ಹೆಂಗಿದಿಯ ‘ಪಾ’?

-ಸುಘೋಷ್ ಎಸ್. ನಿಗಳೆ

ಚಿತ್ರರಂಗದವರ ಬಾಯಿಯಲ್ಲಿ ಬಳಕೆಯಾಗಿ ಸವೆದುಹೋಗಿರುವ ಒಂದೇ ಒಂದು ಶಬ್ದ ‘ಡಿಫರೆಂಟ್’. “ಒಂಥರಾ ಡಿಫರೆಂಟ್ ಫಿಲ್ಮ್” ಎಂದು ಹೇಳಿಕೊಂಡೇ ಸವಕಲು ಚಿತ್ರವನ್ನು ಮುಂದಿಡುವುದು ಬಾಲಿವುಡ್ಡಿಗೂ ಹೊಸದೇನಲ್ಲ. ‘ಡಿಫರೆಂಟ್’ ಮಾಡಬೇಕೆಂಬ ಹುಮ್ಮಸ್ಸಿನಲ್ಲಿ ಚಿತ್ರ-ವಿಚಿತ್ರವನ್ನು ಪರದೆಯ ಮೇಲೆ ತೋರಿಸುವ ನಿರ್ದೇಶಕರು ಒಂದೆಡೆಯಾದರೆ, ಅದ್ಭುತ ಕಾನ್ಸೆಪ್ಟ್ ಗಳನ್ನು ಅಷ್ಟೇ ಅದ್ಭುತವಾಗಿ ಕುಲಗೆಡಿಸುವವರದು ಮತ್ತೊಂದು ಪಡೆ.

ಆದರೆ, ತಂದೆ – ಮಗ – ತಾಯಿಯ ಸಂಬಂಧ ಹಾಗೂ ಪ್ರೊಜೇರಿಯಾ ಎಂಬ ಕಾಯಿಲೆಯಂತಹ ವಿಷಯ ವಸ್ತುವನ್ನು ಇಟ್ಟುಕೊಂಡು ಈ ರೀತಿಯಾದ ಪ್ರಯೋಗವನ್ನು ಯಾರೂ ಮಾಡಿರಲಿಕ್ಕಿಲ್ಲ. ತಂದೆ –ಮಗ – ಮಗ – ತಂದೆಯಾಗಿ ಮಾಡಿರುವ ಈ ಚಿತ್ರ ಹಲವು ಕಾರಣಗಳಿಗೆ ವಾಹ್ ಎನಿಸಿಕೊಳ್ಳುತ್ತದೆ. ಅಜ್ಜ(?)ನೊಬ್ಬ ವಿಚಿತ್ರ (?) ಮೇಕಪ್ಪಿನೊಂದಿಗೆ ಹದಿಮೂರು ವರ್ಷದ ಹುಡುಗನ ಪಾತ್ರವನ್ನು ಮಾಡುವುದು, ನಟನೊಬ್ಬನಿಗೆ ಸವಾಲೇ ಸರಿ. ಅಂತಹ ಸವಾಲನ್ನು ಎದುರು ಹಾಕಿಕೊಳ್ಳುವ ಛಾತಿಯುಳ್ಳವರು ಬಹಳಷ್ಟು ಕಡಿಮೆ. ಎದುರುಹಾಕಿಕೊಂಡರೂ ನಟಿಸಿ ಸೈ ಎನ್ನಿಸಿಕೊಳ್ಳುವವರು ಮತ್ತೂ ಕಡಿಮೆ. ನಟನೊಬ್ಬ ತನ್ನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ಮಾಡಿರುವ ಚಿತ್ರಗಳು (ಚಾಚಿ 420, ದಶಾವತಾರಮ್ ಥರದವು) ಇವೆಯಾದರೂ, ‘ಪಾ’ ದಂತಹ ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವುದು ಅಮಿತಾಭ್ ಹೆಗ್ಗಳಿಕೆ.

ಚಿತ್ರದಲ್ಲಿ ಅಮಿತಾಭ್ ತಮ್ಮ ನಟನೆಯ ಮೂಲಕ ಇಡೀ ಚಿತ್ರದಲ್ಲಿ ಹೇಗೆ ಆವರಿಸಿಕೊಂಡುಬಿಟ್ಟಿದ್ದಾರೆಂದರೆ ಒಂದು ಹಂತದಲ್ಲಿ ಅಭಿಷೇಕ್, ವಿದ್ಯಾ ಬಾಲನ್ ಹಾಗೂ ಅರುಂದತಿ ನಾಗ್ ಸೆಕೆಂಡರಿ ಎನಿಸಿಬಿಡುತ್ತಾರೆ. ಓರೋ ತನ್ನ ಅಜ್ಜಿಯೊಡನೆ ಶಾಪಿಂಗ್ ಹೋದಾಗ, ಮನೆಯಲ್ಲಿ ಕಂಪ್ಯೂಟರ್ ಎದುರು ಕುಳಿತಾಗ, ಗೆಳೆಯನೊಂದಿಗೆ ಫೋನ್ ನಲ್ಲಿ ಮಾತಾಡುವಾಗ, ರಾಷ್ಟ್ರಪತಿ ಭವನವನ್ನು ಪ್ರವೇಶಿಸುವಾಗ, ಆಸ್ಪತ್ರೆಯಲ್ಲಿ ಮಲಗಿ ತನ್ನ ಅಜ್ಜನನ್ನು ಸಂಧಿಸುವಾಗ ಮೂಡಿಬಂದಿರುವ ಡೈಲಾಗ್ ಹಾಗೂ ಬಾಡಿ ಲ್ಯಾಂಗ್ವೇಜ್ ಗಳು ಇಡೀ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿವೆ. ಹಿಚಕಿ (ಬಿಕ್ಕಳಿಸುವಿಕೆ) ಯನ್ನು ಹೇಗೆಲ್ಲ ಚಿತ್ರಿಸಬಹುದು ಎಂಬುದನ್ನು ಪಾ ನೋಡಿಯೇ ತಿಳಿಯಬೇಕು. ಬಿಳಿ ಗ್ಲೋಬ್ ನ ಪರಿಕಲ್ಪನೆ ಹಾಗೂ ಅದಕ್ಕೆ ಅಭಿಷೇಕ್ ನ ವಿವರಣೆ ಮಸ್ತ್ ಮಸ್ತ್.

ಅಮಿತಾಭ್, ಹದಿಮೂರು ವರ್ಷದ ಓರೋ ಆಗಿ ಶೂಟಿಂಗ್ ಗೆ ಎಂದು ಆಡಿಟೋರಿಯಂಗೆ ಬಂದಾಗ ಅಲ್ಲಿದ್ದ ಸುಮಾರು 300 ಮಕ್ಕಳಿಗೆ, ಅಮಿತಾಭ್ ರನ್ನು ಗುರುತಿಸಲು ಸಾಧ್ಯವಾಗಲಿಲ್ಲವಂತೆ. ಅದು ಮಕ್ಕಳ ವಿಷಯವಾಯ್ತು ಬಿಡಿ. ಆದರೆ ಚಿತ್ರದ ಆರಂಭದಿಂದ ಕೊನೆವರೆಗೂ ನಿಜವಾದ ಅಮಿತಾಭ್ ನನ್ನು ಓರೋನ ಹತ್ತಿರಕ್ಕೂ ಬಿಟ್ಟಕೊಳ್ಳದೇ ಇದ್ದುದು ಅಮಿತಾಭ್ ನ ನಟನಾ ಸಾಮರ್ಥ್ಯಕ್ಕೇ ಸಾಕ್ಷಿಯಲ್ಲವೆ?

ನಿಮ್ಮ ಟಿಪ್ಪಣಿ ಬರೆಯಿರಿ