ಇದು ‘ಆಮಿರ್’ ಚಲನಚಿತ್ರದ ಕತೆ

ನನ್ನ ಭವಿಷ್ಯ ನಾನೇ ಬರೆಯುತ್ತೇನಾ ?

-ಹರೀಶ್ ಕೇರ 
 
ಡಾ.ಆಮಿರ್ ಆಲಿ, ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ಮುಗಿಸಿ ತಾಯ್ನಾಡಿಗೆ ಹಿಂತಿರುಗುತ್ತಿದ್ದಾನೆ. ಮುಂಬಯಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಕಾರಿಗಳಿಗೆ ಯಾಕೋ ಈತನನ್ನು ತಪಾಸಣೆ ಮಾಡಿದಷ್ಟೂ ಮುಗಿಯದು. “ಡಾಕ್ಟರ್, ಇಂಜಿನಿಯರ್‌ಗಳೇ ನಮ್ಮ ದೇಶದ ಮರ್‍ಯಾದೆ ಹೆಚ್ಚಿಸಿರೋದು” ಎಂಬುದು ಆತನ ವ್ಯಂಗ್ಯ. “ನನ್ನ ಹೆಸರು ಅಮರ್ ಎಂದಿದ್ದರೆ ನೀವು ಹೀಗೆಲ್ಲ ಮಾಡುತ್ತಿದ್ದಿರಾ” ಎಂಬುದು ರೋಸಿದ ಆಮಿರ್ ಆಲಿಯ ಪ್ರಶ್ನೆ.

ಏರ್‌ಪೋರ್ಟ್‌ನಿಂದ ಹೊರಗೆ ಬಂದರೆ ಆತನನ್ನು ರಿಸೀವ್ ಮಾಡಬೇಕಾದ ಮನೆಯವರಿಲ್ಲ. ಫೋನ್ ಮಾಡಿದರೆ ಮನೆಯಲ್ಲೂ ಯಾರೂ ಇಲ್ಲ. ಅಪರಿಚಿತನೊಬ್ಬ ಆತನೆಡೆಗೊಂದು ಮೊಬೈಲ್ ಎಸೆಯುತ್ತಾನೆ. ಅದಕ್ಕೆ ಬಂದ ಕರೆ, ತಾನು ಹೇಳಿದ್ದನ್ನು ಮಾಡುವಂತೆ ಆಮಿರ್‌ಗೆ ಆದೇಶಿಸುತ್ತದೆ. ಆಮಿರ್‌ನ ಎಲ್ಲ ವಿವರಗಳೂ ಆ ದನಿಗೆ ಗೊತ್ತು. ಆಮಿರ್ ಮನೆಯವರು ಆ ಧ್ವನಿಯ ಒಡೆಯನ ಹಿಡಿತದಲ್ಲಿದ್ದಾರೆ.

ಅಲ್ಲಿಂದ ಬಳಿಕ ಫೋನ್ ಕರೆಯ ನಿರ್ದೇಶನದಂತೆ ಆಮಿರ್ ನಡೆಯಬೇಕಾಗುತ್ತದೆ. ಆತನನ್ನು ಮುಂಬಯಿಯ ಬಡ ಮುಸ್ಲಿಂ ಜನತೆ ವಾಸಿಸುವ ಪ್ರದೇಶಗಳಲ್ಲಿ ಸುತ್ತಾಡಿಸುತ್ತದೆ ಆ ದನಿ. “ನೋಡಿದೆಯಾ ನಿನ್ನ ಸಮುದಾಯದವರು ಎಂಥ ಹೀನ ಬಾಳು ಬದುಕುತ್ತಿದ್ದಾರೆ ಎಂಬುದನ್ನು ?” ಎಂದು ಆ ಧ್ವನಿ ಇರಿಯುತ್ತದೆ. “ನಾನೂ ಬಡ ಕುಟುಂಬದವನೇ. ಆದರೆ ಸಾಧನೆಯ ಮೂಲಕ ಮೇಲೆ ಬಂದೆ. ಇವರೆಲ್ಲ ಹೀಗೇ ಉಳಿಯಬೇಕೆಂದು ಯಾರು ನಿರ್ಬಂಸಿದ್ದರು ?” ಎಂದು ಆಮಿರ್ ಮರು ಪ್ರಶ್ನಿಸುತ್ತಾನಾದರೂ ಅವನಿಗೆ ಉತ್ತರ ದೊರೆಯುವುದಿಲ್ಲ.

ಕೊನೆಗೆ ಆತನಿಗೊಂದು ಸೂಟ್‌ಕೇಸ್ ನೀಡಿ ಬಸ್‌ನಲ್ಲಿ ಅದನ್ನು ಕೊಂಡೊಯ್ಯುವಂತೆ ಹೇಳಲಾಗುತ್ತದೆ. ಅದರಲ್ಲಿ ಬಾಂಬ್ ಇದೆ. ಅದನ್ನು ಜನ ತುಂಬಿದ ಬಸ್‌ನಲ್ಲಿ ಇಟ್ಟು ಆತ ಇಳಿಯಬೇಕು. ಅದು ಸೋಟಿಸಲು ಎರಡೇ ನಿಮಿಷಗಳಿವೆ. ಈ ಕೆಲಸ ಮಾಡದಿದ್ದರೆ ಆಮಿರ್‌ನ ಮನೆಯವರು ಉಳಿಯುವುದು ಅನುಮಾನ.

*
ನಿಮಗೀಗಾಗಲೇ ಗೊತ್ತಾಗಿರಬಹುದು. ಇದು ಹಿಂದಿಯ ‘ಆಮಿರ್’ ಚಲನಚಿತ್ರದ ಕತೆ. ಕತೆಯ ಅಂತಸ್ಸತ್ವ ಇರುವುದೇ ಕೊನೆಯ ಎರಡು ನಿಮಿಷಗಳಲ್ಲಿ. ಅಲ್ಲಿಯವರೆಗೂ ಈ ಚಿತ್ರ ನಿಮ್ಮನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಆಮಿರ್ ಹಾಗೂ ಭೂಗತ ನಾಯಕ ಎರಡೇ ಇದರ ಪ್ರಮುಖ ಪಾತ್ರಗಳು. ಉಳಿದವೆಲ್ಲಾ ಕ್ಷಣಮಾತ್ರದಲ್ಲಿ ಹಾದು ಹೋಗುವ ಪಾತ್ರಗಳಾದುದರಿಂದ ಚಿತ್ರಕ್ಕೊಂದು ಶೀಘ್ರಗತಿ ಸಿಕ್ಕಿದೆ. ಸೂಕ್ಷ್ಮ ಸಂವೇದಿ ಕತೆ, ಬಿಗಿಯಾದ ನಿರೂಪಣೆ, ಅಭಿನಯ- ಇವೆಲ್ಲವುಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ನಾನು ಈ ಫಿಲಂ ನೋಡಿದ್ದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸೋಟ ನಡೆದ ಆಸುಪಾಸಿನಲ್ಲಿ. ಆಮೇಲೆ ಅಹಮದಾಬಾದ್‌ನಲ್ಲಿ ಸೋಟ, ಸಾವುನೋವು, ಸೂರತ್‌ನಲ್ಲಿ ಆತಂಕದ ಗುಮ್ಮ. ಇವೆಲ್ಲ ‘ಕೆಂಪಾಗಿ’ರುವಾಗಲೇ ನಾನು ಇದನ್ನು ನೋಡಿದ್ದು. ಈ ಫಿಲಂ ಹಾಗೂ ಅದರ ಸಂದರ್ಭಗಳು ಒಂದು ವಿಲಕ್ಷಣವಾದ ತಲ್ಲಣ ಉಂಟುಮಾಡಿದವು. ಚಿತ್ರದ ಶೀರ್ಷಿಕೆಯಡಿ ಇರುವ “ಮನುಷ್ಯ ತನ್ನ ಭವಿಷ್ಯ ತಾನೇ ಬರೆದುಕೊಳ್ಳುತ್ತಾನೆ ಎಂದು ಹೇಳಿದವರ್‍ಯಾರು ?” ಎಂಬ ಉಪಶೀರ್ಷಿಕೆಯ ಅನೇಕ ಅರ್ಥಗಳು ಹೊಳೆಯತೊಡಗಿದವು.

ಈ ಚಲನಚಿತ್ರದ ಆಮಿರ್‌ನಂತೆ ನಾವೂ ಅಸಂಗತ ಪರಿಸ್ಥಿತಿಯಲ್ಲಿ ಇದ್ದೇವೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಾಂಬುಗಳು ಬಂದು ನಮ್ಮ ನಿಮ್ಮ ಮನೆಯ ಪಕ್ಕದಲ್ಲೇ ಸೋಟಿಸುತ್ತವೆ. ಅದರಲ್ಲಿ ಸಾಯುವ ಅಥವಾ ಗಾಯಗೊಳ್ಳುವವರ ಪಟ್ಟಿಯಲ್ಲಿ ನಾನೂ ನೀವೂ ಸೇರಿಸಿದಂತೆ ಯಾರೂ ಇರಬಹುದು. ಕೊಲ್ಲವವರಿಗೆ ತಾವು ಯಾರನ್ನು ಯಾಕೆ ಕೊಲ್ಲುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಸಾಯುವವರಿಗೂ ತಾವು ಯಾರಿಂದ ಯಾಕೆ ಸಾಯಿಸಲ್ಪಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಇದಕ್ಕಿಂತ ಅಸಂಗತ ವಿವರ ಇನ್ನೊಂದಿರಲು ಸಾಧ್ಯವೆ ?

ಇಂಥ ಅಸಂಗತ ಪರಿಸ್ಥಿಯ ಬಗ್ಗೆ ಕನ್ನಡದಲ್ಲಿ ಸೊಗಸಾಗಿ ಬರೆದವರು ಪೂರ್ಣಚಂದ್ರ ತೇಜಸ್ವಿ. ಅವರ ‘ಜುಗಾರಿ ಕ್ರಾಸ್’ ನೋಡಿ. ಒಂದಕ್ಕೊಂದು ಸಂಬಂಧವಿಲ್ಲದ ಘಟನಾವಳಿಗಳು ಹಾಗೂ ಪಾತ್ರಗಳು ಕಾದಂಬರಿಯ ಹಂದರವನ್ನು ಕಟ್ಟುತ್ತವೆ. ‘ಚಿದಂಬರ ರಹಸ್ಯ’ದಲ್ಲೂ ಇದೇ ಆಗುವುದು. ಕಾದಂಬರಿಯ ಕೊನೆಗೆ ಬೆಟ್ಟ ಹತ್ತಿ ಪಾರಾಗಿ ಏದುಸಿರು ಬಿಡುವ ರಫೀಕ್ ಮತ್ತು ಜಯಂತಿಯರಿಗೆ ತಮ್ಮ ಪ್ರೇಮಕ್ಕೂ ತಮ್ಮೂರಿನ ಬೆಂಕಿಗೂ ಹಿಂದೆ ಘಟನಾ ಪರಂಪರೆಯೊಂದು ಇದೆ ಎಂಬುದು ಗೊತ್ತೇ ಇಲ್ಲ. ‘ನಿಗೂಢ ಮನುಷ್ಯರು’ ಕತೆಯ ಜಗನ್ನಾಥ, ರಂಗಣ್ಣ, ಗೋಪಾಲಯ್ಯ ಎಲ್ಲರೂ ಇಂಥ ನಿಗೂಢ ಅಸಂಗತ ಪ್ರವಾಹವೊಂದರ ಸುಳಿಯಲ್ಲಿ ಸಿಲುಕಿದವರೇ.

ಇದನ್ನು ‘ಅಸಂಗತ’ ಎನ್ನುವುದಕ್ಕಿಂತ ಬೇರೊಂದು ಬಗೆಯಲ್ಲೂ ವ್ಯಾಖ್ಯಾನಿಸಬಹುದು. ಯಾವುದೋ ರೀತಿಯಲ್ಲಿ ಒಂದಕ್ಕೊಂದು ಹೆಣೆದುಕೊಂಡ, ಆದರೆ ಅರ್ಥೈಸಲು ಜಟಿಲವಾದ ಘಟನಾವಿನ್ಯಾಸದಲ್ಲಿ ಆಧುನಿಕ ಮನುಷ್ಯನ ಬದುಕು ಹೆಣೆದುಕೊಂಡಿದೆ. ಇದನ್ನು ಕನ್ನಡದಲ್ಲಿ ಎಲ್ಲರಿಗಿಂತ ಮೊದಲು ಗುರುತಿಸಿ, ಬರೆದವರು ತೇಜಸ್ವಿ.

ವಾಸ್ತವ ಬದುಕಿನ ಭಯಾನಕತೆಯನ್ನು ಸ್ಪಷ್ಟಪಡಿಸಿಕೊಳ್ಳಲು ನಾವು ಸಿನೆಮಾ, ಸಾಹಿತ್ಯದ ಮೊರೆ ಹೋಗಲೇಬೇಕು !

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: