ಅಣ್ಣಾವ್ರ ನೆನಪು ಇನ್ನೂ ಎಷ್ಟು ಹಸಿ ಎಂದರೆ…

-ಶ್ರೀನಿವಾಸರಾಜು

ಸತ್ಯಸಂಧನ ಪಾತ್ರಧಾರಿಯ ತುಮುಲಗಳು

ಅಣ್ಣಾವ್ರ ನೆನಪು ಇನ್ನೂ ಎಷ್ಟು ಹಸಿ ಎಂದರೆ… ಒಣಗಿವೆಯೆಂಬಂತೆ ತೋರುವ ಬಣ್ಣಗಳು ಕ್ಯಾನ್ವಾಸ್ ತಡವಿದ ಒಡನೆಯೇ ಬೆರಳಿಗೆ ಅಂಟಿಕೊಳ್ಳುವುದುಂಟು. ಏಪ್ರಿಲ್ ಎಂಬ ಅವರ ಹುಟ್ಟು ಸಾವಿನ ತೇದಿಗಳನ್ನೊಳಗೊಂಡ ತಿಂಗಳು ಇದಕ್ಕೆಲ್ಲ ಪೂರಕ ಎನ್ನಿಸುವಂತಿದೆ. ಮೊನ್ನೆ ಪತ್ರಿಕೆಯೊಂದರಲ್ಲಿ ಈ ಸದ್ಯದಲ್ಲೇ ಬಣ್ಣ ಲೇಪಿಸಿಕೊಂಡು ಬಿಡುಗಡೆ ಕಾಣಲಿರುವ `ಸತ್ಯ ಹರಿಶ್ಚಂದ್ರ’ದ ಸ್ಟಿಲ್ಗಳನ್ನು ನೋಡುತ್ತಿದ್ದಂತೆಯೇ ರಾಜ್ ನೆನಪು ಇನ್ನಷ್ಟು ಒತ್ತರಿಸಿತು. ಕೈಯಲ್ಲೊಂದು ದಡಿ, ಹೆಗಲ ಮೇಲೆ ಕಂಬಳಿ ಹೊದ್ದು ಮಸಣದಲ್ಲಿ ನಿಂತಿರುವ ರಾಜ್, ಸ್ಥಳೀಯ ಮೋಸೆಸ್ನಂತೆ, ಅಥೆನ್ಸ್ ತೊರೆದ ಟೈಮನ್ನಂತೆ ನಾನಾ ದಿನಸಿನಲ್ಲಿ ಕಂಗೊಳಿಸತೊಡಗಿದರು. ಈ `ಸತ್ಯ ಹರಿಶ್ಚಂದ್ರ’ ಸಿನಿಮಾ, ’93ರಲ್ಲೊಮ್ಮೆ ಸೆಪಿಯಾ ಕಲರ್ನಲ್ಲಿ ಬಿಡುಗಡೆಯಾಗಿ, ಆಗ ಸಾಕಷ್ಟು ಧೂಳೆಬ್ಬಿಸುತ್ತಿದ್ದ `ಖಲ್ನಾಯಕ್’ ಎಂಬ ಹಿಂದಿ ಚಿತ್ರದ ಜೊತೆ ಟಕ್ಕರ್ ಹೊಡೆದು, ಯಶಸ್ವಿ ನೂರು ದಿನಗಳ ಪ್ರದರ್ಶನ ಕಂಡಿತ್ತು. ಹಾಗೆಯೇ ಪ್ರಾದೇಶಿಕ ಸಿನಿಮಾಗಳ ಪೊಟೆನ್ಷಿಯಾಲಿಟಿ ಎಂಥದ್ದೆಂಬುದನ್ನು ಸಾಬೀತು ಮಾಡಿತ್ತು ಕೂಡ.

ಕನ್ನಡ ಚಿತ್ರರಂಗ ತನ್ನನ್ನು ಉಜ್ಜೀವಿಸಿಕೊಳ್ಳಲು ಆಗಾಗ ರಾಜ್ ಚಿತ್ರಗಳ ನೆರವು ಪಡೆಯುತ್ತಲೇ ಇರುತ್ತದೆ. ಹೀಗಿರುವಾಗ, ಕಲರ್ `ಸತ್ಯ ಹರಿಶ್ಚಂದ್ರ’, ಹೊಯ್ದಾಟದ ರಾಜಕಾರಣ ಮತ್ತು ಎಲೆಕ್ಷನ್ನಿನ ಪೊಳ್ಳು ಭರಾಟೆಯ ಸದ್ಯದ ಪರಿಸ್ಥಿತಿಯಲ್ಲಿ ಕನ್ನಡಿಗರಿಗೆ ತುಸು ರಿಲೀಫ್ ಒದಗಿಸಬಹುದು. ಇನ್ನು `ಸತ್ಯ ಹರಿಶ್ಚಂದ್ರ’ದ ಕಥಾನಾಯಕ ಪ್ರಕಟಿಸುವ ಮೌಲ್ಯಗಳು ಜನರಿಗೆ ಆದರ್ಶಪ್ರಾಯವಾಗಿ ಕಾಣಿಸುವುದರಿಂದಲೇ ಈ ಕತೆ ಕಾವ್ಯವಾಗಿ, ನಾಟಕವಾಗಿ, ಸಿನಿಮಾ ಆಗಿ ಮತ್ತೆ ಮತ್ತೆ ಪ್ರಸ್ತುತತೆ ಗಳಿಕೊಳ್ಳುತ್ತಿದೆಯೇನೋ ಎನಿಸುತ್ತದೆ. ಇದು ಕೂಡ ಅಷ್ಟೊಂದು ನಿಜವಿರಲಿಕ್ಕಿಲ್ಲ. ಆದರೆ ಆದರ್ಶಗಳ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ನಮ್ಮ ಜನಕ್ಕೆ ಕೊಂಚ ಕಷ್ಟ ಎಂದು ನಂಬುವುದು ಎಂಥ ಸುಂದರ ಆಶಾವಾದ!

 

`ಹರಿಶ್ಚಂದ್ರ’ದಂಥ ಪಾತ್ರ,ಗಳು ಕಲಾವಿದ ರಾಜ್ಗೆ ಸಾಲಿಡ್ ಇಮೇಜ್ ದೊರಕಿಸಿಕೊಟ್ಟವು ಎಂಬುದು ಚಾರಿತ್ರಿಕ ಸತ್ಯ. ಆದರೆ ಇಮೇಜ್ಗಳು ಮನುಷ್ಯರನ್ನು ಪೊರೆಯುವುದಿಲ್ಲ. ಈ ನಿಷ್ಠುರ ಸತ್ಯ ಹಲವು ವಿಪಯರ್ಾಸದ ಬಗೆಗಳಲ್ಲಿ ಅಣ್ಣಾವ್ರ ಬದುಕಿನಲ್ಲೂ ವ್ಯಕ್ತವಾಗಿದ್ದು ಎಲ್ಲರಿಗೆ ಗೊತ್ತು. ಇಲ್ಲಿ ಎರಡು ಘಟನೆಗಳು ನೆನಪಾಗುತ್ತಿವೆ. ಮೊದಲನೆಯದು ಘಟಿಸಿದ್ದು ಕಳೆದ ಶತಮಾನದ ಅರವತ್ತರ ದಶಕದಲ್ಲಿ: `ಮಂತ್ರಾಲಯ ಮಹಾತ್ಮೆ’ ಎಂಬ ಚಿತ್ರಕ್ಕೆ ರಾಜ್ಕುಮಾರ್ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಶೂದ್ರನೊಬ್ಬ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಹಳಷ್ಟು ಮೇಲ್ಜಾತಿ ಜನರ ವಿರೋಧವಿತ್ತು. ಇದರಿಂದ ನೊಂದ ರಾಜ್, ತಮ್ಮನ್ನು ಚಿತ್ರದಿಂದ ಕೈಬಿಡುವಂತೆ ನಿಮರ್ಾಪಕರನ್ನು ವಿನಂತಿಸಿದ್ದರು. ನಿದರ್ೇಶಕ ಟಿ.ವಿ.ಸಿಂಗ್ಠಾಕೂರ್ಗೆ ರಾಜ್ರನ್ನು ಕೈಬಿಡಲು ಮನಸ್ಸಾಗಲಿಲ್ಲ. ಕೊನೆಗೆ ಅವರೆಲ್ಲ ಚೀಟಿಯ ಮೂಲಕ ನಾಯಕನ ಆಯ್ಕೆ ಮಾಡಲು ನಿರ್ಧರಿಸಿ, ರಾಜ್ಕುಮಾರ್-ಉದಯಕುಮಾರ್-ಕಲ್ಯಾಣ್ಕುಮಾರ್ ಈ ಮೂವರ ಹೆಸರನ್ನು ಬೇರೆ ಬೇರೆ ಚೀಟಿಗಳಲ್ಲಿ ಬರೆದು ಆರಿಸಿದಾಗ ರಾಜ್ಕುಮಾರ್ರ ಹೆಸರೇ ಮೂರು ನಾಲ್ಕು ಸಲ ಬಂತಂತೆ. ಇದನ್ನು ಕೇಳಿ, ತಮ್ಮ ಮೇಲೆ ದೈವಾನುಗ್ರವಾಗಿದೆ ಎಂದು ಬಗೆದು ರಾಜ್ ಆ ಚಿತ್ರದಲ್ಲಿ ನಟಿಸಲು ಒಪ್ಪಿದರಂತೆ.

ಒಂದು ಸಂಗತಿಯನ್ನಿಲ್ಲಿ ಗಮನಿಸಬೇಕು. ಈ ಪಾತ್ರ ನಿರಾಕರಣೆಯ ಪ್ರಕರಣ ಜರುಗಿದ ಕಾಲಕ್ಕಾಗಲೇ ರಾಜ್ಕುಮಾರ್ ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗಕ್ಕೆ ಅವರು ಕಾಲಿಟ್ಟು ಅಲ್ಲಿಗೆ ಹತ್ತು ವರ್ಷಗಳೇ ಕಳೆದಿದ್ದವು. ಆದರೂ ಅವರನ್ನು ಅವಮಾನಿಸುವ ನೀಚತನದಿಂದ ಕನ್ನಡ ಚಿತ್ರರಂಗ ಮುಕ್ತವಾಗಿರಲಿಲ್ಲ. ಇವೆಲ್ಲ ರಾಜ್ ಮನಸ್ಸಿನ ಮೇಲೆ ನಿಜಕ್ಕೂ ಯಾವ ಪರಿಣಾಮ ಬೀರಿದ್ದಿರಬಹುದು?

ರಾಜ್ಕುಮಾರ್ರನ್ನು ವೀರಪ್ಪನ್ ಅಪಹರಿಸುವ ಸ್ವಲ್ಪ ಕಾಲಕ್ಕೆ ಮೊದಲು ಇನ್ನೊಂದು ಘಟನೆ ನಡೆಯಿತು. ಅವರು ವಿಮಾನದಲ್ಲಿ ಎಲ್ಲಿಗೋ ಪ್ರಯಾಣಿಸಬೇಕಿತ್ತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ಅಧಿಕಾರಿಗಳು ರಾಜ್ರನ್ನು ತಪಾಸಣೆ ಮಾಡತೊಡಗಿದರು. ಈ ತಪಾಸಣೆ ಗಂಟೆಗಟ್ಟಲೆ ಲಂಬಿಸಿತು. ತಮ್ಮ ಪ್ರಯಾಣ ತಡವಾಗುತ್ತಿದೆ ಎಂದು ರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಸಲೆತ್ನಿಸಿದರೂ, ಅವರ್ಯಾರೂ ಅದನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಅವರ ಅಸಡ್ಡೆಗೆ ಕಾರಣವೆಂದರೆ- ರಾಜ್ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪಲುಕದೆ ಕನ್ನಡದಲ್ಲಿ ಅಹವಾಲು ಹೇಳಿಕೊಂಡಿದ್ದರು ಎಂಬುದು! ಅಲ್ಲದೆ ರಾಜ್ ಪಂಚೆಯುಟ್ಟು ಸಾಮಾನ್ಯನಂತೆ ಕಾಣುತ್ತಿದ್ದುದೂ ಅವರನ್ನು ಉಪೇಕ್ಷಿಸಲು ಅಧಿಕಾರಿಗಳಿಗೆ ಕಾರಣವಾಗಿತ್ತು. ರಾಜ್ಕುಮಾರ್ರ ಸರಳತೆೆಯೇ ಅವರಿಗೆ ವಿನಾಕಾರಣ ಮುಜುಗರಕ್ಕೆ ಒಳಗಾಗಬೇಕಾದ ಪೇಚನ್ನೂ ತಂದಿಟ್ಟಿತ್ತು. ಇದೆಲ್ಲ ವಿಷಯ ಗೊತ್ತಾಗುತ್ತಿದ್ದಂತೆಯೇ ಕನ್ನಡಿಗರು ರೊಚ್ಚಿಗೆದ್ದರು. ಕೇಂದ್ರ ವಿಮಾನಯಾನ ಮತ್ತು ನಾಗರಿಕ ಖಾತೆ ಸಚಿವರು ಮಧ್ಯೆ ಪ್ರವೇಶಿಸಿ ಆದುದಕ್ಕೆ ಕ್ಷಮೆ ಯಾಚಿಸಿದ ಮೇಲೆ ಎಲ್ಲ ತಣ್ಣಗಾಯಿತು.

ಅಂದರೆ ಜಾತಿ, ಅಂತಸ್ತು, ಭಾಷಾ ದುರಾಗ್ರಹ ಇತ್ಯಾದಿಗಳು ನಮ್ಮ ಸಮಾಜದಲ್ಲಿ ಹೇಗೆ ಎಲ್ಲರನ್ನು ಮುತ್ತಿ ಕಾಡುತ್ತವೆ ನೋಡಿ! ಇವನ್ನೆಲ್ಲ ಹೇಗೆ ಎದುರಿಸಿದಿರಿ ಮತ್ತು ಭರಿಸಿದಿರಿ ಎಂದು ಕೇಳೋಣವೆಂದರೆ ಇಂದು ರಾಜ್ ನಮ್ಮೊಡನಿಲ್ಲ. ಇದ್ದರೂ ಅವರು ಈ ಬಗೆಯ ಸಂಗತಿಗಳ ಕುರಿತು ಮನಸ್ಸು ಬಿಚ್ಚಿ ಸ್ಪಂದಿಸುತ್ತಿದ್ದರು ಎನಿಸುವುದಿಲ್ಲ. ಯಾಕೆಂದರೆ ರಾಜ್ ತಮ್ಮ ಸಾರ್ವಜನಿಕ ಇಮೇಜ್ಗೆ ಚ್ಯುತಿ ಬಾರದಂತೆ ಬದುಕುವುದನ್ನು ರೂಢಿಸಿಕೊಂಡಂತಿತ್ತು. ರಾಜ್ ತೀರಿಕೊಂಡಾಗ, `ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ ಎಂದು ಸಾಹಿತಿ ದೇವನೂರು ಮಹಾದೇವ ಪ್ರತಿಕ್ರಿಯಿಸಿದ ಮಾತುಗಳ ಒಳಗಿನ ವ್ಯಾಪಕ ಅರ್ಥ ಈಗ ಹೊಳೆಯುತ್ತಿದೆ. ಮತ್ತು ಎಂತೆಂಥ ಮಾನಸಿಕ ಜಂಜಡಗಳನ್ನು ರಾಜ್ ತಮ್ಮ ಪಾಲಿಗೆ ಅಕಾರಣ ಉಳಿಸಿಕೊಂಡಿದ್ದರು ಎಂದು ದಿಗಿಲಾಗುತ್ತದೆ. ಹಾಗಾದರೆ ಹರಿಶ್ಚಂದ್ರನ ಜೊತೆ ರಾಜ್ ಹೇಗೆ ಮುಖಾಮುಖಿಯಾಗಿದ್ದಿರಬಹುದು? ಇದು ಬಹುದೊಡ್ಡ ಪ್ರಶ್ನೆ.

 

 

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: