ನಮ್ಮ ಕಾಲದಲ್ಲಿ ರಾವಣನಂಥ ಪ್ರಚಂಡ

-ಎನ್ ಸಿ ಮಹೇಶ್

ಪ್ರೇಕ್ಷಕರು ಥಿಯೇಟರ್ನಲ್ಲಿ ಮಿಸುಕಾಡಿದ ಬಗೆಯನ್ನು ಕೊಂಚ ಉತ್ಪ್ರೇಕ್ಷಿಸುತ್ತಲೇ ನಗುತ್ತ ಗೆಳೆಯರೊಂದಿಗೆ ಹರಟುತ್ತಿದ್ದೆ. ಆ ಚಿತ್ರ ನೋಡುವ ಧೈರ್ಯ ತೋರದ ನನ್ನ ಗೆಳೆಯರು ನನ್ನ ವಿವರಣೆಗಳಿಗೆ ಖುಷಿಗೊಳ್ಳುತ್ತಿದ್ದರು. ಅಂದರೆ ಚಿತ್ರ ನೋಡದೆ ನಾವು ಬಚಾವಾದೆವು ಎಂದು ಅವರೆಂದಾಗ ಯಾಕೋ ನನಗೂ ಪಿಚ್ಚೆನಿಸಿತು. ಹಳ್ಳಿಯಲ್ಲಿನ ಪೌರಾಣಿಕ ನಾಟಕಗಳ ಪ್ರಾಕ್ಟೀಸು, ಪೈಪೋಟಿ ಮುಂತಾದವುಗಳನ್ನು ತುಂಬಾ ಹತ್ತಿರದಿಂದ ಕಂಡು ಗೊತ್ತಿದ್ದ ನನಗೆ ಪ್ರಚಂಡರಾವಣ ಸಿನಿಮಾದ ಬಗ್ಗೆ ಕಾಮೆಂಟ್ ಇಷ್ಟು ದೂರಕ್ಕೆ ಜಿಗಿಯಬಹುದೆಂದು ಭಾವಿಸಿರಲಿಲ್ಲ. ನಮ್ಮ ಚಿತ್ರೋದ್ಯಮದವರು ಎಷ್ಟು ತಪ್ಪಾಗಿ ಲೆಕ್ಕಾಚಾರ ಹಾಕುತ್ತಾರೆ ಎಂಬುದರ ಬಗ್ಗೆ ಖೇದ ಶುರುವಾಯಿತು. ರಾತ್ರಿಯಿಂದ ಬೆಳಿಗ್ಗೆವರೆಗೆ ನಡೆಯುವ ನಾಟಕವನ್ನು ಪ್ರತಿಹಂತದಲ್ಲಿ ಚೇತೋಹಾರಿಯಾಗಿಡಲು ಸಂಭಾಷಣೆಯನ್ನಷ್ಟೇ ನೆಚ್ಚಿಕೊಳ್ಳದೆ ಸಂಗೀತಕ್ಕೆ ಹೆಚ್ಚು  ಒತ್ತು ಕೊಡುತ್ತಿದ್ದ ವಿಧಾನ ಯಾಕಿಲ್ಲ ಎಂಬುದನ್ನು ಈ ಮಂದಿ ಯೋಚಿಸಿಯೇ ಇಲ್ಲವೇನೋ ಅನಿಸಿತು.
ಒಂದು ಕಾಲಘಟ್ಟದಲ್ಲಿ ಪ್ರಚಂಡ ಯಶಸ್ಸು ಕಂಡ ಪ್ರಚಂಡರಾವಣ ನಾಟಕವನ್ನು ಸಿನಿಮಾಗೆ ಜಗ್ಗಿಸುವ ಬಗ್ಗೆ ಚಿಂತಿಸಿಲ್ಲ ಮತ್ತು ಚಿಂತಿಸಲು ಬಂದಿಲ್ಲ. ಒಂದು ಮಾಧ್ಯಮದಲ್ಲಿ ಒಗ್ಗಿಬರುವ ಬಗೆ ಬೇರೊಂದು ಮಾಧ್ಯಮದಲ್ಲಿ ಧ್ವನಿಪೂರ್ಣವಾಗಿ ಹೊರಹೊಮ್ಮಲು ಏನೇನು ಸಿದ್ಧತೆ, ತಯ್ಯಾರಿ ಅಗತ್ಯ ಎಂಬುದನ್ನು ಸಾರಾಸಗಟಾಗಿ ತಿರಸ್ಕರಿಸಿರುವುದರಿಂದ ಚಿತ್ರ ಕಳೆಗಟ್ಟದೆ ಹೋಗಿದೆ. ಪುರಾಣದ ಚಿತ್ರಿಕೆಗಳು ಅಂದರೆ ಕೇವಲ ಬಣ್ಣಬಣ್ಣದ ಸೆಟ್ಸ್ನಿಂದ ತುಂಬಿರುತ್ತವೆ; ಈ ಕಾಲಕ್ಕೆ ಅವು ಸ್ವಲ್ಪ ಡಿಫರೆಂಟಾಗಿ ಕಾಣಿಸುತ್ತವೆ; ಮಾಮೂಲಿ ಕಮಷರ್ಿಯಲ್ ಸಿನಿಮಾಗಳಲ್ಲಿ ಸಾಮಾಜಿಕ ಬದುಕನ್ನು ಕಂಡು ಬೇಸತ್ತ ಪ್ರೇಕ್ಷಕ ಈ ಬಣ್ಣಬಣ್ಣದ ಜಗತ್ತನ್ನು ಖಂಡಿತಾ ಬೆರಗಿನಿಂದ ನಿರೀಕ್ಷಿಸುತ್ತಾನೆ ಎಂದಷ್ಟೇ ಲೆಕ್ಕಾಚಾರ ಹಾಕಿಕೊಂಡಿರುವುದರಿಂದಲೇ ಎಲ್ಲವೂ ಉಲ್ಟಾಪಲ್ಟಾ ಆದದ್ದು.
ಪುರಾಣಗಳನ್ನು ಸ್ವೀಕರಿಸುವ ಮನಸ್ಥಿತಿಗಳು ಎಂಥದಿರುತ್ತವೆ ಮತ್ತು ಅವು ತಮ್ಮ ಜೀವನಕ್ರಮವನ್ನು ಪುರಾಣದ ಕೆಲವು ಪಾತ್ರಗಳಿಗೆ ಸಮೀಕರಿಸುತ್ತ ಹೇಗೆ ಒಟ್ಟಂದದಲ್ಲಿ ಬದುಕು ನಡೆಸುತ್ತಿರುತ್ತವೆ ಎಂಬುದು ಅಭ್ಯಾಸಯೋಗ್ಯ ವಿಚಾರ ಎಂಬುದು ಇವರ ತಲೆಹೊಕ್ಕಿಲ್ಲ, ಇವತ್ತು ಅಂಥ ಒಟ್ಟಂದದ ಮನಸ್ಥಿತಿಗಳು ಹಳ್ಳಿಗಳಲ್ಲೇ ಛಿದ್ರಛಿದ್ರವಾಗುತ್ತಿರುವಾಗ, ಆದರೂ ಕೆಲವರು ತಮ್ಮ ಪೂರ್ವಸ್ಮೃತಿಯೆಂಬಂತೆ, ಬಣ್ಣ ಸೆಳವು ಅಂತೆಲ್ಲಾ ಮಾತಾಡುತ್ತ ಇವತ್ತು ಪೌರಾಣಿಕ ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಗರದ ಜನತೆ ಈ ಚಿತ್ರವನ್ನು ಸ್ವೀಕರಿಸುವ ಬಗೆ ಎಂಥದ್ದು? ನಿಮರ್ಾಪಕರಿಗೆ ಬಣ್ಣಗಳ ಕಾಂಬಿನೇಷನ್ ವಿಚಿತ್ರವಾಗಿ ಆಕಷರ್ಿಸಿದಂತಿದೆ. ಹಾಗಾಗಿ ಇದು ಮೊದಲಿಗೆ ಬಣ್ಣಗಳ ಮೆರವಣಿಗೆ. ಆದರೆ ಭಕ್ತಪ್ರಹ್ಲಾದ, ನರಕಾಸುರವಧೆ ಮುಂತಾದ ಪೌರಾಣಿಕ ಚಿತ್ರಗಳು ಗೆದ್ದದ್ದು ಯಾಕೆಂದರೆ- ಒಂದು, ನಿರೂಪಣಾ ಕ್ರಮ; ಎರಡು, ಪುರಾಣ ಮನಸ್ಥಿತಿಯನ್ನು ದಾಟಿಸುವಲ್ಲಿನ ಸಫಲತೆ. ಕಾಲಧರ್ಮ ಎನ್ನುವುದು ಮುಖ್ಯವಾಗುವುದು ಈ ಘಟ್ಟದಲ್ಲಿಯೇ

 


ಕತೆ ಹೇಳುವ, ಕತೆ ಕೇಳುವ ಪರಿಪಾಠ ಮಾಯವಾಗಿ ನಮ್ಮ ಜನಪದ ಕತೆಯ ರಾಕ್ಷಸರೆಲ್ಲ ಸತ್ತು, ಕಾಲವಾಗಿ ಹೋಗಿ ಹ್ಯಾರಿಪಾಟರ್ ಕಥೆಗಳು ಎಲ್ಲೆಡೆ ಚಾಲ್ತಿಗೆ ಬರುತ್ತಿರುವ ದಿನಗಳಲ್ಲಿ ಪ್ರಚಂಡರಾವಣ ಎಂಟ್ರಿ ಕೊಟ್ಟಾಗ ಯಾರು  ಈ ರಾವಣ ಎಂಬ ಪ್ರಶ್ನೆ ಇವತ್ತಿನ ಮಕ್ಕಳಲ್ಲಿ ಎದುರಾಗುತ್ತಿದೆಯೇ? ಹಳ್ಳಿಗಳಲ್ಲಿ ಇವತ್ತಿನ ಕತೆ ಹೇಗಾಗಿದೆಯೊ ಗೊತ್ತಿಲ್ಲ; ನಗರದ ಜನದ ಬದುಕು ವಿಚಿತ್ರ ಮಾಪರ್ಾಡುಗಳಿಗೆ ಗುರಿಯಾಗುತ್ತಿದೆ. ನಮ್ಮತನವನ್ನು ಅವರು ಆಗಾಗ ಸ್ಯಾಂಪಲ್ ಟೇಸ್ಟ್ ಮಾಡುವಂತೆ ಮಾಡುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಲು ಹಲವರು ಶ್ರಮಿಸುತ್ತಿದ್ದಾರೆ; ಮತ್ತೆ ಕೆಲವರು ಸೋಗು ಹಾಕುವುದರಲ್ಲಿ ನಿಪುಣರಾಗುತ್ತಿದ್ದಾರೆ. ಪುರಾಣದ ಅಷ್ಟೂ ಪಾತ್ರಗಳು ನಮ್ಮಲ್ಲಿ ನಾನಾ ಮುಖಭಾವಗಳಲ್ಲಿ ಹಾದುಹೋಗುತ್ತಿರುವಾಗ, ಪುರಾಣ ಪ್ರಜ್ಞೆ ಇರುವ ಒಂದಷ್ಟು ಜನ ಅವೆಲ್ಲವನ್ನು ತಮ್ಮತಮ್ಮಲ್ಲೇ ಗುರುತಿಕೊಂಡು ಚಿತ್ರವಿಚಿತ್ರವಾದ ವ್ಯಾಖ್ಯಾನಗಳಿಗೆ ತೊಡಗಿರುವಾಗ ಪುರಾಣದ ಜಗತ್ತು ಇವತ್ತು ಎಷ್ಟು ಪ್ರಸ್ತುತ? ಅಥವಾ ಅದನ್ನು ಸಮಕಾಲೀನ ಪ್ರಜ್ಞೆಯೊಂದಿಗೆ ಯಾವ ರೀತಿ ಸಮೀಕರಿಸಿ ನೋಡಲು ಸಾಧ್ಯ?
ಇಷ್ಟೆಲ್ಲ ಸವಾಲುಗಳಿದ್ದರೂ ರಾವಣನನ್ನು ಪ್ರಚಂಡನನ್ನಾಗಿಸಲು ಹೋಗಿ ಸೋಲುಂಡದ್ದು ತುಂಬ ದಯನೀಯ ಅನಿಸುತ್ತದೆ. ಕತೆಯ ಮುಂದುವರಿಕೆಯ ಏಕತಾನತೆಯನ್ನು ಮುರಿಯಲು ಮತ್ತು ಹೊಸ ಗುಂಗನ್ನು ಸೃಷ್ಟಿಸಲು ಹಾಡುಗಳನ್ನು ಇವತ್ತು ಬಳಸಿಕೊಳ್ಳುವುದು ರೂಢಿ. ಈ ಪ್ರಕಾರಕ್ಕೆ ಒಗ್ಗಿಹೋಗಿರುವ ನಮ್ಮನ್ನು ಪೌರಾಣಿಕ ನಾಟಕಗಳ ಹಾಡಿನ ಮಟ್ಟುಗಳನ್ನು ಒಂದರಿಂದೊಂದು ಕೇಳಿಸಲು ಶುರುಮಾಡಿದರೆ ಪ್ರೇಕ್ಷಕ ಸಿಡಿಮಿಡಿಗೊಳ್ಳದೆ ಇರುತ್ತಾನೆಯೇ? ಎಲ್ಲರೂ ಹಾಡು ಹಾಡ್ತಾರಲ್ಲಪ್ಪ ಗುರೂ..! ಅಂತ ಉದ್ಗಾರ ತೆಗೆಯುವುದು ಬಿಟ್ಟರೆ ಬೇರೇನನ್ನೂ ಅವರಲ್ಲಿ ಹುಟ್ಟುಹಾಕಲು ಸಾಧ್ಯವಿಲ್ಲ. ನಾಟಕದ ಗ್ರಾಮರ್ರೇ ಬೇರೆ. ಸಿನಿಮಾದ ಗ್ರಾಮರ್ರೇ ಬೇರೆ. ಸೂತ್ರಗಳ ಸಾರವನ್ನು ಸರಿಯಾಗಿ ಅಥರ್ೈಸಿಕೊಳ್ಳದೆ ಹೋದರೆ ರಾವಣನಂಥ ಪ್ರಚಂಡನೂ ನಮ್ಮ ಕಾಲಮಾನದಲ್ಲಿ ಕಳಾಹೀನವಾಗಿ ಕಂಡುಬರುವ ಬಗೆ ಎಂಥದಿರುತ್ತದೆಂಬುದನ್ನು ಈ ಚಿತ್ರನೋಡಿದರೆ ತಿಳಿಯುತ್ತದೆ.
ಚಿತ್ರನೋಡಿ ಹೊರಬರುವಾಗ ಎಲ್ಲರ ಬಾಯ್ಗಳಲ್ಲೂ ವಜ್ರಮುನಿಯ ಹೆಸರು ಕೇಳಿಬರುತ್ತಿತ್ತು. ದೇವರಾಜ್ ರಂಗಭೂಮಿಯ ಹಿನ್ನೆಲೆಯಿಂದ ಬಂದರೂ ರಾವಣನ ಗತ್ತು, ಗೈರತ್ತು ಕಾಣಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರ ಮಾತಿನ ಒಟ್ಟು ಆಶಯವಾಗಿತ್ತು. ಇದು ಇನ್ನೊಂದು ಪಾತ್ರದಲ್ಲಿ ಪ್ರಚಂಡ ಯಶಸ್ಸು ಸಾಧಿಸಿದ ನಟನೊಬ್ಬ ಕಾಲವಾಗಿ ಹೋದಾಗ ಅದೇ ಛಾಪನ್ನು, ಅದೇ ಗುಂಗಿನಲ್ಲಿ ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿಯೊ ಕಾಣೆ. ರಂಗಪ್ರಯೋಗವೊಂದರ ಬಗ್ಗೆ ನಟರಾಜ್ಹೊನ್ನವಳ್ಳಿಯವರ ಜೊತೆ ನಾನು ಚಚರ್ಿಸುತ್ತಿದ್ದಾಗ `ಆ ನಟ ನಿಜಗುಣ ಶಿವಯೋಗಿಗಳ ಥರ ಮಾತಾಡಿದಾರೆ ಅಂತನ್ನಿಸಲ್ಲವಲ್ಲ ಎಂದು ಯಾರೋ ಒಬ್ಬರು ಹೇಳಿದಾಗ ನಿಜಗುಣ ಶಿವಯೋಗಿಯ ಮಾತುಗಳನ್ನು ನೀವೇನಾದ್ರೂ ರೆಕಾಡರ್ು ಮಾಡ್ಕೊಂಡು ಇಟ್ಕೊಂಡಿದ್ದೀರೇನ್ರಿ. ಅವರು ಅದೇ ಭಾವದಲ್ಲಿ, ಧಾಟಿಯಲ್ಲಿ ಮಾತಾಡುತ್ತಿದ್ದರು ಅಂತ ನಿಮಗೆ ಹೇಗೆ ಗೊತ್ತು? ಅಂತ ಪ್ರಶ್ನೆ ಎಸೆದು ನಕ್ಕಿದ್ದರು ನಟರಾಜ್ಹೊನ್ನವಳ್ಳಿ. 

 ವಜ್ರಮುನಿ ಮತ್ತು ದೇವರಾಜ್ ಸಂಬಂಧಿತ ಪಾತ್ರಗಳ ಬಗೆ ಪ್ರೇಕ್ಷಕರು ಹೀಗೇ ಲೋಕಾಭಿರಾಮವಾಗಿ ಹರಟುತ್ತಿದ್ದದ್ದನ್ನು ಕೇಳಿದಾಗ ಹೊನ್ನವಳ್ಳಿಯವರ ಮಾತು ನೆನಪಾಯಿತು. ಪುರಾಣದ ಲೋಕಕ್ಕಿಂತ ನಮ್ಮ ಲೋಕ ತುಂಬ ವಿಚಿತ್ರವಾದ್ದು ಅಂದುಕೊಂಡು ಸುಮ್ಮನಾದೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: