬೇಜಾರಾಯ್ತು. 7’O ಕ್ಲಾಕ್ ಚಿತ್ರದಲ್ಲಿ ದಿಲೀಪ್ ರಾಜ್ ಕೂಡಾ ಡಾಕ್ಟರ್ ಪಾತ್ರದಲ್ಲಿ ಚೆನ್ನಾಗೇ ಮಾಡಿದ್ದ.ಅವನಿಗೇ ಆ ಪಾತ್ರ ಕೊಡಬಹುದಿತ್ತೇನೋ!

ಕ್ಯಾಮೆರಾ ವರ್ಕ್ ಈ ಚಿತ್ರದಲ್ಲಿ ಹೇಳಿಕೊಳ್ಳೋ ಹಾಗೇನಿಲ್ಲ.ಸೀದಾ ಸಾದಾ ಲೋ ಬಜೆಟ್ ಚಿತ್ರವೊಂದಕ್ಕೆ ಹೇಗೆ ಬೇಕೋ ಹಾಗೆ ಇದೆ.ಸೆಟ್ಟಿಂಗ್ ಕೂಡಾ ಕೆಲವೊಮ್ಮೆ ತೀರಾ ಕೃತಕ ಅನ್ನಿಸತ್ತೆ.ಸಾಹಿತ್ಯ ಅಷ್ಟಕ್ಕಷ್ಟೇ! “ನನಗೂ ನಿನಗೂ ಕಣ್ಣಲ್ಲೇ ಪರಿಚಯ” ಅನ್ನೋ ಹಾಡನ್ನ ಗುನುಗುನಿಸೋವಾಗ ನೆನಪಲ್ಲಿಟ್ಕೊಳ್ಳೋಕ್ ಸುಲಭವಾಗುವ ಹಾಗೆ ಒಂದೆರಡು ಲೈನ್ ಚೆನ್ನಾಗಿದೆ. ಆದರೆ ಎಲ್ಲದಕ್ಕಿಂತ ನಿರಾಶಾದಾಯಕವಾಗಿರೋದು ಈ ಚಿತ್ರದ ಸಂಗೀತ!ಗುರು ಸಾರ್ – ಸ್ಸಾರಿ!ಈ ಚಿತ್ರಕ್ಕೆ ಸಂಗೀತದ ಕೊಡುಗೆ ನೀರಸವಾಗಿದೆ.
ಗುರುಕಿರಣ್‍ರಿಗೆ “ಯೋಚನಾ ದಾರಿದ್ರ್ಯ” ಯಾಕೆ ವಕ್ಕರಿಸಿಕೊಂಡಿದೆ ತಿಳೀತಿಲ್ಲ. ಎಲ್ಲರೂ ಎಲ್ಲೆಲ್ಲಿಂದಲೋ ಕದ್ದು-ಮುಚ್ಚಿ ತಂದ ಸಂಗೀತವನ್ನ ತಮ್ಮದೇ ಸ್ವಂತ ಅನ್ನೋ ಥರಾ ಪೋಸ್ ಕೊಡೋ ಕಾಲ ಹೋಗಿ ಈಗ ತಾವು ಈ ಮೊದಲೇ ಕೊಟ್ಟಿದ್ದ (ಕದ್ದಿದ್ದ) ಸಂಗೀತವನ್ನೇ ರೀ-ಮಿಕ್ಸ್ ಮಾಡಿ ಮತ್ತೆ ಹೊಸ ಹಾಡುಗಳಂತೆ ಕೊಡೋ ಕಾಲ ಬಂದಿದೆ ಅಂತ ತಿಳಿಸೋಕೆ ಮುಂದು ಬಂದಿರುವಂತಿದೆ!. ಉಪೇಂದ್ರ ಚಿತ್ರದ “ಟೂ ಥೌಸೆಂಡ್ ಏಡಿ ಲೇಡಿಯೇ ಅಲ್ಟ್ರಾ ಮಾಡರ್ನ್” ಅನ್ನೋ ಹಾಡು ಈಗ “ಉಫೀ” ಆಗಿದೆ. ನಿನಗಾಗಿ ಚಿತ್ರದ “ಯಮ್ಮೋ ಯಮ್ಮೋ ಯಾಮಾರ್ಬೇಡಮ್ಮೋ” ಹಾಡನ್ನು ಜುನೂನ್ (ಪಾಕಿಸ್ತಾನ) ತಂಡದ “ಸಯ್ಯೋನೀ” ಹಾಡಿನೊಂದಿಗೆ ಹದವಾಗಿ ಬೆರೆಸಿ ಇಲ್ಲಿ “ಕೊಲ್ಲೇ ನನ್ನನ್ನೇ” ಅನ್ನೋ ಕರ್ಕಶ ಹಾಡೊಂದನ್ನ ಸ್ವತಃ ಗುರು ಹಾಡಿದ್ದಾರೆ!. ರಾಜ್ ಕಪೂರರ ‘ಅನಾರಿ’ ಚಿತ್ರದ “ಕಿಸೀಕಿ ಮುಸ್ಕುರಾಹಟೋಂ ಪೆ” ಹಾಡು ಇಲ್ಲಿ “ನಗು ನಗು ನಗು ನಗು” ಆಗಿದೆ.
ಇರೋದ್ರಲ್ಲಿ ಬೆಸ್ಟ್ ಅಂದ್ರೆ ಕುಣಾಲ್ ಗಾಂಜಾವಾಲ ಹಾಡಿರೋ “ನನಗೂ ನಿನಗೂ ಕಣ್ಣಲ್ಲೇ ಪರಿಚಯ” ಅನ್ನೋ ಮೆಲೋಡಿ.(ಇದರ ಒರಿಜಿನಲ್ ಹಾಡಿಗೆ ಇನ್ನೂ ಹುಡುಕಾಟ ನಡೀತಿದೆ. ನಿಮಗೆ ಗೊತ್ತಿದ್ರೆ ನಮಗೂ ತಿಳಿಸಿಬಿಡಿ)
ಇಂಟರ್ವಲ್ ಬಳಿಕ ಸ್ವಲ್ಪ ರಬ್ಬರ್ ಬ್ಯಾಂಡ್ ಥರಾ ಎಳೆದಿದಾನೆ ಅಂತ ಜನ ಮಾತಾಡ್ಕೊಂಡಿದ್ ಕೇಳಿಸ್ತು. ನನಗೇನೋ ಹಾಗನ್ನಿಸಿಲಿಲ್ಲ.ಆದರೆ ಒಂದೆರಡು ಕಂಟಿನ್ಯುಟಿ ಪ್ರಾಬ್ಲಂ ಈ ಚಿತ್ರದಲ್ಲಿದೆ ಅನ್ನಿಸ್ತು. ಈಗಿನ ಕಾಲದ ಚಿತ್ರದಲ್ಲೂ ಡಿಸ್ಕಂಟಿನ್ಯುಟಿ ನುಸುಳಿರೋದನ್ನ ನೋಡಿ ಆಶ್ಚರ್ಯ ಕೂಡಾ ಆಯ್ತು.

ಒಟ್ಟಿನಲ್ಲಿ ಟೋಟಲ್ ಟೈಂಪಾಸ್ ಚಿತ್ರ ಇದು. ಕೊಟ್ಟ ದುಡ್ಡಿಗೆ ಏನೂ ಮೋಸ ಇಲ್ಲ.ಏನಿಲ್ಲದಿದ್ದರೂ ಚಾಮುಂಡಿ ಬೆಟ್ಟ,ಕ್ರಾಫರ್ಡ್ ಹಾಲ್, ಡಿಸಿ ಆಫೀಸ್,ಮೈಸೂರ್ ಮೆಡಿಕಲ್ ಕಾಲೇಜು,ಮೈಸೂರರಮನೆಯ ಬ್ಯಾಕ್ ಡ್ರಾಪಿರೋ ಸೀನುಗಳನ್ನ ನೋಡಿ ಖುಷಿಯಾಗೋಕಾದ್ರು ಈ ಸಿನಿಮಾ ಒಂದ್ಸಲಾ ನೋಡಿ ಬನ್ನಿ…:)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: