ಕನಸುಗಳ ಬೆನ್ನತ್ತಿದವರು..

-ಪರಮೇಶ್ ಗುಂಡ್ಕಲ್

‘ಪಿಚ್ಚರ್’ -ಪರಮೇಶ್ವರ ಗುಂಡ್ಕಲ್ ಹಾಗೂ ವಿಕಾಸ ನೇಗಿಲೋಣಿ ಅವರ ಬ್ಲಾಗ್. ಸಿನೆಮಾ ಬಗ್ಗೆ ಬರಹಗಳೇ ಅಪರೂಪವಾಗಿರುವಾಗ ಸಿನೆಮಾದ ವಿವಿಧ ಮುಖಗಳನ್ನು ಆರೋಗ್ಯಕರ ಮನಸ್ಸಿನಿಂದ ಚರ್ಚಿಸಿದವರು. ಈ ಬ್ಲಾಗ್ ಜೀವಂತವಾಗಿದ್ದಷ್ಟೂ ಸಿನೆಮಾದ ಪ್ರೀತಿ ಹೆಚ್ಚಲು ಸಾಧ್ಯ ಎಂದು ಹೇಳುತ್ತಾ ಅವರ ಕಣ್ಣೋಟಕ್ಕೆ ಸಾಕ್ಷಿಯಾಗುವ ಒಂದು ಲೇಖನ ನೀಡುತ್ತಿದ್ದೇವೆ.  

ಣ್ಣದ ಜಗತ್ತಿನ ಮೋಹವನ್ನು ವಿವರಿಸುವುದು ಕಷ್ಟ. ಓದುವುದನ್ನು ಬಿಟ್ಟು ಗಾಂಧೀನಗರಕ್ಕೆ ಬಂದವರಿದ್ದಾರೆ. ಓದಿದ್ದನ್ನು ಮರೆತು ಸಿನಿಮಾದಲ್ಲಿ ನಟಿಸೋಣ ಎಂದು ಬಂದ ಎಂಜಿನೀಯರ್‌ಗಳಿದ್ದಾರೆ. ಡಾಕ್ಟರ್‌ಗಳಿದ್ದಾರೆ. ಮಂಡ್ಯದಿಂದ, ಚಿಂತಾಮಣಿಯಿಂದ, ಚಾಮರಾಜ ನಗರದಿಂದ, ಹಾಸನದ ಪಕ್ಕದ ಪುಟ್ಟ ಹಳ್ಳಿಯಿಂದ, ಮೈಸೂರಿನ ಅಪರಿಚಿತ ಬಡಾವಣೆಗಳಿಂದ ಸಿನಿಮಾ ಬೆನ್ನು ಹತ್ತಿ ಬರುವ ಹುಡುಗರು ಈಗಲೂ ಸಿಗುತ್ತಾರೆ.ಸಿನಿಮಾ ನಟನಾಗಬೇಕು, ನಟಿಯಾಗಬೇಕು, ನಿರ್ದೇಶಕನಾಗಬೇಕು ಎಂದು ಬರುವವರ ಕತೆ ಸಿನಿಮಾಕ್ಕಿಂತ ದೊಡ್ಡದು. ಇಂಥವರು ಗಾಂಧೀನಗರದ ಬೀದಿ ಬೀದಿಗಳಲ್ಲಿ ಸಿಗುತ್ತಾರೆ. ದೊಡ್ಡದೊಡ್ಡ ನಿರ್ದೇಶಕರ ಫೋನ್‌ನಂಬರ್‌ ಸಂಪಾದಿಸುತ್ತ, ಅವರ ಭೇಟಿಗಾಗಿ ಒದ್ದಾಡುತ್ತ, ಅವಕಾಶಕ್ಕಾಗಿ ವಿನಂತಿ ಮಾಡುತ್ತ ಇರುವ ಹುಡುಗರು, ಹುಡುಗಿಯರನ್ನು ಗಮನಿಸಿದರೆ, ಮಾತಾಡಿಸಿದರೆ ಕುತೂಹಲಕರ ಸಂಗತಿಗಳು ಸಿಗತೊಡಗುತ್ತವೆ.

ಸಿನಿಮಾ ಬೆನ್ನುಹತ್ತಿ ಬರುವ ಹುಡುಗ, ಹುಡುಗಿಯರಲ್ಲಿ ಅನೇಕರು ಸಿನಿಮಾ ಎಂದರೆ ನಟನೆ ಎಂದು ತಿಳಿದುಕೊಂಡವರು. ನಿರ್ದೇಶನ ಎಂದು ತಿಳಿದುಕೊಂಡವರು. ಹೆಚ್ಚೆಂದರೆ ಸಂಗೀತ ನಿರ್ದೇಶನ ಎಂದು ತಿಳಿದುಕೊಂಡವರು. ಹೀಗಾಗಿ ಈ ಹೊಸಬರು ಸಾಮಾನ್ಯವಾಗಿ ಕಲಾವಿದರಾಗಲು ಬಯಸುತ್ತಾರೆ. ಇಲ್ಲದಿದ್ದರೆ ನಿರ್ದೇಶಕರಾಗಲು ಹಂಬಲಿಸುತ್ತಾರೆ. ನಿರ್ದೇಶಕನ ಕೆಲಸ, ನಟನೆಯ ಕೆಲಸ ಇವರಿಗೆ ಆಕರ್ಷಕವಾಗಿ ಕಾಣಿಸುವುದು ಸಹಜ ಸಹ. ಅಲ್ಲೊಬ್ಬರು, ಇಲ್ಲೊಬ್ಬರು ಸಂಗೀತ ನಿರ್ದೇಶಕರಾಗಲು, ಛಾಯಾಗ್ರಾಹಕರಾಗಲು ಹಾತೊರೆಯುತ್ತಾರಾದರೂ ಅಂಥವರ ಸಂಖ್ಯೆ ಚಿಕ್ಕದು. ಸಿನಿಮಾದಲ್ಲಿ ನಟನೆ, ನಿರ್ದೇಶನ, ಛಾಯಾಗ್ರಹಣ, ಸಂಗೀತದ ಹೊರತಾಗಿಯೂ ಕೆಲಸ ಇರುತ್ತದೆ ಎಂಬುದು ಇವರು ಗಮನಿಸುವುದಿಲ್ಲ. ಅಥವಾ ಅದರಲ್ಲಿ ಆಸಕ್ತಿ ಇಲ್ಲ. ಹೀಗಾಗಿ ನಾನೊಬ್ಬ ಸಂಕಲನಕಾರ ಆಗಬೇಕು ಎಂದು ಗಾಂಧೀನಗರಕ್ಕೆ ಓಡಿಬರುವವರು ಸಿಗುವುದಿಲ್ಲ. ಸೌಂಡ್‌ ಎಂಜಿನೀಯರ್‌ ಆಗಬೇಕು ಎಂದು ಹುಡುಕಿಕೊಂಡು ಬರುವವರು ಸಿಗುವದೇ ಇಲ್ಲ. ಫಾಲಿ ಕಲಾವಿದರಾಗಲು ಇಚ್ಛೆ ಪಡುವವರು, ಕಾಸ್ಟ್ಯೂಮ್‌ ಡಿಸೈನರ್‌ ಆಗಲು ಬರುವವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಕಲಾವಿದರಾಗಲು ಬರುವವರಲ್ಲಿ ಹೆಚ್ಚಿನವರು ಹೀರೋ ಆಗುವ ಕನಸು ಇಟ್ಟುಕೊಂಡು ಬಂದವರು. ಗಣೇಶ್‌ ಥರ, ಉಪ್ಪಿಯ ಥರ, ವಿಜ್‌ ಥರ, ಪುನೀತ್‌ ಥರ ಎಂದೆಲ್ಲ ಕನಸು ಕಟ್ಟಿದವರು. ಅವರ ನಡುವೆ ಯಾವುದೇ ಪಾತ್ರವಾದರೂ ಸರಿ, ಪಾತ್ರ ಚೆನ್ನಾಗಿರಬೇಕು ಎಂಬ ಸಿದ್ಧ ಉತ್ತರದೊಂದಿಗೆ ಬರುವರೂ ಇದ್ದಾರೆ. ಇಂಥ ಹುಡುಗರನ್ನು ಅವರು ನಟನೆಗಾಗಿ ಮಾಡಿಕೊಂಡ ಸಿದ್ಧತೆಗಳನ್ನು ಕೇಳಿ. ಅವರ ಉತ್ತರ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. `ದಿನಾ ಜಿಮ್‌ಗೆ ಹೋಗ್ತಿದೀನಿ. ಸ್ಟಂಟ್‌ ಕಲಿತಿದ್ದೇನೆ. ಡ್ಯಾನ್ಸ್‌ ಕಲಿಯುತ್ತಿದ್ದೇನೆ’ ಎಂದು ಅಧಿಕಾರಯುತವಾಗಿ ಹೇಳುತ್ತಾರೆ. ನಾಟಕದಲ್ಲಿ ಪಾತ್ರ ಮಾಡಿದ್ದೇನೆ ಎನ್ನುವವರು ಒಬ್ಬಿಬ್ಬರು ಸಿಗಬಹುದಾದರೂ ಇದರ ಹೊರತಾದ ಸಿದ್ಧತೆಗಳನ್ನು ಮಾಡಿಕೊಂಡವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸ್ಟಾನಿಸ್ಲಾವಸ್ಕಿಯ ಪುಸ್ತಕ ಓದಿಕೊಂಡವರು, ಪ್ರಸನ್ನ ಬರೆದಿದ್ದನ್ನು ಓದಿದವರು, ಮಾತಾಡಿದ್ದನ್ನು ಕೇಳಿಸಿಕೊಂಡವರು ಯಾಕೋ ಸಿಗುವುದೇ ಇಲ್ಲ. ನಟನೆ ಎಂದರೆ ಹೊಸ ಹುಡುಗರ ಮಟ್ಟಿಗೆ ಸ್ಟಂಟ್‌ ಮತ್ತು ಡ್ಯಾನ್ಸ್‌ ಆಗಿರುವುದು ವಿಚಿತ್ರ. ಬಹುಶಃ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ನಟನೆ ಅಷ್ಟೇ ಆಗಿರುವುದೂ ಈ ಬೆಳವಣಿಗೆಗೆ ಕಾರಣ ಇರಬಹುದು.

ಇನ್ನು ಹುಡುಗಿಯರದ್ದು ಇನ್ನೊಂದು ಕತೆ. ಸಾಮಾನ್ಯವಾಗಿ ಇವರು ಕೋ ಆರ್ಡಿನೇಟರ್‌ಗಳ ಮೂಲಕ ಸಿನಿಮಾ ನಟಿಯರಾಗಲು ಪ್ರಯತ್ನಿಸುತ್ತಿರುತ್ತಾರೆ. ಇವರ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುವ ಕೋ ಆರ್ಡಿನೇಟರ್‌ಗಳಿಗೋ ಕಮಿಷನ್‌ ಪ್ರೀತಿ. ಹೀಗಾಗಿ ಯಾವುದಾದರೂ ಪಾತ್ರದ ಕುರಿತು ಹೇಳತೊಡಗಿದರೆ ಅವರು ಬ್ಯಾನರ್‌ ಹೆಸರು ಕೇಳುತ್ತಾರೆ. ಹೀರೋ ಹೆಸರು ಕೇಳುತ್ತಾರೆ. ಅದಕ್ಕೆ ಅನುಗುಣವಾಗಿ ಇಷ್ಟಿಷ್ಟು ಹಣ ಎಂದು ನಿಗದಿ ಮಾಡುತ್ತಾರೆ. ಪಾತ್ರ ಹೇಗಿದೆ ಎಂದು ನಟಿಯಾಗಲು ಇಷ್ಟಪಡುವ ಹುಡುಗಿಯೇ ಕೇಳುವುದಿಲ್ಲ ಎಂದ ಮೇಲೆ ಕೋ ಆರ್ಡಿನೇಟರ್‌ಗಳು ಯಾವ ಲೆಕ್ಕ?

ನಿರ್ದೇಶಕರಾಗಲು ಬರುವವರ ಆಸಕ್ತಿಗಳೂ ಕುತೂಹಲಕರ. ಅವರು ಪ್ರಸಿದ್ಧ ನಿರ್ದೇಶಕರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಲು ಉತ್ಸುಕರಾಗಿರುತ್ತಾರೆ. ಹೆಚ್ಚಿನವರು ಸಿನಿಮಾದ ಕೆಲಸ ಎಂದರೆ ಶೂಟಿಂಗ್‌ ಮಾತ್ರ ಎಂದು ಅಂದುಕೊಳ್ಳುತ್ತಾರೆ ಎನ್ನುವುದು ನಂಬುವುದಕ್ಕೆ ಕಷ್ಟವಾಗಬಹುದಾದರೂ ನಿಜವಾದ ವಿಷಯ. ಸಿನಿಮಾದ ನಿರ್ಮಾಣಕ್ಕೆ ಮೊದಲಿನ ಕೆಲಸಗಳಾದ (ಪ್ರಿ ಪ್ರೊಡಕ್ಷನ್‌) ಕತೆ, ಚಿತ್ರಕತೆ ಕೆಲಸದ ಕುರಿತು ಹುಡುಗರಿಗೆ ಅಷ್ಟೇನೂ ಆಸಕ್ತಿ ಇಲ್ಲ. ಶೆಡ್ಯೂಲ್‌ಗಳನ್ನು ಮಾಡುವುದೆಲ್ಲ ಗೊತ್ತಿಲ್ಲ ಮತ್ತು ಬೇಡ. ಸಿನಿಮಾ ಚಿತ್ರೀಕರಣ ಆದ ಮೇಲೆ ಆಗುವ ನಿರ್ಮಾಣೋತ್ತರ (ಪೋಸ್ಟ್‌ ಪ್ರೊಡಕ್ಷನ್‌) ಕೆಲಸಗಳ ಕುರಿತೂ ಆಕರ್ಷಣೆ ಕಡಿಮೆ. ಸಿನಿಮಾ ನಿರ್ದೇಶನವನ್ನು ಚಿತ್ರೀಕರಣ ಸ್ಥಳದಲ್ಲಿ ಕಲಿಯಬಹುದು ಎಂದುಕೊಳ್ಳುವುದೇ ಒಂದು ವಿಚಿತ್ರವಲ್ಲವೇ?

ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಬೇಕಾದಷ್ಟು ಬೇರೆ ಅವಕಾಶಗಳಿವೆ ಎನ್ನುವುದು ಗಾಂಧೀನಗರಕ್ಕೆ ಬರುವ ಅನೇಕ ಹುಡುಗರಿಗೆ ಗೊತ್ತಿಲ್ಲ. ಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಕ್ಯಾಮರಾ, ನಟನೆ ಮತ್ತು ನಿರ್ದೇಶನದ ಹೊರತಾಗಿಯೂ ಸಿನಿಮಾದಲ್ಲಿ ಕೆಲಸಗಳಿವೆ. ಒಳ್ಳೆಯ ಸಂಕಲನಕಾರ ಆಗುವುದು ಸೃಜನಶೀಲ ಮತ್ತು ಸವಾಲಿನ ಕೆಲಸ. ಸೌಂಡ್‌ ಡಿಸೈನಿಂಗ್‌ನಲ್ಲಿ ಮಾಡಬಹುದಾದ ಪ್ರಯತ್ನಗಳಿಗೆ, ಏರಬಹುದಾದ ಎತ್ತರಗಳಿಗೆ ಆಕಾಶವೇ ಮಿತಿ. ಫಾಲಿ ಕಲಾವಿದರಾಗುವುದು, ಡಬ್ಬಿಂಗ್‌ ಕಲಾವಿದರಾಗುವುದು ಸಣ್ಣ ಕೆಲಸವೇನಲ್ಲ. ಪೋಸ್ಟರ್‌ ಡಿಸೈನಿಂಗ್‌ ಕೆಲಸ ಕಡಿಮೆಯದಲ್ಲ. ನೃತ್ಯ ನಿರ್ದೇಶಕರಾಗುವುದು, ಫೈಟ್‌ ಮಾಸ್ಟರ್‌ ಆಗುವುದು ಕೂಡ ಅಷ್ಟೇ ಆಕರ್ಷಕ. ಧ್ವನಿಗ್ರಹಣ ವಿಭಾಗಕ್ಕೆ ಒಂದು ಪ್ರಶಸ್ತಿಯಿದೆ. ಅದು ಸಿನಿಮಾದ ಬಹಳ ಮುಖ್ಯ ವಿಭಾಗಗಳಲ್ಲಿ ಒಂದು.

ಸಿನಿಮಾದ ಗ್ರಾಮರ್‌ ಕಲಿಯಲು ಇಷ್ಟಪಡುವವರಿಗೆ ಅನೇಕ ಪುಸ್ತಕಗಳಿವೆ. ವೆಬ್‌ಸೈಟ್‌ಗಳಿವೆ. ಕಾಲೇಜುಗಳಿವೆ. ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಅದರಲ್ಲಿ ಮುಖ್ಯವಾದುದು. ಬೆಂಗಳೂರಿನಲ್ಲಿ ಎಸ್‌ಜೆಪಿ ಸಿನಿಮಾ ಕಾಲೇಜಿದೆ. ಆದರ್ಶ ಇದೆ. ಕೋಲ್ಕತ್ತಾದಲ್ಲಿ ಸತ್ಯಜಿತ್‌ ರೇ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಇದೆ. ಚೆನ್ನೈಯಲ್ಲಿ, ಹೆದ್ರಾಬಾದ್‌ನಲ್ಲೂ ಇನ್‌ಸ್ಟಿಟ್ಯೂಟ್‌ಗಳಿವೆ. ಸಿನಿಮಾ ಕುರಿತು ಓದುವುದಾದರೆ ಕುರಸೋವಾನ ಆತ್ಮಕತೆಯಂಥ ಬರಹಗಳ ಸಂಗ್ರಹ ಇಂಗ್ಲಿಷಿನಲ್ಲಿದೆ. ಸತ್ಯಜಿತ್‌ ರೇ ಬರೆದ ಬರಹಗಳ ಸಂಗ್ರಹಗಳಿವೆ. ಕತೆಯನ್ನು ಚಿತ್ರಕತೆ ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಡಲು ಸಿಡ್‌ ಫೀಲ್ಡ್‌ರ ಪುಸ್ತಕಗಳಿಗಿಂತ ಒಳ್ಳೆಯ ಪುಸ್ತಕಗಳು ಬಹುಶಃ ಸಿಗಲಾರವು. ಛಾಯಾಗ್ರಹಣದ ಮೂಲಭೂತ ಅಂಶಗಳನ್ನು ಅರಿತುಕೊಳ್ಳಲು ಸಾಕಷ್ಟು ಪುಸ್ತಕಗಳಿವೆ (ಉದಾಹರಣೆ: ಫೈವ್‌ ಸೀಸ್‌ ಆಫ್‌ ಸಿನಿಮಟೋಗ್ರಫಿ). ನಟನೆಯ ಕುರಿತು ತಿಳಿದುಕೊಳ್ಳುವುದಾದರೆ ಸ್ಟಾನಿಸ್ಲಾವಸ್ಕಿ ಪುಸ್ತಕಗಳನ್ನು ಓದಬಹುದು. ಕನ್ನಡದಲ್ಲೇ ಓದುವುದಾದರೆ ಪ್ರಸನ್ನ ಬರೆದ `ನಟನೆಯ ಪಾಠಗಳು’ ಪುಸ್ತಕವಿದೆ. ಈ ಪುಸ್ತಕ ಬರೀ ನಟನೆಯ ಪಾಠಗಳನ್ನು ಮಾತ್ರ ಹೇಳಿಕೊಡುವುದಿಲ್ಲ. ದೃಶ್ಯ ಮಾಧ್ಯಮದ ಇತರ ಸಂಗತಿಗಳನ್ನೂ ವಿವರವಾಗಿ ಚರ್ಚಿಸುತ್ತದೆ.

ಸಿನಿಮಾದಲ್ಲಿ ಕೆಲಸ ಮಾಡಲು ಆಸೆಯಿರುವವರು ಗಾಂಧೀನಗರ ಅಲೆಯುವ ಬದಲು ಇದನ್ನೆಲ್ಲ ಓದಿಕೊಂಡರೆ ಅದು ಕೊಡುವ ಆತ್ಮವಿಶ್ವಾಸ ದೊಡ್ಡದು. ಜೊತೆಯಲ್ಲಿ ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಡಿವಿಡಿಗಳ ಮುಖಾಂತರ ನೋಡಬಹುದು. ನೋಡುತ್ತ ನೋಡುತ್ತ ಸಿನಿಮಾವನ್ನು ಅರ್ಥಮಾಡಿಕೊಳ್ಳಬಹುದು. ಕಲಿಯಬಹುದು. ಸಿನಿಮಾದಲ್ಲಿ ಕೆಲಸ ಕೇಳಿಕೊಂಡು ಬರುವವರು ಒಂದು ಪುಟ್ಟ ಡಿವಿಡಿಯಲ್ಲಿ ತಮ್ಮ ಪ್ರತಿಭೆಯನ್ನು ಹೇಳುವ ಒಂದು ಶೋ ರೀಲ್‌ ಇಟ್ಟುಕೊಂಡು ಹೋದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ?

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: