ನಾನು ಈ ಮೈಕಲ್ ಮೋರನ ತೊಂಬತ್ತರ ದಶಕದ ಟಿವಿ ಸೀರಿಯಲ್ ನೋಡಿ ಖುಷಿಸಿದ್ದು ನೆನಪಾಯಿತು. “ಮೈಕಲ್ ಮೋರ್‍ ಶೋ” ಎಂದೇ ಅದರ ಹೆಸರು. ವಾರ ವಾರವೂ ಸಾಮಾಜಿಕ ಅನ್ಯಾಯಗಳ ವಿರುದ್ಧ ದೊಡ್ಡ ಕಂಪನಿಗಳ ಎದುರು ನಿಲ್ಲುತ್ತಿದ್ದ. ಹಲವಾರು ನಾಟಕೀಯ ಪ್ರಸಂಗಗಳ ಮೂಲಕ ಆ ಕಂಪನಿಗೆ ತನ್ನ ತಪ್ಪನ್ನು ಎದುರುಗೊಳ್ಳುವಂತೆ ಮಾಡುತ್ತಿದ್ದ.

“ಬೌಲಿಂಗ್ ಫಾರ್‍ ಕಾಲಂಬೈನ್” ನನಗೆ ಅಷ್ಟೇನೂ ಇಷ್ಟವಾಗದ ಚಿತ್ರ. ಉದ್ರಿಕ್ತ ರಾಜಕೀಯ ಚರ್ಚೆಯ ಬಗ್ಗೆ ನನಗೆ ಯಾವಾಗಲೂ ಅನುಮಾನ. ಒಂದು ಕಾರಣ ಅದಾದರೆ, ಮತ್ತೊಂದು ಕಾರಣ ಚಾಮ್‌ಸ್ಕಿ ಮತ್ತು ಇನ್ನಿತರರನ್ನು ಓದಿದ್ದ ನನಗೆ ಅವನು ಹೊಸದೇನೂ ಹೇಳಿದಂತೆ ಅನಿಸಿರಲಿಲ್ಲ. “ಡಾಕ್ಯುಮೆಂಟರಿಗಳನ್ನು ಜನಪ್ರಿಯಗೊಳಿಸಿದ, ಅದೂ ಅಮೇರಿಕಾದಲ್ಲಿ” ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದನ್ನು ಹೀಗೆ ಮಾಡಬೇಕೆ ಎಂದು ಆಗ ಚಿಂತಿಸಿದ್ದೆ. ಅದೇ ಕಾರಣಕ್ಕೆ ಅವನ ಉಳಿದ ಯಾವುದೇ ಡಾಕ್ಯುಮೆಂಟರಿ ನೋಡಬೇಕು ಅನಿಸಿರಲಿಲ್ಲ. ಕ್ಯಾನ್‌ನಲ್ಲಿ ಪಾಮ್‌ ಡಿ’ಓರ್‍ ಪ್ರಶಸ್ತಿ ಪಡೆದ ‘ಫಾರನ್‌ಹೈಟ್ 9/11′ ಕೂಡ ನೋಡಬೇಕನಿಸಿಲ್ಲ.ಇರಲಿ.manufacturing_dissent.jpg

ಮೊನ್ನೆ “ಮ್ಯಾನುಫಾಕ್ಚರಿಂಗ್ ಡಿಸ್ಸೆಂಟ್” ಎಂಬ ಸಾಕ್ಷ್ಯಚಿತ್ರ ನೋಡಿದೆ. (ಚಾಮ್‌ಸ್ಕಿಯ “ಮ್ಯಾನುಫಾಕ್ಚರಿಂಗ್ ಕನ್ಸೆಂಟ್” ನಿಮಗೆ ನೆನಪಾಗಬಹುದು) ಒಂದು ರೀತಿಯಲ್ಲಿ ಈ ಸಾಕ್ಷ್ಯ ಚಿತ್ರ ನನ್ನನ್ನು ಚಿಂತೆಗೆ ಹಚ್ಚಿತು . ರಾಜಕೀಯ ಚರ್ಚೆ, ನಿರೂಪಣೆ, ವಿವರಣೆ (ಒಟ್ಟಾರೆ ಎಲ್ಲ ಡಿಸ್ಕೋರ್ಸ್) ಗಳ ಬಗ್ಗೆ ಮತ್ತೊಮ್ಮೆ ಚಿಂತಿಸುವಂತೆ ಮಾಡಿತು. ಇನ್ನೊಂದು ನೆಲೆಯಲ್ಲಿ ರಾಜಕೀಯದ ಬಗೆಗಿನ ನನ್ನ ಮೂಲ ನಿಲುವಿಗೆ ಬಲ ಸಿಕ್ಕಿದ ಸಮಾಧಾನವೂ ಆಯಿತು.

“ಮ್ಯಾನುಫಾಕ್ಚರಿಂಗ್ ಡಿಸ್ಸೆಂಟ್”ನ್ನು ಮಾಡಿದ ಮಹಿಳೆ ಕ್ಯಾನಡಾದ ಡೆಬ್ಬಿ ಮೆಲ್ನಿಕ್‌ ಮತ್ತು ಆಕೆಯ ಸಂಗಾತಿ ರಿಕ್ ಕೇನ್. ಚಿತ್ರದ ಒಟ್ಟಾರೆ ತಿರುಳು ಇಷ್ಟು. ಮೈಕಲ್ ಮೋರನನ್ನು, ಅವನ ಕೆಲಸದ ಕ್ರಮವನ್ನು ವಿವರಿಸುವುದು ಮತ್ತು ತೆರೆದಿಡುವುದು. ಅವನು ಹುಟ್ಟಿದ ಮಿಷಿಗನ್‌ನ ಫ್ಲಿಂಟ್ ಎಂಬ ಊರಿಗೆ ಹೋಗಿ ಅವನ ಗೆಳೆಯರನ್ನು ಮಾತಾಡಿಸಿವುದರಿಂದ ಇವರ ಚಿತ್ರ ಶುರುವಾಗುತ್ತದೆ. ಅಲ್ಲಿ ಮೈಕಲ್ ಮೋರ್‍ ಮಾಡಿದ “ರಾಜರ್‍ ಅಂಡ್ ಮಿ” ಎಂಬ ಸಾಕ್ಷ್ಯ ಚಿತ್ರದಲ್ಲಿ ಹೇಳಿರುವ ಸುಳ್ಳುಗಳನ್ನು, ಹೇಳದೇ ಬಿಟ್ಟ ಮುಖ್ಯ ಅಂಶಗಳನ್ನು, ತಿರುಚಿಟ್ಟ ವಾಸ್ತವಗಳನ್ನು ಒಂದಾದ ಮೇಲೆ ಒಂದಾಗಿ ತೆರೆದಿಟ್ಟಿದ್ದಾಳೆ. ಅವನಿಗಿಂತ ಮುಂಚೆಯೇ ಅಲ್ಲಿಯ ಜನರಲ್ ಮೋಟರ್‍ಸ್‌ನ ವಿರುದ್ಧ ಚಳುವಳಿ ನಡೆಸಿದವರನ್ನು ಆ ಚಿತ್ರದಲ್ಲಿ ತಂದೇ ಇಲ್ಲ. ಎಲ್ಲ ತನ್ನಿಂದಾಯಿತು ಎಂಬಂತೆ ಚಿತ್ರಿಸಿದ್ದಾನಂತೆ – ಹೀಗೆ ಮುಂದುವರಿಯುತ್ತದೆ.

ವಾಕ್‌ಸ್ವಾತಂತ್ಯ್ರದ ಬಗ್ಗೆ ತುಂಬಾ ಮಾತಾಡುವ ಮೈಕಲ್ ಮೋರ್‍ ತನ್ನ ಸಭೆಗಳಿಗೆ ಈ ಸಾಕ್ಷ್ಯಚಿತ್ರದ ತಂಡವನ್ನು ಬರದಂತೆ ನೋಡಿಕೊಂಡಿದ್ದ. ಕಡೆಯಲ್ಲಿ ಅವರನ್ನು ತನ್ನ ಒಂದು ಸಭೆಯಿಂದ ಹೊರತಳ್ಳಿಸಿದ್ದು ಅವನ ಪ್ರಾಮಣಿಕತೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ. ಮುಂದೆಯೂ ಈ ಸಾಕ್ಷ್ಯ ಚಿತ್ರ ಅವನ ಚಿತ್ರದ ಹತ್ತಾರು ನಿದರ್ಶನಗಳೊಂದಿಗೆ ಅವನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾ ಹೋಗುತ್ತದೆ. ಮೈಕಲ್ ಮೋರ್‍ ಮಾಡಿಕೊಂಡ ನೂರಾರು ಮಿಲಿಯನ್‌ ಡಾಲರ್‍ಗಳನ್ನು ಒಂದು ಫೌಂಡೇಶನ್ ಮೂಲಕ ಶೇರ್‍ಗಳಲ್ಲಿ – ಅದರಲ್ಲೂ ಅವನು ಸದಾ ಹೀಗಳೆದ, ಇರಾಕ್ ಸಮರದ ಮೂಲಕ ದುಡ್ಡು ಮಾಡಿದ ಹಾಲಿಬರ್ಟನ್ ಸಂಸ್ಥೆಯಲ್ಲೂ ಇಟ್ಟಿದ್ದಾನಂತೆ. ಇದು ಕಡೆಯಲ್ಲಿ ಗೊತ್ತಾದಾಗ ಅದು ಹುಬ್ಬೇರಿಸುವಂತ ವಿಷಯವಾಗುವುದೇ ಇಲ್ಲ!

ಹೊಸ ತಲೆಮಾರಿನ ಎಡ ಪಂಥೀಯರಿಗೆ ಇವನು ಆರಾಧ್ಯನಾಗಿಬಿಟ್ಟಿದ್ದ. ಹಾಗಾಗಿ ಅಮೇರಿಕಕ್ಕೆ ತಾನು ತುಂಬಾ ಮುಖ್ಯ ಅಂದುಕೊಂಡು ಬಿಟ್ಟ. ತನ್ನ “ಫ್ಯಾರನ್‌ಹೈಟ್ 9/11″ ಚಿತ್ರದ ಮೂಲಕ ಬುಷನ್ನು ಸೋಲಿಸಬಲ್ಲೆ ಎಂದು ಇವನು ನಿಜವಾಗಿಯೂ ನಂಬಿದ್ದನಂತೆ. ಆದರೆ ಇವನಿಂದ ಬುಷ್‌ಗೆ ಸಹಾಯವಾಗಿರಬಹುದು ಎಂಬ ಮಾತೂ ಇದೆ. ಅದಿರಲಿ, ಬುಷ್‌ನ ಸುಳ್ಳುಗಳನ್ನು ನಂಬಿದ ಅಮೇರಿಕಾದ ಜನತೆ ಮೈಕಲ್ ಮೋರ್‌ನನ್ನೂ ಸಂಭ್ರಮಿಸಿದ್ದು ಏನನ್ನು ಹೇಳುತ್ತದೆ? ಎಷ್ಟೇ ಪ್ರಭಾವಿಯಾದರೂ ರಾಜಕೀಯ ಬದಲಾವಣೆ ಒಬ್ಬನಿಂದ ಆದೀತೆ? ಬುಷ್ ಕೂಡ ಅಮೇರಿಕೆಯ ಚರಿತ್ರೆಯಲ್ಲಿ ವಿಶಿಷ್ಟನಾಗಿಲ್ಲದೇ ಇರಬಹುದು ಅಲ್ಲವೆ? ಈ ಪ್ರಶ್ನೆಗಳ ಬಗ್ಗೆ ಯೋಚಿಸಿದಾಗ, ಯಾವುದೇ ರಾಜಕೀಯ ಆಚರಣೆಯೂ ಬದಲಾವಣೆಯೂ, ಸಮುದಾಯದ ಬೇರುಗಳಲ್ಲೇ ಸಾಕಾರಗೊಳ್ಳಬೇಕು. ಅದಿಲ್ಲದೆ ಹೊರಗಿಂದ, ಮೇಲಿಂದ, ತರಲು ಆಗದು ಎಂಬ ನನ್ನ ಮೂಲ ನಿಲುವು ಒಂದು ರೀತಿಯಲ್ಲಿ ಗಟ್ಟಿಯಾಯಿತು.

ಇದು ಅಮೇರಿಕಾದಲ್ಲಾಗಬಹುದು, ಭಾರತದಲ್ಲಾಗಬಹುದು ಅಥವಾ ಇನ್ನಾವುದೇ ದೇಶದಲ್ಲಾಗಬಹುದು.