ಸಿನೆಮಟೋಗ್ರಾಫ್-ವಿಟಾಸ್ಕೋಪ್

-ಪರಮೇಶ್ವರ ಗುರುಸ್ವಾಮಿ

ಲ್ಯೂಮಿಯೇರ್‍ ಸಹೋದರರ ’ಸಿನೆಮಟೋಗ್ರಾಫ್’ನ ಜೊತೆಗೇ ಎಡಿಸನ್ ಕಂಪನಿ ಏಕ ವ್ಯಕ್ತಿ ವೀಕ್ಷಣೆಯ ’ಕೈನೆಟೋಸ್ಕೋಪ’ನ್ನು ಬಿಟ್ಟುಕೊಟ್ಟು ಸಮೂಹ ಪ್ರದರ್ಶನಕ್ಕೆ ’ವಿಟಾಸ್ಕೋಪ್’ ಅನ್ನು ಬಳಸಲಾರಂಭಿಸುತ್ತದೆ. ಎರಡೂ ಕಂಪನಿಗಳು ಮೂಲಭೂತವಾಗಿ ಉದ್ಯಮಗಳು. ಇಬ್ಬರ ಕೈಗೂ ಜನರನ್ನು ಸಮ್ಮೋಹನಗೊಳಿಸಿ ಹಣ ಮಾಡುವ ಚಿತ್ರ ತಯಾರಿಕೆ ಮತ್ತು ಪ್ರದರ್ಶನದ ಸಲಕರಣೆಗಳು  ದಕ್ಕಿದ್ದುವು.  ಎರಡೂ ಕಂನಿಗಳು ಪೈಪೋಟಿಯ ಮೇಲೆ ಜನರ ಮೇಲೆ  ಪುಂಖಾನುಪುಂಖವಾಗಿ ಚಿತ್ರಗಳನ್ನು  ಹೇರತೊಡಗಿದರು.ಪ್ರಾರಂಭದ ಚಿತ್ರಗಳು ೧೫ರಿಂದ  ೯೦ ಸೆಕೆಂಡುಗಳಷ್ಟು ಮಾತ್ರ  ಇರುತ್ತಿದ್ದುವು. ಜನರಿಗೆ ತೆರೆಯ ಮೇಲೆ  ಮೂಡುವ  ಚಲನೆಯನ್ನು ವೀಕ್ಷಿಸುವುದೇ ಒಂದು ಹೊಸ, ವಿಶಿಷ್ಟ  ಅನುಭವವಾಗಿತ್ತು. ದಿನನಿತ್ಯದ ಚಲನೆಯ ಯಾವುದೇ ಪ್ರಸಂಗಗಳನ್ನು ಚಿತ್ರೀಕರಿಸುವುದು, ಪ್ರದರ್ಶನಕ್ಕೆ ಬಿಡುವುದು. ಅದೇ ಅಂದಿಗೆ ಅದ್ಭುತ. ಇಲ್ಲೊಂದು ಕುತೂಹಲಕರ ವಿಷಯ. ಜೀವ ವಿಕಾಸದ ಹಾದಿಯಲ್ಲಿ ಜಲಚರಗಳಿಂದ ಮಾನವರವರೆಗೆ ವಿವಿಧ ಹಂತಗಳಿವೆಯಂತೆ. ಅವು ನಮ್ಮ ದಶಾವತಾರದ ಕಲ್ಪನೆಯಲ್ಲಿವೆ ಎಂದೂ ಹೇಳುತ್ತಾರೆ. ನೀರಿನ ಮೀನು, ಆಮೆ, ಭೂಮಿಯ ಮೇಲಿನ ಹಂದಿ, ಅರೆ ಮನುಷ್ಯ ಮತ್ತು ಅರೆ ಪ್ರಾಣಿ ನರಸಿಂಹ, ಕುಳ್ಳ ವಾಮನ, ಪರಶುರಾಮ,  ಪುರುಷೋತ್ತಮ ರಾಮ ಮತ್ತು ಮಹಾನ್ ಜ್ಞಾನಿ ಮತ್ತು ಪ್ರಾಕ್ಟಿಕಲ್ ಮ್ಯಾನ್ ಕೃಷ್ಣ. ಇವೆಲ್ಲ ಮಾನವಜೀವಿಯ ಬೌತಿಕ ಮತ್ತು ಬೌದ್ಧಿಕ ವಿಕಾಸದ ಹಂತಗಳನ್ನು ಸಂಕೇತಿಸುತ್ತವಂತೆ. ಒಂದು ಮಗು ಹುಟ್ಟಿದಾರಭ್ಯ ಈ ಹಂತಗಳನ್ನು ದಾಟಿಯೇ ವ್ಯಕ್ತಿಯಾಗಿ ರೂಪುಗೊಳ್ಳುತ್ತದಂತೆ. ಹಾಗೆಯೇ ಈಗಲೂ ಯಾರಾದರು ಹೊಸದೊಂದು ವಿಡಿಯೋ ಕ್ಯಾಮೆರ ಕೊಂಡುಕೊಂಡು ಹೊಸದಾಗಿ ಪ್ರಾರಂಭಿಸಿದರೆ ಚಲನಚಿತ್ರ ಮಾಧ್ಯಮ ಬೆಳೆದು ಬಂದ ಹಂತಗಳನ್ನೇ ತಮ್ಮ ಚಿತ್ರೀಕರಣದಿಂದ ಹಿಡಿದು ಸಂಕಲನ ಮುಂತಾದ ಹಂತಗಳನ್ನು ಭೇಟಿ ಮಾಡುತ್ತಾರೆ.

ಸರಿ. ಪ್ರಾರಂಭದ ಲ್ಯೂಮಿಯೇರ್‍ ಚಿತ್ರಗಳು ದೃಶ್ಯಾತ್ಮಕ ವಾಸ್ತವಗಳಾಗಿದ್ದುವು. ವಿವಿಧ ರೀತಿಯ ನೋಟಗಳನ್ನು ದಾಖಲಿಸುತ್ತಿದ್ದುವು. ಸಾಮನ್ಯ ನೋಟ, ಹಾಸ್ಯ ನೋಟ, ಸೇನಾ ನೋಟ. ಹೀಗೆ. ಅವರ ಚಿತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದ್ದುದು ತೋಟವೊಂದರಲ್ಲಿ ನಡೆಯುವ ಹಾಸ್ಯ ನೋಟ. ಈ ಹೊರಾಂಗಣ ಚಿತ್ರದಲ್ಲಿ ಹುಲ್ಲಿಗೆ ಪೈಪಿನಿಂದ ಮಾಲಿ ನೀರುಣಿಸತ್ತಿರುತ್ತಾನೆ. ಒಬ್ಬ ಕಿಡಿಗೇಡಿ ಬಾಲಕ ಆ ಪೈಪಿನ ಮೇಲೆ ಮಾಲಿಗೆ ಕಾಣಿಸಿಕೊಳ್ಳದಂತೆ ಕಾಲಿಟ್ಟು ಒತ್ತುತ್ತಾನೆ. ಪೈಪಿನಲ್ಲಿ ನೀರು ನಿಂತದ್ದನ್ನು ಗಮನಿಸಲು ಮಾಲಿ ಅದರ ತುದಿಯನ್ನು ಪರೀಕ್ಷಿಸಲು ಮುಖದ ಬಳಿ ತರುತ್ತಾನೆ. ಆಗ ಆ ಹುಡುಗ ತ್ನನ ಕಾಲನ್ನು ಪೈಪಿನ ಮೇಲಿಂದ ಎತ್ತಿಬಿಡುತ್ತಾನೆ. ಮಾಲಿಯ ಮುಖಕ್ಕೆ ಪೈಪು ನೀರನ್ನು ಉಗಿಯುತ್ತದೆ. ಹುಡುಗ ನಗುತ್ತಾನೆ. ಚಲನಚಿತ್ರ ಮಾಧ್ಯಮದ ಆ ಶೈಶವ ಹಂತದಲ್ಲಿ ಹೊಸ ಆಟಿಕೆಯಂತಿದ್ದ ಕ್ಯಾಮೆರ, ನಾಟಕವನ್ನು ನೋಡುತ್ತಿರುವ ಪ್ರೇಕ್ಷಕನ ಸ್ಥಾನದಲ್ಲಿತ್ತು ಅಷ್ಟೆ. ಪಾತ್ರಗಳು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಓಡಾಡುತ್ತಿದ್ದುವು. ಚಿತ್ರ ಮಾಧ್ಯಮದ ಕಲೆಯಿನ್ನೂ ರೂಪುಗೊಳ್ಳಬೇಕಿತ್ತು. ಜನ ಮಾತ್ರ ಈ ಹೊಸ ಮಾಧ್ಯಮದ ಸಮ್ಮೋಹಕ್ಕೆ ಒಳಗಾಗಿದ್ದರು.

ಸಿನೆಮಾ ಹುಟ್ಟಿಕೊಂಡ ವರ್ಷದಲ್ಲಿ ಮತ್ತು ಮರು ವರ್ಷದಲ್ಲೇ ಎಡಿಸನ್ ಕಂಪನಿ ಎರಡು ವಿವಾದಗಳನ್ನು ತನ್ನ ಚಿತ್ರಗಳ ಮೂಲಕ ಹುಟ್ಟು ಹಾಕಿತು. ೧೮೯೫ರಲ್ಲಿ ಅದು ತಯಾರಿಸಿದ ’ದ ಎಕ್ಸಿಕ್ಯೂಷನ್ ಆಫ್ ಮೇರಿ, ಕ್ವೀನ್ ಆಫ್ ಸ್ಕಾಟ್, ಎಂಬ ಚಿತ್ರದ್ಲಲಿ ಬರುವ ಮೇರಿಯ ತಲೆ ಕಡಿಯುವ ದೃಶ್ಯ ಬಹಳ ಜನರನ್ನು ಕಂಗೆಡಿಸಿತ್ತು. ನಮ್ಮಿಂದ ಕೇವಲ ಒಂದು ಕಾಸು ಕೀಳುವುದ್ಕಕಾಗಿ ಅವರು ಹೆಂಗಸೊಬ್ಬಳ ಕೊಲೆಯನ್ನೇ ಮಾಡಿ ಚಿತ್ರೀಕರಿಸಿದ್ದಾರೆ ಎಂದು ನಂಬಿದ್ದರು. ಎರಡನೆಯದು ೧೮೯೬ರಲ್ಲಿ ಅದು ತಯಾರಿಸಿದ ’ಜಾನ್ ರೈಸ್-ಮೇರಿ ಇರ್‍ವಿನ್ ಚುಂಬನ’. ಆ ಚುಂಬನದ ದೃಶ್ಯವನ್ನು ತೆರೆಯ ಮೇಲೆ ನೋಡಿ ಮಾರಲಿಸ್ಟ್ಗಳು ಕುಂಡೆ ಸುಟ್ಟವರಂತೆ ಹಾಹಾಕಾರವನ್ನೇ ಎಬ್ಬಿಸಿದ್ದರು. ತೆರೆಯ ಮೇಲೆ ಬೃಹದಾಕಾರದ ಬಾಯಿ ತುಟಿಗಳು ನಡೆಸುವ ಚುಂಬನ ಕ್ರಿಯೆ ಕುರಿತ ನೈತಿಕ ಪ್ರಶ್ನೆ ಸ್ಥಳೀಯ ಪತ್ರಿಕೆಗಳ ವಾಚಕರ ವಾಣಿ ಮತ್ತು ಪೆಟಿಷನ್ ಗಳಾಗಿ ಸ್ಥಳೀಯ ರಾಜಕಾರಣಿಗಳ ಕಛೇರಿಗಳ ತುಂಬಾ ತುಂಬಿ ಹೋಗಿತ್ತು.

ಹೀಗೆ ವಾಸ್ತವತೆಯಲ್ಲಿ ಲ್ಯೂಮಿಯೇರ್‍ ಮತ್ತು ನಾಟಕೀಯತೆಯಲ್ಲಿ ಎಡಿಸನ್ ಕಂಪನಿಗಳು ತಜ್ಞತೆಯನ್ನು ಪ್ರದರ್ಶಿಸಿದರೂ ಕ್ರಮೇಣ ಇವರನ್ನು ಅವರು ಅವರನ್ನು ಇವರು ಅನುಕರಿಸುವುದು ಶುರುವಾಗಿ  ಒಬ್ಬರ ಹೂರಣವನ್ನು ಮತ್ತೊಬ್ಬರು ಕದಿಯ ತೊಡಗಿದರು. ಜನರಿಗೆ ಹಳಸಲು ಎನಿಸ ತೊಡಗಿತ್ತು. ಹುಟ್ಟಿದ ಮೂರೇ ವರ್ಷಗಳಲ್ಲಿ ಜಗತ್ತಿನ ಮೂರನೇ ಲಾಭದಾಯಕ ಉದ್ದಿಮೆ ಎನಿಸಿದ್ದ ಸಿನೆಮಾ ಮಾಧ್ಯಮ ಸೊರಗ ತೊಡಗಿತ್ತು. ಪರಸ್ಪರ ಸ್ಪರ್ಧೆ ಮತ್ತು ಚೌ‍ರ್ಯಗಳ ಜೊತೆಗೆ ಈ ಎರಡು ಕಂಪನಿಗಳು ಅಮೆರಿಕಾ, ಇಂಗ್ಲಂಡ್ ಮತ್ತು ಫ್ರಾನ್ಸ್ ಗಳಲ್ಲಿ ಹೊಸದಾಗಿ ಹುಟ್ಟಿಕೊಂಡ ಸ್ಪರ್ಧಿಗಳನ್ನು ಅವರು ಮಾಡುತ್ತಿದ್ದ ತಮ್ಮ ಕೃತಿಗಳ ಚೌರ್ಯವನ್ನೂ ಎದುರಿಸ ಬೇಕಾಗಿ ಬಂತು. ಮುಂದಿನ ಚಲನ ಚಿತ್ರ ಇತಿಹಾಸದ ಹತ್ತು ವರ್ಷಗಳು ಚಲನಚಿತ್ರ ರಂಗದ ಕಾನೂನು ರಹಿತ ವಾಣಿಜ್ಯ ಚಟುವಟಿಗಳು ಮತ್ತು ಕಲಾತ್ಮಕತೆಯ ಅನ್ವೇಷಣೆಯಾಗಿದೆ.

 

ನಿಮ್ಮ ಟಿಪ್ಪಣಿ ಬರೆಯಿರಿ