ಸ್ಲಂ ಡಾಗ್ ಫಿಲಂ ಬಗ್ಗೆ ಸಂವಾದವಿತ್ತು

– ವಿಕಾಸ್ ಹೆಗಡೆ

‘ವಿಕಾಸವಾದ’ದಿಂದ

ಅವಧಿ ಬ್ಲಾಗ್ ನಿಂದ ಪರಿಚಿತವಾದ ಮೇ ಫ್ಲವರ್ ಮೀಡಿಯಾ ಹೌಸ್ ಗೆ ಹೋಗುವುದೆಂದರೆ ಒಂಥರಾ ಖುಷಿ. ಪಕ್ಕಾ ಪ್ರೊಫೆಷನಲ್ ವಾತಾವರಣದ ಜೊತೆ ಒಂದು ಆಪ್ತ ಸೊಗಡಿನ ವಾತಾವರಣ ಅಲ್ಲಿರುವುದೇ ಕಾರಣವಿರಬಹುದು. ಅದು ಒಂದು ಕಛೇರಿ ಎಂದು ತಿಳಿದಿದ್ದರೂ ಕೂಡ ಅಲ್ಲಿ ಹೋದೊಡನೆ ದೊಡ್ಡಮ್ಮನ ಮನೆಗೋ, ಚಿಕ್ಕಪ್ಪನ ಮನೆಗೋ ಹೋದ ಅನುಭವವಾಗಿಬಿಡುತ್ತದೆ. ಹೇಗೆಂದರೆ ದೊಡ್ಡಮ್ಮನ ಮನೆಗೆ ಹೋದಾಗ ಸೀದಾ ಅಡುಗೇ ಮನೆಗೇ ಹೋಗಿ ಹರಟುತ್ತೇವಲ್ಲ ಹಾಗೆ

ಅಲ್ಲಿ ಮೋಹನ್  ಜೊತೆ ಹರಟಬಹುದು, ಅಡಿಗೆ ಮನೆಯಲ್ಲಿ ಫ್ರಿಡ್ಜು ತೆಗೆದು, ಡಬ್ಬಿ ಹುಡುಕಿ ತಿಂಡಿ ಕುರುಕಿಸುವಂತೆ ಅಲ್ಲಿ ವಿಧ ವಿಧದ ಕನ್ನಡ-ಇಂಗ್ಲೀಷ್ ಪುಸ್ತಕಗಳನ್ನು, ಪತ್ರಿಕೆಗಳನ್ನು ಹಿಡಿದು ಓದಬಹುದು, ಗೆಳೆಯರ ಜೊತೆ ಸೇರಿ “ಎಲ್ಲಿ ಮಗಾ, ಆ ಹುಡುಗಿ ಕಾಣ್ತನೇ ಇಲ್ವಲ್ಲಾ” ಎಂದು ಮಾತನಾಡುತ್ತಲೇ ಪುಸ್ತಕ ಕೈಯಲ್ಲಿ ಹಿಡಿದುಕೊಂಡೇ ಫೊಟೋಗೆ ಫೋಸು ಕೊಡಬಹುದು ! ಪ್ರಸ್ತುತ ಮಾರುಕಟ್ಟೆಯ, ಪ್ರಸ್ತುತ ಅಭಿರುಚಿಗಳ ಬಗ್ಗೆ ತಿಳಿದುಕೊಂಡು ಕೆಲಸ ಮಾಡುತ್ತಿರುವ ಕೆಲವೇ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಮೇ ಫ್ಲವರ್ ಕೂಡ ಒಂದು.

****

ಮೊನ್ನೆ ಶನಿವಾರ ಸಂಜೆ ಸ್ಲಂ ಡಾಗ್ ಫಿಲಂ ಬಗ್ಗೆ Mayflowerನಲ್ಲಿ ಸಂವಾದವಿತ್ತು. ಈ ಕೆಲದಿನಗಳಿಂದ ಈ ಸ್ಲಂಡಾಗ್ ಬಗ್ಗೆ ಕೇಳಿ ಓದೀ ಬೇಜಾರು ಬಂದು ಹೋಗಿದೆ ನಿಜ. ಆದರೆ ಅಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತಿರುವವರು ’ಪರಮೇಶ್ವರ್’ಎಂದು ತಿಳಿದಾಕ್ಷಣ ಆಸಕ್ತಿ ತಾನಾಗಿಯೇ ಮೂಡಿತ್ತು! ಈ ತಿಂಗಳ ಮೊದಲವಾರದಲ್ಲಿ ಕುಪ್ಪಳಿಯಲ್ಲಿ ’ಸಾಂಗತ್ಯ’ ತಂಡದವರು ನಡೆಸಿದ ಚಿತ್ರೋತ್ಸವದಲ್ಲಿ ಪರಮೇಶ್ವರರ ಮಾತುಗಳನ್ನು ಕೇಳಿದ್ದೆ. ಅವರ ಸಿನೆಮಾ ಜ್ಞಾನ, ಸಿನೆಮಾಗಳನ್ನು ಅವರು ಸಮತೋಲನವಾಗಿ , ಬರೀ ತೆರೆ ಮೇಲಿನದ್ದನ್ನಲ್ಲದೇ ಅದರ ಹಿನ್ನೆಲೆ ಸಮೇತ ವಿಶ್ಲೇಷಿಸುವ ರೀತಿ, ಪ್ರಶಸ್ತಿ, ಸನ್ಮಾನಗಳ ಹಿಂದಿನ ಉದ್ದೇಶ, ತಂತ್ರ, ಕುತಂತ್ರಗಳ ಬಗ್ಗೆ ಅವರ ಧೋರಣೆ ಬಹಳ ಇಷ್ಟವಾಗಿತ್ತು. ಅವರು ಈ ಸ್ಲಂ ಡಾಗ್ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು.

ಮೂರು ವಾರಗಳ ಹಿಂದೆ ಇದೇ ಸ್ಲಂಡಾಗ್ ಅನ್ನು ನೋಡಿದ್ದೆ. ಬಹಳಷ್ಟು ಅಸ್ವಾಭಾವಿಕ, ಅವಾಸ್ತವಿಕ , ಕಾಕತಾಳೀಯ ಸನ್ನಿವೇಶಗಳನ್ನು ಹೆಣೆದು ಮಾಡಿದ ಈ ಸಿನೆಮಾ ಒಂದು ವಿಭಿನ್ನ ಕಥೆಯುಳ್ಳ ಸಿನೆಮಾ ಆಗಿತ್ತು. ಅದು ಸುಮ್ಮನೆ ಒಂದು ಒಳ್ಳೆಯ ಸಿನೆಮಾದಂತೆ ಅನ್ನಿಸಿತ್ತು. ಅದ್ಭುತವೆನಿಸುವಂತಹ ವಿಶೇಷಗಳೇನೂ ಕಾಣಿಸಿರಲಿಲ್ಲ. ಆದರೆ ಅದಕ್ಕೆ ಗೋಲ್ಡನ್ ಗ್ಲೋಬ್ ಘೋಷಣೆ, ಆಸ್ಕರ್ ಗೆ ನಾಮನಿರ್ದೇಶನ ಆಯಿತು . ಅದಾದ ಮೇಲೆ ಮಾಧ್ಯಮಗಳು ಅದನ್ನು ಹೊತ್ತುಕೊಂಡು ಕುಣಿದ ರೀತಿ, ಕೆಲವರು ಅದನ್ನು ಹೊಗಳಿದ/ಹೊಗಳುತ್ತಿರುವ ರೀತಿ, ವಿಪರೀತ ಚರ್ಚೆ, ಅಲ್ಲಿ ತೋರಿಸಿದ ಸ್ಲಂ ಮುಂತಾದ ದೃಶ್ಯಗಳಿಗೆ ವಿರೋಧ ವ್ಯಕ್ತವಾಗಿದ್ದನ್ನು ನೋಡಿ ನಾನು ಪೂರ್ತಿ ಸಿನೆಮಾ ಸರಿಯಾಗಿ ನೋಡಿದ್ದೆನಾ ಇಲ್ಲವಾ ಅಂತ ಅನುಮಾನವಾಗಿಬಿಟ್ಟಿತ್ತು.

ಯಾವುದೇ ಸಿನೆಮಾವನ್ನು ಎರಡನೇ ಬಾರಿ ನೋಡಲೇಬೇಕೆಂದು ನೋಡದ ನಾನು ಯಾವುದಕ್ಕೂ ಇರಲಿ ಎಂದು ಅವತ್ತು ಸ್ಲಂಡಾಗನ್ನು ಕೂಲಂಕುಷವಾಗಿ ಮತ್ತೊಂದು ಬಾರಿ ನೋಡಿಕೊಂಡು ಮೇಫ್ಲವರ್ ಗೆ ಹೋದೆ. ಪರಮೇಶ್ವರ್ ಅವರು ಎಂದಿನಂತೆ ತಮ್ಮ ಸಮತೋಲನ ಶೈಲಿಯಲ್ಲಿ ಸಿನೆಮಾವನ್ನು ಸಿನೆಮಾದ ರೀತಿಯಲ್ಲೇ ವಿಶ್ಲೇಷಿಸಿದರು, ಅವರ ವಿಶ್ಲೇಷಣೆಯಲ್ಲಿ ಪ್ರಶಸ್ತಿಯ ತೂಕವಾಗಲೀ, ಭಾರತದ ಕತ್ತಲ ಲೋಕದ ದರ್ಶನದ ವಿರೋಧವಾಗಲೀ ಕಾಣಲಿಲ್ಲ.

ನನಗನಿಸುವುದೇನೆಂದರೆ, ಮೊದಲಿಂದಲೂ ಕೂಡ ಭಾರತದ ಬಡತನ, ಸ್ಲಂ ಜೀವನ ಮುಂತಾದ ಎಲ್ಲವನ್ನೂ ಈ ಚಿತ್ರಕ್ಕಿಂತಲೂ ಪರಿಣಾಮಕಾರಿಯಾಗಿ ತೋರಿಸುವ ಹಲವು ಚಿತ್ರಗಳು ಬಂದು ಹೋಗಿವೆ. ಆದರೆ ಅದಕ್ಯಾವ ವಿರೋಧವಾಗಲೀ ವ್ಯಕ್ತವಾಗಿರಲಿಲ್ಲ. ಕಾರಣ ಅವು ಇದ್ದದ್ದು ಭಾರತೀಯ ಭಾಷೆಗಳಲ್ಲಿ ಮತ್ತು ಅವಕ್ಕೆ ಬೇರೆ ದೇಶಗಳು ಕೊಡುವ ಪ್ರಶಸ್ತಿಗಳ್ಯಾವುವೂ ಬಂದಿರಲಿಲ್ಲ. ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ನಂತಹ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಬಂದಿವೆ ಎಂದಾಕ್ಷಣ ನಮಗೆ ಆ ಸಿನೆಮಾದಲ್ಲಿ ಇಲ್ಲದ ಅದ್ಭುತಗಳು ಕೂಡ ಕಾಣಲು ಶುರುವಾಗಿಬಿಡುತ್ತವೆ. ಅದರಲ್ಲಿರುವ ಪಾತ್ರಗಳಿಗೆ ಅದ್ಭುತ ಗುಣಗಳನ್ನು ನಾವು ನಾವಾಗೇ ಆರೋಪಿಸುತ್ತಾ ಹೋಗಿಬಿಡುತ್ತೇವೆ. ನಮಗೆ ಒಂದೊಂದು ಪಾತ್ರಗಳೂ, ಸನ್ನಿವೇಶಗಳೂ ಅಪ್ಯಾಯಮಾನವಾಗಿ ಕಾಣಲು ಶುರುವಾಗಿಬಿಡುತ್ತವೆ. ಅದಕ್ಕೆ ಪ್ರಶಸ್ತಿ ಎಂಬ ಪೂರ್ವಗ್ರಹವು ಕಾರಣವಾಗಿರುತ್ತದೆ, ಜೊತೆಗೆ ಆ ಪ್ರಶಸ್ತಿಗಳು ಸರ್ವಶ್ರೇಷ್ಠ ಎಂಬ ತಪ್ಪು ತಿಳುವಳಿಕೆಯೂ ಕಾರಣವಾಗಿರುತ್ತದೆ. ಈ ಸ್ಲಂಡಾಗ್ ವಿಷಯದಲ್ಲೂ ಹಾಗೇ ಆಗಿದೆ. ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ತಿಕ್ಕಲುತನದ ಪ್ರತಿನಿಧಿ ಅಂತ ಒಬ್ಬರಿಗನಿಸಿದರೆ, ಭಾರತದ ಬದುಕಿನ ನಿಜವಾದ ಚಿತ್ರಣವಿದು ಅಂತ ಇನ್ನೊಬ್ಬರಿಗನಿಸಿದೆ. ಪಾಪ , ಆ ನಿರ್ದೇಶಕ ಕೂಡ ಹಾಗೆಲ್ಲ ಅಂದುಕೊಂಡು ಸಿನೆಮಾ ಮಾಡಿರುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ನಾವು ಮಾತ್ರ ಒಂದೊಂದಕ್ಕೂ ಒಂದೊಂದು ಅರ್ಥ ಕೊಡುತ್ತಾ ಹೋಗುತ್ತಿದ್ದೇವೆ. ಒಬ್ಬರು ಇದರಲ್ಲಿ ಹಳದಿ ಬಣ್ಣದ ಪರಿಣಾಮಕಾರಿ ಅದ್ಭುತ ಬಳಕೆಯಿದೆ, ಇದು ಹಳದಿ ಚಿತ್ರ ಎಂದು ವಿಶ್ಲೇಷಿಸಿದ್ದನ್ನು ನೋಡಿ ನಾನೂ, ಪುಟ್ಟಿ ಇಬ್ಬರೂ ಹಳದಿ ಬಣ್ಣದಷ್ಟೆ ನೀಲಿ ಬಣ್ಣವೂ ಇದೆಯಲ್ಲಾ, ಇದು ’ನೀಲಿ ಚಿತ್ರ’ವೂ ಹೌದು ಎಂದು ನಗಾಡಿಕೊಂಡಿದ್ದೆವು.(just kiddingu, ಅವರು ಮನ್ನಿಸಬೇಕು). ಆಸ್ಕರ್ ಬಂದರೆ ಹೆಮ್ಮೆ , ಬರದಿದ್ದರೆ ಟೊಮ್ಮೆ ಎಂದೆಲ್ಲಾ ಕೂಗಾಡುವ ಮೊದಲು ಅದೊಂದು Warner Bros. ನಿರ್ಮಾಣದ, ನಿರ್ದೇಶನದ ಚಿತ್ರ ಎಂದು ಅರಿತುಕೊಂಡರೆ ಒಳ್ಳೆಯದು. ಪ್ರಶಸ್ತಿ ಬಂದರೂ ಅದರಲ್ಲಿ ಭಾರತ ಹೆಮ್ಮ ಪಡುವುದಕ್ಕೆ ಅರ್ಥವೇ ಇಲ್ಲ! ವಿಧಾನ ಸೌಧ ಕಟ್ಟಿದ್ದು ನಾವೇ ಎಂದು ಕೇಂದ್ರ ಕಾರಾಗೃಹದ ಖೈದಿಗಳ ಸಂಭ್ರಮ ಪಟ್ಟಂತೆ ಅಷ್ಟೆ!

****
ಅದ್ಯಾಕೋ ಗೊತ್ತಿಲ್ಲ, ಭಾರತೀಯರಿಗೆ ಮೊದಲಿಂದಲೂ ’ಫಾರಿನ್ ’ಗೆ ಹೋಗುವುದು ಅಂದರೆ ಅದು ಸಾಧನೆ, ಫಾರಿನ್ ಎಂದರೆ ದೇವಲೋಕ, ಅಲ್ಲಿಂದ ಗುರುತಿಸಲ್ಪಡುವುದು ಮೋಕ್ಷ ಪಡೆದಂತೆ ಎಂಬ ಭಾವನೆ. ಅದರಂತೆಯೇ ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ, ಬೂಕರ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಳ್ಳದ ನಾವು ಅದನ್ನು ಜೀವಮಾನದ ಸಾಧನೆ ಎಂಬಂತೆ ಬಿಂಬಿಸಿ, ಆ ಕೃತಿಗಳನ್ನು ಅನಗತ್ಯವಾಗಿ ಮೆರೆಸಿ, ಅದನ್ನು ಪಡೆದವರನ್ನು ಭಾರತದಲ್ಲಿ ವಿಜೃಂಭಿಸಿ ಮಹತ್ವ ಕೊಟ್ಟುಬಿಡುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಪಶ್ಚಿಮವೆಂಬ ಶಂಖದಿಂದ ಬಂದದ್ದೇ ತೀರ್ಥವೆಂದು ಕುಡಿದು ಕೈ ತಲೆಗೊರಸಿಕೊಂಡು ಧನ್ಯರಾಗಿಬಿಡುತ್ತೇವೆ.! 

***************

ಸುಮ್ನೆ ಕ್ರಿಟಿಸಿಸಂ ಬರಿಯಕ್ಕೆ ಹೋಗ್ಬೇಡ ಅಂತ ಹತ್ತಿರದವರು ಹೇಳಿದ್ರು, ಆದರೂ ಬರೆದುಬಿಟ್ಟೆ.. ಇದು ಜನವರಿ ಕೋಟಾ!

img_8397img_8366img_8364img_8362img_8360img_8380img_8381

Advertisements

4 responses to this post.

 1. ಮ್ಯಾ.ಕಾ.
  ವಿಕಾಸರವರ ವರದಿಗೆ ’ಒಗ್ಗರಣೆ’ಯ ಸ್ಟೇಟಸ್ಸು ಕೊಟ್ಟಿರುವದು ಸರಿಯಾಗಿದೆ!!

  ಉತ್ತರ

 2. ಮ್ಯಾಜಿಕ್ ಕಾರ್ಪೆಟ್:
  ವಿಕಾಸ್ ಹೆಗಡೆಯವರ ಈ ಬರಹದಲ್ಲಿ ’ಸ್ಲಂಡಾಗ್..” ಚಿತ್ರದ ಬಗ್ಗೆ ಅವರ ವಿಮರ್ಶೆಯಾಗಲೀ ( ’ವಿಭಿನ್ನ ಕಥೆಯುಳ್ಳ ಸಿನೆಮಾ ಆಗಿತ್ತು. ಅದು ಸುಮ್ಮನೆ ಒಂದು ಒಳ್ಳೆಯ ಸಿನೆಮಾದಂತೆ ಅನ್ನಿಸಿತ್ತು’ ಅನ್ನುವುದನ್ನು ಬಿಟ್ಟರೆ) ಪರಮೇಶ್ವರ್ ಅವರ ವಿಮರ್ಶೆಯ ವಿವರವಾಗಲೀ ಇಲ್ಲ.

  ..ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ, ಬೂಕರ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಳ್ಳದ ನಾವು…

  ಇವು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು, ಈ ಪ್ರಶಸ್ತಿಗಳನ್ನು ತೀರ್ಮಾನಿಸುವವರು ಆಯಾ ಕ್ಷೇತ್ರದಲ್ಲಿ ಶ್ಲಾಘನೀಯ ಪರಿಶ್ರಮ ಇರುವ, ಚಿತ್ರಗಳಲ್ಲಿರುವ ಕಲಾತ್ಮಕ ಅಂಶಗಳನ್ನು ಗುರುತಿಸಲು ಸಾಧ್ಯವಿರುವ ಜನ. ಇವುಗಳ ವಿಜೇತರಿಗೆ ಕೇವಲ ಅವರ ದೇಶದಲ್ಲಲ್ಲದೆ ಬೇರೆ ಅನೇಕ ದೇಶಗಳಲ್ಲೂ recognition ಸಿಗುತ್ತದೆ, ಪ್ರಶಸ್ತಿ ಸಿಗದೇ ಇರುವ ಚಿತ್ರ/ಕೃತಿಗಳು ತಲುಪುವುದಕ್ಕಿಂತ ಹೆಚ್ಚು ಜನರನ್ನು ತಲುಪುತ್ತದೆ. ಇದರಲ್ಲಿ ತಪ್ಪೀನಿದೆ? ಪ್ರಶಸ್ತಿ ಪಡೆಯದ ಅನೇಕ ಚಿತ್ರಗಳು, ಪುಸ್ತಕಗಳು ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿವೆ. ಪ್ರಶಸ್ತಿ ಬಂದ ಮಾತ್ರಕ್ಕೆ ಜನ ಚಿತ್ರಗಳನ್ನು/ಪುಸ್ತಕಗಳನ್ನು ಇಷ್ಟಪಡುತ್ತಾರೆ ಎಂಬ ವಿಕಾಸರ ಅಸಮಾಧಾನ ತುಂಬಾ ಬಾಲಿಶವಾಗಿದೆ.

  ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ………ಹಳದಿ ಬಣ್ಣದ ಪರಿಣಾಮಕಾರಿ ಅದ್ಭುತ ಬಳಕೆಯಿದೆ….

  ಒಂದು ಒಳ್ಳೆಯ ಚಿತ್ರ ಅನೇಕರಿಗೆ ಅನೇಕ ಬಗೆಯಲ್ಲಿ ಮನತಟ್ಟುತ್ತದೆ. ಜನರ ಮನಸ್ಸಿಗೆ ತಟ್ಟುವುದು ಒಳ್ಳೆಯ ಚಿತ್ರದ ಮುಖ್ಯ ಅಂಶಗಳಲ್ಲೊಂದು. ನಿರ್ದೇಶಕನ ಮನಸ್ಸಿನಲ್ಲಿದ್ದ ಅಂಶಗಳನ್ನು ಮಾತ್ರ ವೀಕ್ಷಕರು ಗುರುತಿಸಬೇಕು, ಅದರಿಂದಾಚೆ ಯೋಚಿಸಬಾರದು ಎಂಬ ಅಭಿಪ್ರಾಯ (…ಆ ನಿರ್ದೇಶಕ ಕೂಡ ಹಾಗೆಲ್ಲ ಅಂದುಕೊಂಡು ಸಿನೆಮಾ ಮಾಡಿರುತ್ತಾನೋ ಇಲ್ಲವೋ ಗೊತ್ತಿಲ್ಲ…) ವಿಕಾಸರಿಗಿರುವಂತಿದೆ.

  .ಪ್ರಶಸ್ತಿ ಬಂದರೂ ಅದರಲ್ಲಿ ಭಾರತ ಹೆಮ್ಮ ಪಡುವುದಕ್ಕೆ ಅರ್ಥವೇ ಇಲ್ಲ…

  ಎ.ಆರ್.ರೆಹಮಾನ್ ಅವರ ಸಂಗೀತ ‘original song’ ವಿಭಾಗದಲ್ಲಿ ಅಕಾಡಮಿ ಅವಾರ್ಡ್ ಗೆ ನೇಮಕವಾಗಿರುವುದನ್ನು ವಿಕಾಸ್ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ವಿಕಾಸರಿಗೆ ಹೇಗನ್ನಿಸುತ್ತದೆಯೋ ಗೊತ್ತಿಲ್ಲ, ಬೇರೆ ಭಾರತೀಯರಿಗಂತೂ ಇದು ಅತೀ ಹೆಮ್ಮೆಯ ವಿಷಯ. ರೆಹಮಾನರಿಗೆ ಪ್ರಶಸ್ತಿ ಬಂದರೆ ಭಾರತೀಯರೆಲ್ಲರಿಗೂ ಖುಷಿಯಾಗುತ್ತದೆ. ಈ ಚಿತ್ರದ ಆಧಾರವಾಗಿರುವ ಪುಸ್ತಕದ ಬರಹಗಾರ ಕೂಡ ಒಬ್ಬ ಭಾರತೀಯ (ವಿಕಾಸ್ ಸ್ವರೂಪರ Q & A) . ಈ ಚಿತ್ರದಲ್ಲಿರುವ Freida Pinto ಹಾಗೂ ಇತರ ಅನೇಕರು ಕೂಡ ಭಾರತೀಯರೇ. ಇದೂ ವಿಕಾಸರ ಗಮನಕ್ಕೆ ಬಂದಂತಿಲ್ಲ.

  ಒಟ್ಟಿನಲ್ಲಿ, ಕಿರಿಯರ ಆಟಗಳನ್ನು ನೋಡಿ ಸಹಿಸದೆ ಲೊಟಗುಟ್ಟುವ ಮುದುಕರ ಅಸಂತೋಷದ ಧ್ವನಿ ಬರಹದಲ್ಲಿ ಕೇಳುತ್ತಿದೆ.

  ಬರಹವನ್ನು ಆರೋಗ್ಯಕರ ಚರ್ಚೆಗೆ ದಾರಿ ಮಾಡಿಕೊಡಲು ಒಂದಿಷ್ಟು ಎಡಿಟ್ ಮಾಡಲಾಗಿದೆ- ಸಂ

  ಉತ್ತರ

 3. ಒಗ್ಗರಣೆ ಎಂಬ ಶಬ್ದ ಒಗ್ಗಿಸುವಿಗೆ, ಹೊಂದಿಸುವಕೆ, seasoning, ಬಲಿತಂತೆ ಮಾಡುವ, ಬೆಂದ ರುಚಿ ಕೊಡುವ ಎಂದು ಅರ್ಥದಿಂದ ಉತ್ಪತ್ತಿಯಾಗಿದೆ.

  Oscar ಪ್ರಶಸ್ತಿಗೆ A beautiful mind, Forrest Gump, The others ಮುಂತಾದವು ಎಂತಹ ಅದ್ಭುತ ಸಿನಿಮಗಳು. ನಾನಂತೂ ಅಂತ ಸೂಪರ್‍ ಸಿನಿಮ ನೋಡಲು ಆ ಪ್ರಶಸ್ತಿಯಿಂದ ಪೇಪರ್‍ ಟೀವಿಯಲ್ಲಿ ಆ ಸಿನಿಮಗಳ ಹೆಸರು ಕಂಡು ನೋಡಿದ್ದು.

  ಒಂದಿಷ್ಟು ಎಡಿಟ್ ಮಾಡಲಾಗಿದೆ- ಸಂ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: