ಹಳೆ ಕತೆಯಾದರೂ ಹೊಸ ವರಸೆ…

-ಬಸವರಾಜ ಕರುಗಲ್, ಕೊಪ್ಪಳ.

ರಾಜ್ಯದ ಪ್ರಸ್ತುತ ಸಚಿವರೊಬ್ಬರ ಸುಮಾರು ನಾಲ್ಕು ವರ್ಷಗಳ ಹಿಂದಿನ ನರ್ಸ್ ಜತೆಗಿನ ಸರಸ ಕತೆಗೆ ದುನಿಯಾ ವಿಜಿಯ ಅಭಿಮಾನಿಗಳಿಗೆ ಒಗ್ಗುವ ಉಪ್ಪು ಖಾರ ಬೆರೆಸಿ ಮಾಡಿರುವ ಮಸಾಲಾ ರೈಸ್‌ನ್ನು ನಿರ್ದೇಶಕ ಕೆ.ಮಾದೇಶ್ ಕರಿಚಿರತೆ ಚಿತ್ರದ ಮೂಲಕ ಉಣಬಡಿಸಿದ್ದಾರೆ. ಕತೆಯಲ್ಲಿ ಹೊಸತನ ಕಾಣದಿದ್ದರೂ ಕತೆಯನ್ನು ಹೆಣೆದಿರುವ ವರಸೆ ಖುಷಿ ನೀಡುತ್ತದೆ. ವಿಜಿ ಅಭಿಮಾನಿಗಳಿಗಂತೂ ಹಬ್ಬದೂಟ.

ಸುಶಿಕ್ಷಿತ ನಿರುದ್ಯೋಗಿ ಯುವಕ ಮಾದಾ ಸರಕಾರದ ಕೆಲಸಕ್ಕೆ ಜೋತು ಬೀಳದೆ ಕೈಗೆ ಸಿಕ್ಕ ಕೆಲಸ ಮಾಡಿಕೊಂಡು ಮೈಸೂರು ಪ್ಯಾಲೇಸ್ ಪಕ್ಕದಲ್ಲಿ ಮನೆ ಕಟ್ಟಬೇಕೆನ್ನುವ ಕನಸುಗಾರ.

ಪೋರ್ಕಿ ಹುಡುಗರನ್ನು ಸರಿ ದಾರಿಗೆ ತಂದು ಎಲ್ಲರಿಂದಲೂ ಬೇಷ್ ಎನಿಸಿಕೊಳ್ಳುವ ಜಗ ಮೆಚ್ಚಿದ ಮಗ. ಫುಲ್ ಮಾಡರ್ನ್ ನರ್ಸ್ ಭಾರತಿ, ಬೇಡವೆಂದರೂ ಮಾದನ ಬೆನ್ನು ಬಿದ್ದಾಕೆ. ಎಂಎಲ್‌ಎ ಆಕಾಂಕ್ಷಿ ಕೋಟೆ ಎನ್ನುವ ಹೆಣ್ಣುಬಾಕನ ರಾತ್ರಿ ಗೆಳತಿ ನರ್ಸ್ ರಾಜಲಕ್ಷ್ಮೀ ದಾನಿಗಳ ರಕ್ತವನ್ನು ಖಾಸಗಿ ಆಸ್ಪತ್ರೆಗೆ ಮಾರಾಟ ಮಾಡುತ್ತಿದ್ದಾಗ ಭಾರತಿ ಕೈಗೆ ಸಿಕ್ಕಿ ಬೀಳುತ್ತಾಳೆ.

ಭಾರತಿಯನ್ನು ಮುಗಿಸುವಂತೆ ಕೋಟೆಗೆ ತಾಕೀತು ಮಾಡುವ ರಾಜಲಕ್ಷ್ಮೀ, ಭಾರತಿಯನ್ನು ಮುಗಿಸದಿದ್ದರೆ ತನ್ನ ಜೊತೆ ಕೋಟೆಯ ಸರಸ-ಸಲ್ಲಾಪದ ಫೋಟೋಗಳನ್ನು ಮಾಧ್ಯಮಗಳಿಗೆ ಕೊಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾಳೆ. ಭಾರತಿಯನ್ನು ಕೊಲ್ಲಲು ಕೋಟೆ ತನ್ನ ಚೇಲಾಗಳನ್ನು ಚೂ ಬಿಟ್ಟಾಗ ಮಾದನ ಒದೆ ಹಾಗೂ ಮಾತಿನ ಗಧಾ ಪ್ರಹಾರದಿಂದ ಮಾನ ಕಳೆದುಕೊಳ್ಳುವ ಕೋಟೆ ಮಾದನ ವಿರುದ್ಧ ತಿರುಗಿ ಬೀಳುತ್ತಾನೆ. ಮಾದನ ಗೆಳೆಯರನ್ನು ಕೊಂದು ಮಾದನನ್ನು ಜೈಲಿಗೆ ಅಟ್ಟುತ್ತಾನೆ. ಇಲ್ಲಿಂದ ಕತೆಗೆ ಬೇರೆಯದೇ ತಿರುವು ಸಿಗುತ್ತದೆ.

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬರುವ ನಾಯಕ ಮಾದನನ್ನು ರೌಡಿಯಾಗಿಸಲು ನಿರ್ದೇಶಕರು ಪ್ರಯತ್ನಿಸುತ್ತಾರಾದರೂ ತಾಯಿ ಸೆಂಟಿಮೆಂಟಿನಿಂದ ಕತೆಗೆ ಹೊಸ ಹಾದಿ ಹುಡುಕುತ್ತಾರೆ. ಕೋಟೆಯ ಕಾಟಕ್ಕೆ ಮೊದಲ ನಾಯಕಿ ಊರು ಬಿಟ್ಟಿರುತ್ತಾಳೆ.

ಆದ್ದರಿಂದ ಮಾದನಿಗೆ ಶ್ರುತಿಯೊಂದಿಗೆ ಮದುವೆಯಾಗುತ್ತದೆ. ಹೊಸಜೀವನ ಕಂಡುಕೊಳ್ಳಬೇಕು ಎನ್ನುತ್ತಿದ್ದಂತೆ ಕೋಟೆಯ ಗ್ಯಾಂಗ್ ದಾಳಿ ಮಾಡಿ ನಾಯಕನ ಸ್ಮೃತಿಪಟಲ ಛಿದ್ರಗೊಳಿಸುತ್ತದೆ. ಇಲ್ಲಿಂದ ನಾಯಕನಿಗೆ ಹುಚ್ಚನ ಗೆಟಪ್ಪು. ಅಂತಿಮವಾಗಿ ದುಷ್ಟಸಂಹಾರ ಮಾಡುವ ನಾಯಕ ನ್ಯಾಯಾಲಯ ನೀಡುವ ಶಿಕ್ಷೆಯಿಂದ ಪಾರು. ಕೊನೆಗೆ ನಾನು ಮಾಡಿದ್ದು ಸರೀನಾ ಎಂದು ಪ್ರೇಕ್ಷಕರಿಗೆ ಪ್ರಶ್ನೆ ಕೇಳುವ ಮೂಲಕ ಶುಭಂ.

ಬ್ಲ್ಯಾಕ್‌ಕೋಬ್ರಾ ವಿಜಯ್ ಇನ್ನು ಮುಂದೆ ಕನ್ನಡ ಚಿತ್ರರಂಗದ ಚಿರತೆ ಎನಿಸಿಕೊಳ್ಳುವ ಇಮೇಜ್‌ನ್ನು ಕರಿಚಿರತೆ ಹುಟ್ಟುಹಾಕಿದೆ.

ಡ್ಯಾನ್ಸು, ಫೈಟು, ಕಾಮಿಡಿ, ಹರಿತ ಡೈಲಾಗ್ ಹೇಳುವುದರ ಜೊತೆಗೆ ಹುಚ್ಚನಾಗಿ ಅಭಿನಯಿಸಿರುವ ವಿಜಯ್ ಕತೆಯ ಎಲ್ಲ ಭಾರವನ್ನು ಸಹಿಸಿಕೊಂಡು ಗೆದ್ದಿದ್ದಾರೆ.

ಈವರೆಗಿನ ಎಲ್ಲ ಚಿತ್ರಗಳಲ್ಲಿ ಮಾಡರ್ನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಶರ್ಮಿಳಾ ಮಾಂಡ್ರೆ ಗೌರಮ್ಮನಾಗಿ, ಗೌರಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದ ಯಜ್ಞಾಶೆಟ್ಟಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲಾ ಬಹಳ ದಿನಗಳ ಬಳಿಕ ಎರಡು ಹಾಡುಗಳಿಗೆ ಉತ್ತಮ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ಸಂಭಾಷಣೆ ಬರೆದ ತುಷಾರ ರಂಗನಾಥರ ಪೆನ್ನಿನ ಇಂಕು ಇನ್ನೂ ಬತ್ತಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ವೀನಸ್ ಮೂರ್ತಿ ಕ್ಯಾಮರಾ ಕಣ್ಣು ಚಿತ್ರದ ಪ್ಲಸ್ ಪಾಯಿಂಟ್. ರಂಗಾಯಣ ರಘು, ಜೈಜಗದೀಶ್, ಮರೀನಾತಾರಾ ಮತ್ತಿತರ ಕಲಾವಿದರು ಪಾತ್ರಗಳಿಗೆ ತಕ್ಕಷತೆ ನಟಿಸಿದ್ದಾರೆ. ಕರಿಚಿರತೆಗೆ ಹಣ ಹಾಕಿದ ಕೃಷ್ಣಯ್ಯನವರು ಬಹಳ ಚಿಂತೆ ಮಾಡಬೇಕಿಲ್ಲ.

ನಿಮ್ಮ ಟಿಪ್ಪಣಿ ಬರೆಯಿರಿ