ಕಾಕ­ನ­ಕೋಟೆಯ ಕಾಡೊಳಗೆ ಭಾವಸಂಚಾರ

-ಜೋಗಿ

ಕಾಕನ ಕೋಟೆ, ಮಾಸ್ತಿ, ಆ ಕಾಡು ಎಲ್ಲದರ ಬಗ್ಗೆ ನಮ್ಮ ಆತ್ಮೀಯ ಜೋಗಿ ಒಂದು ವಿಶಿಷ್ಟ ನೋಟ ನೀಡಿದ್ದಾರೆ.

ಬೆಟ್ಟದಾ ತುದಿ­ಯಲ್ಲಿ ಕಾಡು­ಗಳ ಎದೆ­ಯಲ್ಲಿ
ಕಪಿ­ನೀಯ ನದಿ­ಯೆಲ್ಲಿ ಉಗು­ತಿ­ರು­ವು­ದಲ್ಲಿ;
ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ
ಪಡೆ­ಗೂ­ಡು­ವುದು ಗಾಡ ಒಟ್ಟೊಟ್ಟಿ ಅಲ್ಲಿ;
ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿ­ಬ­ಳಗ
ಬೆಳು­ತಿಂ­ಗ­ಳಿನ ತಳಗ ನಡೆ­ಯು­ವುದು ಅಲ್ಲಿ;
ಯಾವಲ್ಲಿ ಸಾರಂಗ ಕೆಚ್ಚು­ಕೋ­ಡಿನ ಸಿಂಗ
ನೋಡುತ ನಿಂತ್ಹಂಗ ನಿಲ್ಲು­ವುದು ಅಲ್ಲಿ;
ಎಲ್ಲಿ ಎರ­ಳೆಯ ಹಿಂಡು ಹುಲಿಯ ಕಣ್ಣನು ಕಂಡು
ಹೆದರಿ ಹಾರುವ ದಂಡು ಚೆಲ್ಲು­ವುದು ಅಲ್ಲಿ;
ಗಿಳಿ­ಗೊ­ರವ ಕೋಗೀಲೆ ಹಾರು ಹಕ್ಕಿಯ ಮಾಲೆ
ಹಾಡು­ತಿದೆ ದನಿ­ಮೇಲೆ ದನಿ­ಯೇರಿ ಎಲ್ಲಿ;
ಎಲ್ಲಿ ಏಕಾ­ಏಕಿ ಗಂಡು ನಮಿ­ಲಿಯ ಕೇಕಿ
ಬೋರ­ಗ­ಲ್ಲಿಗೆ ತಾಕಿ ಗೆಲ್ಲು­ವುದು ಅಲ್ಲಿ;
ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ
ಕದ್ದೊಂದು ಮೇವಲ್ಲಿ ತಣಿ­ದಿ­ರು­ವು­ದಲ್ಲಿ;
ದಿನ ದಿನಾ ಸಂಪಂಗಿ ಇರು­ವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ ಅರ­ಳು­ವುದು ಎಲ್ಲಿ;
ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ
ತನ್ನ ತಾಣವ ಸಾರಿ ಬಾ ಎಂಬು­ದಲ್ಲಿ;
ಯಾವಲ್ಲಿ ಹೆಬ್ಬ­ಲಸು ಕೈಗೆ ಕಾಲಿಗೆ ಗೊಲಸು
ಅಂತ ಹಣ್ಣನು ಹುಲುಸು ಹೊತ್ತಿ­ರು­ವು­ದಲ್ಲಿ
ಎಲ್ಲಿ ಕರಿ ಸಿರಿ­ಗಂಧ ಮರ ಬೆಳೆದು ತಾ ಮುಂದ
ಮಾದೇ­ಶ್ವ­ರಗೆ ಚೆಂದ ಮೆಚ್ಚು­ವುದು ಅಲ್ಲಿ..

ಈ ಹಾಡು ಬರೆ­ದದ್ದು ಮಾಸ್ತಿ ವೆಂಕ­ಟೇಶ ಅಯ್ಯಂ­ಗಾ­ರರು ಹೌದಾ? ಹಾಗೆ ಬೆರ­ಗಾ­ಗು­ವಂಥ ವೈವಿಧ್ಯ ಇದ­ರ­ಲ್ಲಿದೆ. ಮಾಸ್ತಿ­ಯ­ವರ ನವ­ರಾ­ತ್ರಿಯ ಪದ್ಯ­ಗ­ಳನ್ನೂ ಇತರ ಗೀತೆ­ಗ­ಳನ್ನೂ ಓದಿ­ದ­ವ­ರಿಗೆ ಇದನ್ನೂ ಅವರೇ ಬರೆ­ದಿ­ದ್ದಾರೆ ಎಂದರೆ ನಂಬಲು ಕಷ್ಟ­ವಾ­ಗು­ತ್ತದೆ. ಮಾಸ್ತಿ­ಯ­ವರ ಕತೆ­ಗ­ಳನ್ನು ಓದಿ­ದ­ವ­ರಿಗೆ ಪರಿ­ಚಿ­ತ­ವಾ­ಗಿ­ರುವ ಸರ­ಳತೆ ಮತ್ತು ಸ್ಪಷ್ಟತೆ ಅವರ ಈ ನಾಟ­ಕದ ಗೀತೆ­ಯಲ್ಲೂ ಕಾಣಿ­ಸು­ತ್ತದೆ.
ಇದು `ಕಾ­ಕ­ನ­ಕೋಟೆ’ ನಾಟ­ಕಕ್ಕೆ ಮಾಸ್ತಿ­ಯ­ವರು ಬರೆದ ಗೀತೆ. ನಾಟ­ಕದ ಆರಂ­ಭ­ದಲ್ಲೇ ಬರು­ತ್ತದೆ. ಇದಕ್ಕೆ ಅಶ್ವ್‌ಥ ಅಷ್ಟೇ ನಾಜೂ­ಕಾಗಿ ಸಂಗೀತ ಸಂಯೋ­ಜಿ­ಸಿ­ದ್ದಾರೆ. ಸಂಗೀ­ತದ ಅಗ­ತ್ಯವೇ ಇಲ್ಲ ಎನ್ನಿ­ಸು­ವಂಥ ಲಯ­ಬ­ದ್ಧ­ತೆಯೂ ಈ ಗೀತೆ­ಯ­ಲ್ಲಿದೆ. ಎಲ್ಲಿ ಏಕಾ­ಏಕಿ ಗಂಡು ನಮಿ­ಲಿಯ ಕೇಕಿ ಬೋರ­ಗ­ಲ್ಲಿಗೆ ತಾಕಿ ಗೆಲ್ಲು­ವುದು ಅಲ್ಲಿ- ಎಂಬ ಸಾಲು­ಗ­ಳನ್ನು ಕಾಡಿನ ಬಗ್ಗೆ ವಿಶೇ­ಷ­ವಾದ ಮತ್ತು ಗಾಢ­ವಾದ ತಿಳು­ವ­ಳಿಕೆ ಇರದ ಹೊರತು ಬರೆ­ಯು­ವುದು ಸುಲ­ಭ­ವಲ್ಲ. ದಿನ ದಿನಾ ಸಂಪಂಗಿ ಇರು­ವಂತಿ ಮಲ್ಲಂಗಿ ಎನ್ನುವ ಸಾಲಿನ ಜೊತೆಗೇ ಅಚ್ಚ­ರಿ­ಗೊ­ಳಿ­ಸು­ವಂಥ ಮೊಲ್ಲೆ ಅದರ ತಂಗಿ… ಎಂಬ ಸಾಲಿದೆ. ಒಂದು ಹೆಸ­ರಿ­ಲ್ಲದ ಮೊಲ್ಲೆ­ಯಂಥ ಹೂವನ್ನು ಅದರ ತಂಗಿ ಎಂದು ಕರೆ­ಯು­ವುದು ಅವ­ರಿ­ಗಷ್ಟೇ ಸಾಧ್ಯ­ವಿತ್ತಾ? ಅದಾದ ತುಂಬ ವರು­ಷ­ಗಳ ನಂತರ ಕೆ ಎಸ್್ ನರ­ಸಿಂ­ಹ­ಸ್ವಾಮಿ ` ತಾರೆ­ಗಳ ಜರ­ತಾರಿ ಅಂಗಿ ತೊಡಿ­ಸು­ವ­ರಂತೆ ಚಂದಿ­ರನ ತಂಗಿ­ಯರು ನಿನ್ನ ಕರೆದು..’ ಎಂದು ಬಳ­ಸಿ­ದಾಗ ಥಟ್ಟನೆ ನೆನ­ಪಾ­ದದ್ದು ಮಾಸ್ತಿ­ಯ­ವರ `ಮೊಲ್ಲೆ… ಅದರ ತಂಗಿ’ ಪ್ರಯೋಗ.

ನಮ್ಮಲ್ಲಿ ಅನೇ­ಕರು ತುಂಬ ಕಡೆ­ಗ­ಣಿ­ಸಿದ ಲೇಖ­ಕರ ಪೈಕಿ ಪುತಿ­ನ­ರಂತೆ ಮಾಸ್ತಿ ಕೂಡ ಒಬ್ಬರು. ಮಾಸ್ತಿ­ಯ­ವರು ಕನ್ನ­ಡದ ಆಸ್ತಿ ಎನ್ನು­ವುದು ಈಗ ಕೇವಲ ಸ್ಲೋಗ­ನ್ನಷ್ಟೇ ಆಗಿ ಉಳಿ­ದು­ಬಿ­ಟ್ಟಿದೆ. ಟಾಲ್ ಸ್ಟಾಯ್ ಕತೆ­ಗ­ಳನ್ನು ಮೀರಿ­ಸ­ಬಲ್ಲ ಒಳ­ನೋಟ ಮತ್ತು ಬದು­ಕಿನ ಗಾಢ ಅರಿವು ಮಾಸ್ತಿ ಕತೆ­ಗ­ಳಲ್ಲಿ ಕಾಣಿ­ಸು­ತ್ತದೆ. ಅವರು ಕತೆ ಬರೆದು ಎಪ್ಪ­ತ್ತೆಂ­ಬತ್ತು ವರು­ಷ­ಗ­ಳಾದ ನಂತರ ದೃಶ್ಯ­ಮಾ­ಧ್ಯ­ಮ­ವಾದ ಸಿನಿಮಾ ಅವರ ಶೈಲಿ­ಯನ್ನು ಕಂಡು­ಕೊ­ಳ್ಳಲು ತುಡಿ­ಯು­ತ್ತಿದೆ. ಮಾಸ್ತಿ­ಯ­ವ­ರಷ್ಟು ನಿರು­ಮ್ಮ­ಳ­ವಾಗಿ, ತಣ್ಣ­ನೆಯ ದನಿ­ಯಲ್ಲಿ ಮತ್ತು ಅಬ್ಬ­ರ­ವಿ­ಲ್ಲದ ಧಾಟಿ­ಯಲ್ಲಿ ಒಂದು ಕಥಾ­ನ­ಕ­ವನ್ನು ಅರು­ಹು­ವುದು ಸಾಧ್ಯ­ವಾ­ದರೆ ಎಷ್ಟು ಚೆನ್ನ ಎಂದು ಈಗ ಎಲ್ಲ­ರಿಗೂ ಅನ್ನಿ­ಸ­ತೊ­ಡ­ಗಿದೆ.
ಮಾಸ್ತಿ­ಯ­ವರ ಕತೆ­ಯಷ್ಟೇ ಬೆರ­ಗು­ಗೊ­ಳಿ­ಸುವ ಕೆಲವು ನಾಟ­ಕ­ಗ­ಳಿವೆ. ಅವರು ಬರೆದ ಆರೆಂಟು ನಾಟ­ಕ­ಗಳ ಪೈಕಿ ಇವ­ತ್ತಿನ ಸಂದ­ರ್ಭಕ್ಕೆ ತುಂಬ ಆಪ್ತ ಅನ್ನಿ­ಸು­ವುದು ಕಾಕ­ನ­ಕೋಟೆ. ಇವತ್ತು ನಾವು ಹಿಡಿ­ಯ­ಲೆ­ತ್ನಿ­ಸು­ತ್ತಿ­ರುವ ಜಾಗ­ತೀ­ಕ­ರ­ಣದ ವಿರು­ದ್ಧದ ರೂಪ­ಕಕ್ಕೆ ಕಾಕ­ನ­ಕೋ­ಟೆ­ಗಿಂತ ಪ್ರಬ­ಲ­ವಾದ ಮತ್ತೊಂದು ದೃಷ್ಟಾಂತ ಸಿಗ­ಲಾ­ರದು. ನಮ್ಮ ರಾಜ­ಕೀಯ ಸ್ಥಿತಿ­ಯನ್ನು ತುಘ­ಲಕಇವ­ತ್ತಿಗೂ ಹೇಗೆ ಪ್ರತಿ­ನಿ­ಧಿ­ಸು­ತ್ತ­ದೆಯೋ ಅಷ್ಟೇ ಸಮ­ರ್ಥ­ವಾಗಿ ಕಾಕ­ನ­ಕೋಟೆ ನಮ್ಮ ಗ್ರಸ್ತ ಆರ್ಥಿಕ ಸ್ಥಿತಿ­ಯನ್ನು ಹಿಡಿ­ದಿ­ಡು­ತ್ತದೆ.

 


ಹಾಗೆ ನೋಡಿ­ದರೆ ನಾವು ಸಂಸ­ರನ್ನೂ ಶ್ರೀರಂ­ಗ­ರನ್ನೂ ನಾಟ­ಕ­ಕಾ­ರ­ರೆಂದು ಒಪ್ಪಿ­ಕೊಂ­ಡಷ್ಟು ಪುತಿ­ನ­ರನ್ನೂ ಮಾಸ್ತಿ­ಯ­ವ­ರನ್ನೂ ಒಪ್ಪಿ­ಕೊ­ಳ್ಳು­ವು­ದಿಲ್ಲ. ಪುತಿನ ಕಾವ್ಯ­ದಲ್ಲಿ ಮಾಸ್ತಿ ಸಣ್ಣ­ಕ­ತೆ­ಯಲ್ಲಿ ಅಗಾ­ಧ­ವಾಗಿ ಸಾಧಿ­ಸಿ­ದ್ದ­ರಿಂದ ಅವರ ಇತರ ಬರ­ಹ­ಗಳು ಮೂಲೆ­ಗುಂ­ಪಾ­ಗಿ­ರುವ ಸಾಧ್ಯ­ತೆಯೂ ಇದೆ. ಆದರೆ ಬಿವಿ ಕಾರಂ­ತರು ಗೋಕುಲ ನಿರ್ಗ­ಮ­ನ­ವನ್ನು ಆಡಿ­ಸದೇ ಹೋಗಿ­ದ್ದರೆ ಅದರ ಅಂತಃ­ಶಕ್ತಿ ಇವ­ತ್ತಿಗೂ ಒಡೆ­ದು­ಕೊ­ಳ್ಳದೇ ಹೋಗು­ತ್ತಿತ್ತೋ ಏನೋ? ಹಾಗೇ, ಮಾಸ್ತಿ­ಯ­ವರ ಕಾಕ­ನ­ಕೋಟೆ ಕೂಡ.

 

 
ಕಾಕ­ನ­ಕೋ­ಟೆಯ ಕಥಾ­ವಿ­ಸ್ತ­ರವೇ ಬೆಚ್ಚಿ­ಬೀ­ಳಿ­ಸು­ವಂ­ತಿದೆ. ಕಾಡು­ಕು­ರು­ಬರ ಹಟ್ಟಿಯ ಬುದ್ಧಿ­ವಂತ ಕಾಕ, ತನ್ನ ಬೂಡನ್ನು ಪರ­ಕೀ­ಯ­ರಿಂದ ಕಾಪಾ­ಡು­ವು­ದಕ್ಕೆ ಯತ್ನಿ­ಸು­ವುದು, ಆ ಹಂತ­ದಲ್ಲಿ ಆತ ಸಂಸ್ಥಾ­ನದ ವಿರು­ದ್ಧ ತಿರು­ಗಿ­ನಿ­ಲ್ಲದೆ ಅವ­ರಿಗೆ ನಿಷ್ಠ­ನಾ­ಗಿ­ದ್ದು­ಕೊಂಡೇ ತನ್ನ ಸ್ವಂತಿ­ಕೆ­ಯನ್ನು ಉಳಿ­ಸಿ­ಕೊ­ಳ್ಳು­ವುದು ಇದರ ವಸ್ತು. ಕುರು­ಬರು ಅರ­ಸೊ­ತ್ತಿ­ಗೆಗೆ ಸಲ್ಲಿ­ಸ­ಬೇ­ಕಾದ ಕಪ್ಪ­ವನ್ನು ಸಲ್ಲಿ­ಸದೇ ಹೋದಾಗ ಉಂಟಾ­ಗುವ ಪರಿ­ಸ್ಥಿ­ತಿ­ಯನ್ನು ಕಾಕ ನಿಭಾ­ಯಿ­ಸುವ ಶೈಲಿ­ಯಲ್ಲೇ ಕಾಡಿನ ಮಕ್ಕ­ಳಿಗೆ ಸಹ­ಜ­ವಾದ ಬುದ್ಧಿ­ವಂ­ತಿಕೆ ಮತ್ತು ಸ್ವಯಂ­ಸ್ಪೂರ್ತಿ ಎದ್ದು ಕಾಣು­ತ್ತದೆ.

ಇಲ್ನೋಡಿ;

ಕಂದಾಯ ವಸೂಲಿ ಮಾಡುವ ಕರ­ಣೀಕ ಹೇಳು­ತ್ತಾನೆ; ಅದೆಲ್ಲ ಆಗೋಲ್ಲ. ಇದೇ ಕೊನೇ ಮಾತು.
ಅದಕ್ಕೆ ಕಾಕನ ಉತ್ತರ; ಅದ್ಯಾಕ ನನ್ನೊ­ಡೆಯ ಹಂಗಂ­ತೀರ? ಜೀವ ಇರ­ಬೇ­ಕಾ­ದರೆ ಇದ­ನ್ಯಾಕ ಕೊನೆ ಮಾತು ಅಂತೀರ?
ಅದಕ್ಕೆ ಕರ­ಣೀಕ ರೇಗು­ತ್ತಾನೆ. ಕಾಕ ಮತ್ತೂ ಮುಂದು­ವ­ರಿ­ಸು­ತ್ತಾನೆ; ಕೊನೇ ಮಾತಾ­ಗ­ಬ್ಯಾಡ ಅಂದಿ ಬುದ್ಧಿ. ಕೊನೇ ಮಾತಾ­ಗೋದೆ ನಿಮಗೆ ಚಂದ ಅಂದರೆ ಹಂಗೆ ಆಗ­ಲೇ­ಳಿರ. ಅಮ್ಮಾ­ವರ ತಾತಿ­ಬಲ ಎಷ್ಟೊ ಅಷ್ಟೆ ಆಯಿತು.

ನಾಟ­ಕಕ್ಕೆ ಬೇಕಾದ ರೋಚ­ಕತೆ, ಕ್ರಿಯೆ ಮತ್ತು ಘಟ­ನೆ­ಗಳ ಸರ­ಮಾ­ಲೆಯೇ ಈ ನಾಟ­ಕ­ದ­ಲ್ಲಿದೆ. ಕಾಕ ತಾನು ಕಾಕ ಅಲ್ಲ ಎಂದು ಹೇಳಿ­ಕೊಂಡು ಕಂದಾಯ ವಸೂ­ಲಿಗೆ ಬರುವ ಹೆಗ್ಗ­ಡೆ­ಯನ್ನು ಭೇಟಿ­ಯಾ­ಗು­ತ್ತಾನೆ. ಹೆಗ್ಗ­ಡೆಗೆ ಅವನೇ ಕಾಕ ಎಂದು ಗೊತ್ತಾಗಿ ಆತ­ನನ್ನು ಬಂಧಿ­ಸುವ ಯತ್ನ ಮಾಡು­ತ್ತಾನೆ. ಹಾಗೆ ಬಂಧಿ­ಸುವ ಹುನ್ನಾರ ಮೊದಲೇ ಗೊತ್ತಾಗಿ ಕಾಕ ಅದ­ರಿಂದ ತಪ್ಪಿ­ಸಿ­ಕೊಂಡು ಹೆಗ್ಗ­ಡೆ­ಯ­ವರ ಮಗ­ನನ್ನು ಕರ­ಣೀ­ಕ­ರನ್ನು ಅಪ­ಹ­ರಿ­ಸು­ತ್ತಾನೆ. ಹಾಗೆ ಅಪ­ಹ­ರಿ­ಸಿ­ಕೊಂಡು ಹೋದ ಹೆಗ್ಗ­ಡೆ­ಯ­ವರ ಮಗ ಕಾಕನ ಮಗ­ಳನ್ನು ಪ್ರೀತಿ ಮಾಡು­ತ್ತಾನೆ. ಕೊನೆ­ಯಲ್ಲಿ ಕಾಕನ ಮಗಳು ಹೆಗ್ಗ­ಡೆ­ಯ­ವರ ಮಗ­ನನ್ನು ಮದು­ವೆ­ಯಾ­ಗು­ತ್ತಾಳೆ. ಕುರು­ಬರ ಬೂಡಿಗೆ ಮಹ­ರಾ­ಜನ ಆಗ­ಮ­ನವೂ ಆಗು­ತ್ತದೆ. ಕರ­ಣೀ­ಕರ ವಂಚ­ನೆಯೂ ಬಯ­ಲಾ­ಗು­ತ್ತದೆ.

ವಿಸ್ತಾ­ರ­ವಾದ ಹಾಗೂ ಪುನ­ರ್ ­ವ್ಯಾ­ಖ್ಯಾ­ನದ ಮರು ಓದನ್ನು ಬೇಡುವ ಕೃತಿ­ಗಳ ಪೈಕಿ ಕಾಕ­ನ­ಕೋಟೆ ಕೂಡ ಒಂದು. ಇವತ್ತು ಓದಿ­ದಾಗ ಅದ­ರೊ­ಳ­ಗಿ­ರುವ ಅನೇಕ ಹೊಸ ಅರ್ಥ­ಗಳು ಬಿಚ್ಚಿ­ಕೊ­ಳ್ಳುತ್ತಾ ಹೋಗು­ತ್ತವೆ. ತುಂಬ ಸರ­ಳ­ವಾದ ಒಂದು ಮಾತು ಇವ­ತ್ತಿಗೆ ಹೇಗೆ ಹೊಂದಿ­ಕೆ­ಯಾ­ಗು­ತ್ತದೆ ಅನ್ನು­ವು­ದನ್ನು ಗಮ­ನಿಸಿ;

ಕಾಕ ಹೇಳು­ತ್ತಾನೆ- ಹಿರಿ­ಯರು ಅಂದಿ­ದಾರೆ ಕಾಡು ನಾಡಾ­ಗ­ಬೇಡ ನಾಡು ಬಯ­ಲಾ­ಗ­ಬೇಡ ಅಂತ. ಕಾಡು ದೇವರು ಒಲಿ­ದಿರೋ ಮಂದಿ ಊರ ಕಟ್ಟ­ತೀವಿ ಅನ್ನ­ಬಾ­ರ­ದಂತೆ. ಈಗ ನಮ್ಮ ಹಕ್ಕಳು ಕಾಡಾಗೆ ನಡೀ­ತಿ­ರ­ಲೀಕೆ ಹರಿ­ದಾ­ರೀ­ಲಿರೋ ಆನೆ ಕಂಪು ಮೂಗಿಗೆ ತಿಳೀ­ತದೆ. ತರ­ಗಿ­ನೊ­ಳ­ಗಿರೋ ತೆಕ್ಕೆ ಬಿದ್ದಿರೋ ಸರಪಾ ಕಣ್ಣಿಗೆ ಕಾಣು­ತದೆ. ಜಿಂಕೆ ಹಿಂದೆ ನಡಿಯೋ ಹುಲಿ ಹೆಜ್ಜೆ ಸಪ್ಪಳ ಕೊಂಬಿನ ದೂರ­ದಲ್ಲಿ ಕಿವಿಗೆ ಕೇಳ­ತದೆ. ಜೇನ ಹುಡು­ಕುತಾ ಹೋಗ­ತಿದ್ರೆ ನೊಣ ಬಂದು ದಾರಿ ತೋರ­ತದೆ. ಊರು ಕಟ್ಟಿ ನಿಂತಿವಿ, ಇದೊಂದೂ ಆಗಲ್ಲ.
ಇವ­ತ್ತಿಗೂ ನಾವು ಪ್ರೀತಿ­ಯಂದ ಕೇಳುವ ನೇಸರ ನೋಡು.. ನೇಸರಾ ನೋಡು ಗೀತೆ­ಯನ್ನೂ ಬರೆ­ದ­ವರು ಮಾಸ್ತಿ. ಇನ್ನೊಂದು ವಿಚಿತ್ರ ನೋಡಿ. ಕಂಬಾರ, ಮಾಸ್ತಿ, ಲಂಕೇ್ ಮುಂತಾ­ದ­ವರು ಸಿನಿಮಾ ಮಾಡು­ತ್ತಿ­ದ್ದಾಗ ಅದಕ್ಕೆ ಹೊಂದುವ ಗೀತೆ­ಗ­ಳನ್ನೂ ತಾವೇ ಬರೀ­ತಿ­ದ್ದರು. ಅವು ಇವ­ತ್ತಿಗೂ ಅಷ್ಟೇ ಹೊಸ­ದಾಗಿ ಉಳ­ಕೊಂ­ಡಿವೆ. ಎಲ್ಲಿದ್ದೇ ಇಲ್ಲೀ ತನಕ, ಕೆಂಪಾ­ದವೋ ಎಲ್ಲಾ ಕೆಂಪಾ­ದವೋ, ಕರಿ­ಯ­ವ್ವನ ಗುಡಿ­ತಾವ ಅರ­ಳ್ಯಾವೆ ಬಿಳಿ­ಹೂವು, ನೇಸರ ನೋಡು, ಸಂಗೀತಾ, ಕಾಡು­ಕು­ದುರೆ ಓಡಿ­ಬಂ­ದಿತ್ತಾ ಇವಿ­ತ್ಯಾದಿ ಹಾಡು­ಗ­ಳಿಗೆ ಸಾವಿಲ್ಲ.
ಇಂಥದ್ದೇ ಇನ್ನೊಂ­ದಷ್ಟು ಗೀತೆ­ಗಳೂ ಇಲ್ಲಿವೆ. ಉದಾ­ಹ­ರ­ಣೆಗೆ ಕಾಕ ಹಾಡುವ ಮತ್ತೊಂದು ಹಾಡು ಹೀಗಿದೆ;
ಮಾದೇ­ಶ್ವರ ನಿನ್ನ ನಂಬದ ಮಂದಿ
ಬಾಳಲ್ಲ ಸಾಯಲ್ಲ ಬಾಡು­ವರು ಕಂದಿ
ಮಾದೇ­ಶ್ವರಾ ನನ್ನ ಸಲ­ಹೆಂದ ಉಸುರು
ಬಾಡಲ್ಲ ಬಳ­ಲಲ್ಲ ಎಂದೆಂದು ಹಸುರು.ಹಾಗೇ ಆಶೀ­ರ್ವ­ಚನ ಗೀತ­ದಂ­ತಿ­ರುವ ಈ ಸಾಲು­ಗ­ಳನ್ನು ಓದಿ;
ಕರಿ­ಹೈ­ದ­ನ­ವ್ವನಾ ಹೆಸ­ರೆಂದು ನಿಲ್ಲಲಿ
ಅವನ ಬಳಿ­ಯೆಂ­ದೆಂದು ಒಳ್ಳಿ­ದನು ಮೆಲ್ಲಲಿ
ಅವನ ಹೆತ್ತಾ ಕಾಡು ಎಂದೆಂದು ಚಿಗು­ರಲಿ
ಅವನ ಬಳಿ ಎಂದೆಂದು ಮಿಕ್ಕಿ­ರಲಿ ಹೊಗ­ರಲಿ
ಅವನ ಹಾಡಿ­ಗ­ಳಿ­ರಲಿ ಎಂದೆಂದು ಸೊಗ­ದಲಿ
ಅವನ ಬಳಿ­ಗೆಂ­ದೆಂದು ನಗೆ­ಯಿ­ರಲಿ ಮೊಗ­ದಲಿ
ಅವನ ಹೊಗ­ಳುವ ಹಾಡು ಎಂದೆಂದು ಹಾಡಲಿ
ಅವನ ಬಳಿ ಎಂದೆಂದು ಹಬ್ಬ­ವನು ಮಾಡಲಿ

**­*­*­**
ಕಾಕ­ನ­ಕೋಟೆ ಅನೇಕ ಪ್ರಶ್ನೆ­ಗ­ಳನ್ನು ಹುಟ್ಟು­ಹಾ­ಕು­ತ್ತದೆ. ಅನೇಕ ಪ್ರಶ್ನೆ­ಗ­ಳಿಗೆ ಉತ್ತ­ರಿ­ಸು­ತ್ತದೆ. ನಾವು ನಮ್ಮನ್ನು ಆವ­ರಿ­ಸುವ ಆಧು­ನಿ­ಕತೆ ಎಂಬ ಕಾಯಿ­ಲೆ­ಯನ್ನು ಹೇಗೆ ಎದು­ರಿ­ಸ­ಬೇಕು ಅನ್ನು­ವು­ದಕ್ಕೆ ಆಧು­ನಿ­ಕ­ತೆ­ಯಲ್ಲಿ ಉತ್ತ­ರ­ವಿಲ್ಲ. ಉತ್ತರ ಹುಡು­ಕ­ಬೇ­ಕಾ­ದರೆ ನಾವು ಮತ್ತೆ ನಮ್ಮ ಹಳೆಯ ಕಾಲಕ್ಕೆ ಮರ­ಳ­ಬೇಕು. ನಾಗ­ರೀ­ಕ­ತೆಯ ಉತ್ತುಂ­ಗಕ್ಕೆ ತಲು­ಪಿದ ಒಂದು ಸಂಸ್ಕೃತಿ ಮಾಡು­ವುದು ಅದನ್ನೇ. ಅದೇ ಕಾರ­ಣಕ್ಕೆ ಪಾಶ್ಚಾತ್ಯ ದೇಶ­ಗಳು ಪೂರ್ವದ ಒಡ­ಪು­ಗ­ಳಲ್ಲಿ, ಶ್ಲೋಕ­ಗ­ಳಲ್ಲಿ, ಮಾಂತ್ರಿ­ಕ­ತೆ­ಯಲ್ಲಿ, ಪವಾ­ಡ­ದಲ್ಲಿ ಉತ್ತರ ಹುಡು­ಕಲು ಯತ್ನಿ­ಸಿದ್ದು.


ಆಧು­ನಿ­ಕತೆ ಒಂದು ಸ್ಥಿತಿ­ಯಲ್ಲ; ಅದೊಂದು ರೋಗ. ಅದು ರೋಗ ಅನ್ನು­ವುದು ನಮಗೆ ತಕ್ಪ­ಣಕ್ಕೆ ಗೊತ್ತಾ­ಗು­ವು­ದಿಲ್ಲ. ಸಮೂ­ಹ­ಸ­ನ್ನಿ­ಯಲ್ಲಿ ಅದೊಂದು ವರ­ದಂತೆ ಕಾಣಿ­ಸುವ ಸಾಧ್ಯ­ತೆಯೇ ಹೆಚ್ಚು. ಆದರೆ ಏಕಾಂ­ತ­ದಲ್ಲಿ ಮುಂಜಾ­ವದ ಒಂಟಿ­ತ­ನ­ದಲ್ಲಿ ಆಧು­ನಿ­ಕ­ತೆಯ ಶಾಪ ನಮ್ಮನ್ನು ತಟ್ಟು­ತ್ತದೆ. ನಾವು ಜೀವಿ­ಸಲು ತೀರ ಅಗ­ತ್ಯ­ವಾದ `ಚಾ­ವಡಿ’ಯಂಥ ಜಾಗ­ಗ­ಳನ್ನು, ಜಗ­ಲಿ­ಯನ್ನು, ಹಿತ್ತಿ­ಲನ್ನು ಅದು ನಾಶ­ಮಾ­ಡು­ತ್ತದೆ.
ನಗ­ರ­ಗ­ಳಲ್ಲಿ ಮನೆಗೆ ಜಗ­ಲಿ­ಗ­ಳಿಲ್ಲ. ಜಗ­ಲಿಯ ಮೇಲೆ ಕುಳಿತು ಮಾತಾ­ಡುವ ಬಳೆ­ಗಾ­ರ­ನಿಲ್ಲ, ಬಳೆ­ಗಾರ ಹೊತ್ತು ತರುವ ಸುದ್ದಿ­ಗಾಗಿ ಕಾಯುವ ರೋಮಾಂ­ಚ­ವಿಲ್ಲ. ಸುದ್ದಿ­ಮೂ­ಲ­ಗಳೂ ಮಾಹಿ­ತಿ­ಕೇಂ­ದ್ರ­ಗಳು ಇವತ್ತು ಬದ­ಲಾ­ಗಿವೆ. ಅಅ­ದಕ್ಕೆ ತಕ್ಕಂತೆ ನಮ್ಮ ನಿಲು­ವು­ಗಳೂ ಬದ­ಲಾ­ಗು­ತ್ತಿವೆ. ಮನೆ ತುಂಬ ಜನ­ರಿಂದ ತುಂಬಿ­ಕೊಂಡು ಕಲ­ಕಲ ಅನ್ನು­ತ್ತಿ­ದ್ದರೆ ಖುಷಿ­ಯಾ­ಗು­ತ್ತಿದ್ದ ದಿನ­ಗಳು ಈಗಿಲ್ಲ. ಈಗ ಪ್ರತಿ­ಯೊ­ಬ್ಬ­ರಿಗೂ ನೀರವ ಏಕಾಂತ ಬೇಕು.
ಇದು ಜಾಗ­ತೀ­ಕ­ರ­ಣದ ಕೊಡುಗೆ ಎಂದು ಭಾವಿ­ಸು­ವುದು ತಪ್ಪು. ಇದು ನಮ್ಮ ಆಧು­ನಿಕ ಶಿಕ್ಪ­ಣ­ದಿಂದ ಬಂದದ್ದು. ಐವತ್ತು ವರು­ಷ­ಗಳ ಹಿಂದೆ ಇಂಗ್ಲಿಷ್ ಜ್ಞಾನ ಆ ಕಾಲದ ಲೇಖ­ಕನ ಮತ್ತು ಓದು­ಗನ ಕನ್ನಡ ಪ್ರೀತಿ­ಯನ್ನು ಹೆಚ್ಚಿ­ಸುವ ಕೆಲಸ ಮಾಡು­ತ್ತಿತ್ತು. ಇವತ್ತು ಅದಕ್ಕೆ ತದ್ವಿ­ರು­ದ್ಧ­ವಾ­ದದ್ದು ನಡೆ­ಯ­ತ್ತಿದೆ.
ಮೊನ್ನೆ ಗೋಪಾ­ಲ­ಕೃಷ್ಣ ಅಡಿಗ ಟ್ರಸ್ಟ್ ನಡೆ­ಸಿದ ಅಡಿಗ ಸಂಸ್ಮ­ರಣೆ ಕಾರ್ಯ­ಕ್ರ­ಮ­ದಲ್ಲಿ ಮಾತ­ನಾ­ಡುತ್ತಾ ಕಿ.ರಂ. ನಾಗ­ರಾಜ ಅಡಿ­ಗರ ಕೆಲವು ಸಾಲು­ಗ­ಳನ್ನು ಉದಾ­ಹ­ರಿ­ಸಿ­ದರು;
ಮನೆಯ ಮಕ್ಕಳ ಕೂಡೆ ಆಡ ಬಂದರೆ ಊರ
ಹುಡುಗ ಪಾಳೆಯ, ತಿಂಡಿ ಕೊಟ್ಟು ನಗಿಸು;
ಅಲ್ಲೆ ತಳ­ವೂ­ರಿ­ಸಲು ಬಯಸಿ ತೆಳ್ಳ­ಗೆ­ಮಾಡ
ಬೇಡ ಇರು­ವಷ್ಟು ತಂಭಾಲು ಗುಟುಕು.ಕಟ್ಟೆ­ಯೊ­ಳ­ಗಡೆ ನೀರ ಹಣಿ­ಸಿ­ದರೆ ಬೆಳವ ಮರ
ತಲೆ­ಮೇಲೆ ತಳೆ­ಯು­ವುದು ಗೂಡ ಮಾಲೆ
ಅದ­ರೊ­ಳಗೆ ಬಂದ­ಳಿಕೆ ಬೆಳೆವ ವಿಶ್ವ­ವಿ­ಶಾಲ
ಭಾವವೇ ಬಿಡು­ಗ­ಡೆಗೆ ಬಿಟ್ಟ ಕೂಳೆ.

ಮೆಟ್ರೋ-ದಂಥ ಬಹು­ರಾ­ಷ್ಟ್ರೀಯ ಸಂಸ್ಥೆ­ಗ­ಳನ್ನು ಹೇಗೆ ನಿಭಾ­ಯಿ­ಸ­ಬೇಕು ಅನ್ನು­ವು­ದಕ್ಕೆ ಉತ್ತರ ಈ ಕಾವ್ಯ­ದ­ಲ್ಲಿದೆ ಅನ್ನುವ ಕಾರ­ಣಕ್ಕೆ ಅಡಿ­ಗ­ರನ್ನು ಎಲ್ಲ ಕಾಲಕ್ಕೂ ಸಲ್ಲುವ ಕವಿ ಎಂದು ಕರೆ­ಯ­ಬ­ಹು­ದಲ್ಲ.

 

ಅವ­ರದೇ ಮತ್ತೊಂದು ಸಾಲು ನೋಡಿ;
ಮಾಡಿ ಮಡಿ­ಯದೆ ಬದುಕಿ ಉಳಿ­ಯ­ಬಾ­ರದು, ಮಡ್ಡಿ;
ಕರ್ಪೂ­ರ­ವಾ­ಗದೆ ಬೆಂಕಿ ಬಳಿಗೆ
ಸುಳಿ­ಯ­ಬಾ­ರದು; ಹೊತ್ತಿ ಹೊಗೆವ ಮಡ್ಡಿಯ ಕಂಪು
ಹೊರ­ಗ­ಡೆಗೆ; ಒಳಗೆ ಕೊನೆ­ಯಿ­ಲ್ಲದ ಧಗೆ.

ಇದು ಇವ­ತ್ತಿನ ಸ್ಥಿತಿ. ನಾವೆಲ್ಲ ಕರ್ಪೂ­ರ­ವಾ­ಗದೇ ಬೆಂಕಿ ಬಳಿಗೆ ಸುಳಿ­ಯು­ತ್ತಿ­ದ್ದೇವಾ?

Advertisements

One response to this post.

  1. Posted by ಕಾರ್ತಿಕ್ on ಮೇ 26, 2008 at 11:41 ಫೂರ್ವಾಹ್ನ

    Thanks Girish!

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: